ಜ. 25: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕನ್ನಡಿಗ ಪೊಲೀಸ್ ಅಧಿಕಾರಿಗಳಿಗೆ ನಿಯಮಬದ್ಧವಾಗಿ ಮಂಜೂರಾಗಿರುವ ಹುದ್ದೆಗಳನ್ನು ಕನ್ನಡೇತರರಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಧಾರೆ ಎರೆದಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ನಿಯಮಗಳನ್ನು ಗಾಳಿಗೆ ತೂರಿ ನಾನ್ ಐಪಿಎಸ್ ನವರಿಗೆ ಮೀಸಲಿಟ್ಟಿರುವ ಎಸ್‌ಪಿ/ಡಿಸಿಪಿ ಹುದ್ದೆಗಳಿಗೆ ಐಪಿಎಸ್ ಅಧಿಕಾರಿಗಳನ್ನು ಕೂರಿಸಿ ಕನ್ನಡ ವಿರೋಧಿ ನೀತಿ ಅನುಸರಿಸಿರುವ ಆರೋಪ ಕೇಳಿ ಬಂದಿದೆ.
ನಾನ್ ಐಪಿಎಸ್ ಅಧಿಕಾರಿಗಳಿಗೆ ಮಂಜೂರಾಗಿರುವ ಎಸ್‌ಪಿ/ಡಿಸಿಪಿ ಹುದ್ದೆಗಳಿಗೆ ನೇರ ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸಿದ್ದಾರೆ. ಇದರಿಂದಾಗಿ ದಶಕಗಳ ಕಾಲ ದುಡಿದರೂ ಸಮಯಕ್ಕೆ ಸರಿಯಾಗಿ ಬಡ್ತಿ ಪಡೆಯಲಾಗದೇ ಡಿವೈಎಸ್‌ಪಿಗಳು, ಅಡಿಷನಲ್ ಎಸ್‌ಪಿಗಳು ನಿವೃತ್ತಿಯಾಗಿ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಿಇಬಿ ಮುಖ್ಯಸ್ಥರಾಗಿರುವ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರ ಈ ನಡೆಗೆ ಪೊಲೀಸ್ ವಲಯದಲ್ಲಿ ಭಾರೀ ಅಸಮಾಧಾನ ಸ್ಫೋಟಗೊಂಡಿದೆ. ಎಂಇಎಸ್ ಪುಂಡರು ಕೇವಲ ಬೆಳಗಾವಿಯಲ್ಲಿ ಮಾತ್ರ ಕನ್ನಡಿಗರ ಮೇಲೆ ದಾಳಿ ಮಾಡುತ್ತಿದ್ದಾರೆ. ಹಾಲಿ ಡಿಜಿಪಿ ಇಡೀ ಕರ್ನಾಟಕದೆಲ್ಲೆಡೆ ಕನ್ನಡಿಗರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂಬ ಮಾತುಗಳು ಪೊಲೀಸ್ ಇಲಾಖೆಯಲ್ಲಿ ಕೇಳಿ ಬರುತ್ತಿವೆ.
ಏನಿದು ಮಹಾ ದ್ರೋಹ
ಕರ್ನಾಟಕ ಪೊಲೀಸ್ ನಿಯಮಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಡಿಸಿಪಿ ಎಸ್‌ಪಿ ದರ್ಜೆಯ 57 ಹುದ್ದೆಗಳಿಗೆ ಮಾತ್ರ ನೇರವಾಗಿ ಐಪಿಎಸ್ ಮಾಡಿದ ಅಧಿಕಾರಿಗಳನ್ನು ನಿಯೋಜಿಸಬೇಕು.
ಉಳಿಕೆ (ಬಲದ ಆಧಾರದ ಮೇಲೆ ಮಂಜೂರಾತಿ) 109 ಡಿಸಿಪಿ, ಎಸ್‌ಪಿ ದರ್ಜೆ ಹುದ್ದೆಗಳಿಗೆ ನಾನ್ ಐಪಿಎಸ್ ಕನ್ನಡಿಗ ಅಧಿಕಾರಿಗಳನ್ನು ನಿಯೋಜಿಸಬೇಕು. (ಪಿಎಸ್‌ಐ, ಇನ್‌ಸ್ಪೆಕ್ಟರ್, ಡಿವೈಎಸ್‌ಪಿಯಾಗಿ ಸೇವೆ (ಡೈರೆಕ್ಟ್ ಡಿವೈಎಸ್‌ಪಿ ಒಳಗೊಂಡು) ಸಲ್ಲಿಸಿ ಬಡ್ತಿ ಪಡೆದವರು) ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ, 57 ಹುದ್ದೆಗಳಿಗೆ ಬದಲಾಗಿ 130 ಆಯಕಟ್ಟಿನ ಡಿಸಿಪಿ/ಎಸ್‌ಪಿ ಹುದ್ದೆಗಳಿಗೆ ಡೈರೆಕ್ಟ್ ಐಪಿಎಸ್ ಅಧಿಕಾರಿಗಳನ್ನು ಕೂರಿಸಿದ್ದಾರೆ.
ಖಾಲಿಯಿದ್ದ 84 ನಾನ್ ಐಪಿಎಸ್ ಹುದ್ದೆ
ಕನ್ನಡಿಗರಿಗೆ ಸಿಗಬೇಕಾದ ಹುದ್ದೆಗಳನ್ನು ಕಬಳಿಸಿ ಶೇ. 80 ರಷ್ಟು ಹುದ್ದೆಗಳಲ್ಲಿ ಐಪಿಎಸ್ ಅಧಿಕಾರಿಗಳಿಗೆ ಧಾರೆ ಎರೆದಿದ್ದಾರೆ. ಈ ಮೂಲಕ ಖಾಲಿಯಿದ್ದ 84 ನಾನ್ ಐಪಿಎಸ್ ಹುದ್ದೆಗಳನ್ನು 54 ಕ್ಕೆ ಇಳಿಸಿದ್ದಾರೆ. ಅವನ್ನೂ ತುಂಬದೇ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ನಾನ್ ಐಪಿಎಸ್‌ನವರಿಗೆ ಮಂಜೂರಾಗಿರುವ 109 ಹುದ್ದೆಗಳಿಗೆ ನೇರ ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸಿದ್ದರಿಂದ ಆಗಿರುವ ಅನ್ಯಾಯದ ಬಗ್ಗೆ ಸರಿ ಪಡಿಸಲು ಕನ್ನಡಿಗ ಅಧಿಕಾರಿಗಳ ಕಷ್ಟ ಕೇಳುವ ಗೋಜಿಗೂ ಹೋಗಿಲ್ಲ.
ಗೃಹ ಮಂತ್ರಿ ಮಾತಿಗೆ ಬೆಲೆ ಇಲ್ಲ; ಬೊಮ್ಮಾಯಿಗೆ ಅರಿವೇ ಇಲ್ಲ
ಕನ್ನಡಿಗ ಪೊಲೀಸ್ ಅಧಿಕಾರಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವರಿಕೆ ಮಾಡಿಕೊಟ್ಟರೂ ಏನೂ ಪ್ರಯೋಜನವಾಗಲಿಲ್ಲ. ಯಾಕೆಂದರೆ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇದ್ದಂತೆ ಕಾಣುತ್ತಿಲ್ಲ. ಈ ಹಿಂದೆ ಗೃಹ ಸಚಿವರಾಗಿ ಪೊಲೀಸ್ ಬಂಧ ಬೆಳೆಸಿಕೊಂಡಿರುವ ಹಾಲಿ ಸಿಎಂ ಬಸವರಾಜ ಬೊಮ್ಮಾಯಿಗೆ ಈ ವಿಷಯ ಅರ್ಥವೇ ಆಗಿಲ್ಲ.
ಅರ್ಥ ಆದ್ರೂ ಪೊಲೀಸ್ ಮಹಾ ನಿರ್ದೇಶಕರನ್ನು ಕೇಳಿ ಆಗಿರುವ ಅನ್ಯಾಯ ಸರಿಪಡಿಸುವ ಗೋಜಿಗೆ ಹೋದಂತೆ ಕಾಣುತ್ತಿಲ್ಲ. ಹೀಗಾಗಿ ಕನ್ನಡಿಗ ಅಧಿಕಾರಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ನ್ಯಾಯಾಲಯದ ಕದ ತಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ.
ಕರ್ನಾಟಕ ಪೊಲೀಸ್ ಸಂಘದಿಂದ ಮನವಿ
ನಾನ್ ಐಪಿಎಸ್ ಎಸ್ಪಿ ಹಾಗೂ ಡಿಸಿಪಿ ಹುದ್ದೆಗಳನ್ನು ನಾನ್ ಐಪಿಎಸ್ ಅಧಿಕಾರಿಗಳಿಗೆ ನೀಡದೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮಾಡಿರುವ ಎಡವಟ್ಟಿನ ಬಗ್ಗೆ ಕರ್ನಾಟಕ ಪೊಲೀಸ್ ಸಂಘ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ನೀಡಿದೆ.
ಭಾರತ ಸರ್ಕಾರದ ಅಧಿಸೂಚನೆ ಸಂಖ್ಯೆ 11052/08/2015 ಎಐಎಸ್ 11 ಹಾಗೂ ಕರ್ನಾಟಕ ಸರ್ಕಾರ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ/106/ಸೆನೆನಿ/21 ರ ಆದೇಶದಂತೆ ರಾಜ್ಯಕ್ಕೆ 57 ಐಪಿಎಸ್ ( ನೇರ) ಎಸ್ಪಿ/ಡಿಸಿಪಿ ಹುದ್ದೆಗಳು ಮಂಜೂರಾಗಿದ್ದು, ಅದೇ ರೀತಿ 109 ಹುದ್ದೆಗಳು ನಾನ್ ಐಪಿಎಸ್ ಅಧಿಕಾರಿಗಳಿಗೆ (ಕನ್ನಡಿಗ ಅಧಿಕಾರಿಗಳು) ಮಂಜೂರಾಗಿರುತ್ತವೆ.
ಮಂಜೂರಾತಿ ಬಲದ ಆಧಾರದ ಮೇಲೆ ಹುದ್ದೆಗಳನ್ನ ನೀಡಬೇಕು. ಅದಲು – ಬದಲು ಮಾಡುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಕನ್ನಡಿಗ ನಾನ್ ಐಪಿಎಸ್ ಅಧಿಕಾರಿಗಳಿಗೆ ದ್ರೋಹ
ನಾನ್ ಐಪಿಎಸ್ ಎಸ್ಪಿ/ಡಿಸಿಪಿ ಹುದ್ದೆಗಳು ಮುಂಬಡ್ತಿ ಹುದ್ದೆಗಳಾಗದ್ದು, ಆ ಹುದ್ದೆಗಳಿಗೆ ಅರ್ಹರು ಇದ್ದರೂ, ಮುಂಬಡ್ತಿ ನೀಡದೇ ನೇರ ನೇಮಕಾತಿ ಹೊಂದಿದ ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸ್ಥಳೀಯ ಕನ್ನಡಿಗ ನಾನ್ ಐಪಿಎಸ್ ಅಧಿಕಾರಿಗಳಿಗೆ ದ್ರೋಹ ಮಾಡಲಾಗಿದೆ.
ಉಲ್ಲೇಖಿತ ನಿಯಮದ ಪ್ರಕಾರ, ಐಪಿಎಸ್ ವೃಂದದ 57 ಎಸ್‌ಪಿ/ಡಿಸಿಪಿ ಹುದ್ದೆಗಳನ್ನು ಹೊರತ ಪಡಿಸಿ 109 ನಾನ್ ಐಪಿಎಸ್ ಎಸ್ಪಿ/ಡಿಸಿಪಿ ಹುದ್ದೆಗಳಿಗೆ ತಕ್ಷಣ ಬಡ್ತಿ ಆಧಾರಿತ ನಾನ್ ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸಬೇಕು.
ಸುಮಾರು 54 ನಾನ್ ಐಪಿಎಸ್ ಹುದ್ದೆಗಳು ಖಾಲಿಯಿದ್ದರೂ ಅದಕ್ಕೆ ಸ್ಥಳೀಯರನ್ನು ಭರ್ತಿ ಮಾಡಿದೇ ನೇರ ಐಪಿಎಸ್ ಅಧಿಕಾರಿಗಳನ್ನು ನಿಯಮಬಾಹಿರವಾಗಿ ನಿಯೋಜಿಸಲಾಗಿದೆ. ಇದರಲ್ಲಿ ಆಗಿರುವ ಅನ್ಯಾಯವನ್ನು ಹದಿನೈದು ದಿನದಲ್ಲಿ ಸರಿಪಡಿಸುವಂತೆ ಮನವಿ ಮಾಡಲಾಗಿದೆ.
ಸರ್ಕಾರಕ್ಕೆ ಹೊಡೆತ ಗ್ಯಾರಂಟಿ
ಸರ್ಕಾರದ ಆಡಳಿತ ನೀತಿ ಜನರಿಗೆ ನೇರವಾಗಿ ಗೊತ್ತಾಗುವುದು ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆ ಮೂಲಕ. ಪ್ರತಿ ನಿತ್ಯ ಜನ ಸಾಮನ್ಯರೊಂದಿಗೆ ಕೆಲಸ ಮಾಡುವ ಇಲಾಖೆಗಳು ಇವು. ರಾಜ್ಯದಲ್ಲಿ ಜನರೊಂದಿಗೆ ನೇರ ಸಂಪರ್ಕ ಹೊಂದಿರುವ ಬಹುದೊಡ್ಡ ಜಾಲ ಇರುವ ಇಲಾಖೆಗಳು.
ಇಲ್ಲಿ ಅಧಿಕಾರಿಗಳಿಗೆ ಅನ್ಯಾಯವಾದರೆ, ಇದರ ಫಲಿತಾಂಶ ಮುಂದಿನ ಚುನಾವಣೆ ಮೇಲೆ ಪರಿಣಾಮ ಬೀಳುತ್ತದೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಸಮರ್ಥ ಆಡಳಿತ ನೀಡಿದರೂ, ಮಾಜಿ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರ ಮಧ್ಯ ಪ್ರವೇಶದಿಂದ ಪೊಲೀಸ್ ಇಲಾಖೆಯಲ್ಲಿ ಇದೇ ರೀತಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಲಿಂಗಾಯುತ ಮತ್ತು ಒಕ್ಕಲಿಗ ಸಮುದಾಯದ ಅಧಿಕಾರಿಗಳು ಮೂಲೆಗುಂಪಾಗಿದ್ದರು.
ಇದೀಗ ಕನ್ನಡಿಗ ಪೊಲೀಸ್ ಅಧಿಕಾರಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸದೇ ಹೋದಲ್ಲಿ ಮುಂದಿನ ಚುನಾವಣೆಯಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ದೊಟ್ಟ ಪೆಟ್ಟು ಬಿದ್ದರೂ ಅಚ್ಚರಿ ಪಡಬೇಕಿಲ್ಲ ಎಂಬ ಮಾತು ಚರ್ಚೆಗೆ ನಾಂದಿ ಹಾಡಿದೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕನ್ನಡ ವಿರೋಧಿ ನೀತಿಯಿಂದಾಗಿ ಕನ್ನಡಿಗ ಅಧಿಕಾರಿಗಳು ಅನ್ಯಾಯಕ್ಕೆ ಒಳಗಾಗಿದ್ದು, ಚುನಾವಣೆ ಹೊಸ್ತಿನಲ್ಲಿ ಇದನ್ನು ಸರಿ ಪಡಿಸುತ್ತಾ? ಇಲ್ಲವೇ ಪೊಲೀಸ್ ಇಲಾಖೆಯ ವಿರೋಧದ ಬಿಸಿ ಎದುರಿಸಲಿದೆಯಾ ಕಾದು ನೋಡಬೇಕು.