ರಾಹುಲ್ ಗಾಂಧಿ, ಸಿದ್ದರಾಮಯ್ಯ ಮಾತುಕತೆ: ಹನಿಟ್ರ್ಯಾಪ್ ಬಗ್ಗೆ ಸುದೀರ್ಘ ಚರ್ಚೆ

ನವದೆಹಲಿ

    ಸಿಎಂ ಸಿದ್ದರಾಮಯ್ಯ  ದೆಹಲಿ ಭೇಟಿ ರಾಜ್ಯ ಕಾಂಗ್ರೆಸ್​ನಲ್ಲಿ  ಭಾರಿ ಸಂಚಲನ ಸೃಷ್ಟಿಸಿದೆ. 3 ದಿನಗಳ ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಗುರುವಾರ ರಾಹುಲ್ ಗಾಂಧಿ , ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಮೊದಲು ಸೋನಿಯಾ ಗಾಂಧಿ ನಿವಾಸದಲ್ಲಿ ರಾಹುಲ್ ಗಾಂಧಿ ಅವರನ್ನು ಸಿದ್ದರಾಮಯ್ಯ ಭೇಟಿಯಾದರು.

    ಸುಮಾರು 30 ನಿಮಿಷಗಳ ಮಾತುಕತೆ ನಡೆಸಿದರು. ರಾಜ್ಯದಲ್ಲಿ ಹಲ್​ಚಲ್ ಎಬ್ಬಿಸಿರುವ ಹನಿಟ್ರ್ಯಾಪ್ ವಿಚಾರವಾಗಿಯೂ ರಾಹುಲ್-ಸಿದ್ದರಾಮಯ್ಯ ನಡುವೆ ಚರ್ಚೆ ನಡೆದಿದೆ. ಈ ವೇಳೆ ಹನಿಟ್ರ್ಯಾಪ್‌ ವಿಚಾರವಾಗಿ ರಾಹುಲ್ ಗಾಂಧಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಪಕ್ಷದ ನಾಯಕರ ಮೇಲೆ ಆರೋಪಗಳಿದ್ದರೆ ಅದನ್ನು ಪಕ್ಷದ ಆಂತರಿಕ ವೇದಿಕೆಯಲ್ಲಿ ಚರ್ಚಿಸಬಹುದಿತ್ತು ಎಂದು ರಾಹುಲ್ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. 

    ರಾಹುಲ್ ಗಾಂಧಿ ಮಾತ್ರವಲ್ಲದೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನೂ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ. ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಚಾರವೂ ಮುನ್ನೆಲೆಗೆ ಬಂದಿದೆ. ಅಧ್ಯಕ್ಷ ಸ್ಥಾನದ ರೇಸ್​ನಲ್ಲಿರುವ ಸಚಿವ ಈಶ್ವರ್ ಖಂಡ್ರೆ ದೆಹಲಿಗೆ ತೆರಳಿದ್ದಾರೆ.

   ಇನ್ನು, ಪರಿಷತ್ ನಾಮನಿರ್ದೇಶನ ಅಭ್ಯರ್ಥಿಗಳ ಪಟ್ಟಿಯನ್ನು ಸಿಎಂ ಸಿದ್ದರಾಮಯ್ಯ ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ. ಈ ಬಗ್ಗೆ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್ ಹಾಗೂ ಸುರ್ಜೇವಾಲ ಜೊತೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ. ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಆದರೂ ಸದ್ಯಕ್ಕೆ ಬೇಡ ಎಂದು ಹೈಕಮಾಂಡ್ ಹೇಳಿದೆ ಎನ್ನಲಾಗುತ್ತಿದೆ. ಮುಂದಿನ 2 ತಿಂಗಳಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ದೆಹಲಿಗೆ ಭೇಟಿ ಕೊಟ್ಟು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿಗೆ ಭೇಟಿ ನೀಡುತ್ತಿರುವ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಹನಿಟ್ರ್ಯಾಪ್, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಸೇರಿದಂತೆ ವಿವಿಧ ವಿಚಾರಗಳು ಚರ್ಚೆಯಲ್ಲಿರುವಾಗಲೇ ಮುಖ್ಯಮಂತ್ರಿಗಳು ದೆಹಲಿಗೆ ದೌಡಾಯಿಸಿದ್ದು ಕುತೂಹಲಕ್ಕೂ ಕಾರಣವಾಗಿತ್ತು.