ತುಮಕೂರು:
ಕರ್ನಾಟಕ ಸರಕಾರ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಫೆಬ್ರವರಿ 14 ರ ಸೋಮವಾರ ಬೆಳಗ್ಗೆ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ವಿಧಾನ ಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದಪಟೇಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೇಂದ್ರ ಸರಕಾರ ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳನ್ನು ರೈತರ 11 ತಿಂಗಳ ನಿರಂತರ ಹೋರಾಟಕ್ಕೆ ಮಣಿದು ವಾಪಸ್ ಪಡೆದಿದೆ.ಆದರೆ ರಾಜ್ಯ ಸರಕಾರ ಮಾತ್ರ, ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ಮೀನಾಮೇಷ ಎಣಿಸುತ್ತಿದೆ.ಸರಕಾರದ ಧೋರಣೆ ವಿರುದ್ದ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ರೈತ ವಿರೋಧಿ ಕಾಯ್ದೆಗಳ ವಾಪಸ್ ಪಡೆಯುವ ನಿಟ್ಟಿನಲ್ಲಿ ಕಾನೂನು ಸಚಿವರು ಉದ್ಘಟತನದ ಹೇಳಿಕೆ ನೀಡುತ್ತಿದ್ದಾರೆ. ಇದು ಸರಿಯಾದ ನಡವಳಿಕೆಯಲ್ಲ.ಇದನ್ನು ನೋಡಿದರೆ ಕೇಂದ್ರ ಸರಕಾರ ಮತ್ತೊಮ್ಮೆ ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಹುನ್ನಾರ ನಡೆಸುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ.
ಬೆಳಗಾಂ ಅಧಿವೇಶನದಲ್ಲಿ ಮುಖ್ಯಮಂತ್ರಿಯವರ ಫೆಬ್ರವರಿಯಲ್ಲಿ ನಡೆಯುವ ಅಧಿವೇಶನದಲ್ಲಿ ವಾಪಸ್ ಪಡೆಯುವ ಭರಸವೆ ನೀಡಿದ್ದರು.ಆದರೆ ಅಧಿವೇಶನದ ಅಜೆಂಡದಲ್ಲಿ ಕೃಷಿ ಕಾಯ್ದೆಗಳ ಬಗ್ಗೆ ಪ್ರಸ್ತಾಪಿಸಿಲ್ಲ. ಹಾಗಾಗಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಸರಕಾರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಕೇಂದ್ರ ಆರಂಭಿಸಿದ್ದರೂ, ಹಲವು ಗೊಂದಲಗಳು ಮುಂದುವರೆದಿವೆ.
ಕೇವಲ 15 ಕ್ವಿಂಟಾಲ್ ರಾಗಿ ಖರೀದಿಗೆ ಮಾತ್ರ ಸಿಮೀತಗೊಳಿಸಲಾಗಿದೆ.ಮೂರು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರ ರಾಗಿ ಖರೀದಿ ಮಾಡುತ್ತಿಲ್ಲ. ಹೀಗೆ ರೈತರನ್ನು ವಿಂಗಡಿಸುವುದು ಸರಿಯಲ್ಲ. ಇದು ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರವಾಗಿದೆ. ಹಾಗಾಗಿ ರೈತರು ಬೆಳೆದ ಅಷ್ಟು ರಾಗಿಯನ್ನು ಕೊಳ್ಳಬೇಕೆಂಬುದು ರೈತ ಸಂಘದ ಆಗ್ರಹವಾಗಿದೆ ಎಂದು ಆನಂದಪಟೇಲ್ ತಿಳಿಸಿದರು.
ಹೈನುಗಾರರು ಹೆಚ್ಚು ಸಂಕಷ್ಟದಲ್ಲಿದ್ದಾರೆ.ಗ್ರಾಹಕರಿಗೆ ಪ್ರತಿ ಲೀಟರ್‍ಗೆ 45 ರೂ ಪಡೆಯುತ್ತಿದ್ದಾರೆ.ಆದರೆ ಹೈನುಗಾರರಿಗೆ ಒಂದು ಲೀಟರ್‍ಗೆ 25 ರೂ ನೀಡಲಾಗುತ್ತಿದೆ. ಕನಿಷ್ಠ 35 ರೂ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ. ಹಾಗೆಯೇ ರಾಸುಗಳಿಗೆ ನೀಡುವ ಹಿಂಡಿ, ಬೂಸಾ ಬೆಲೆಯನ್ನು ಕಡಿತಗೊಳಿಸಬೇಕೆಂಬುದು ರೈತ ಸಂಘದ ಆಗ್ರಹವಾಗಿದೆ ಎಂದು ಆನಂದ ಪಟೇಲ್ ತಿಳಿಸಿದರು.
ಹಸಿರು ಸೇನೆ ಮತ್ತು ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಧನಂಜಯ್ ಆರಾಧ್ಯ ಮಾತನಾಡಿ, ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಆನಾವೃಷ್ಟಿಯಿಂದ ಸಾಕಷ್ಟು ಬೆಲೆ ಹಾನಿಯಾಗಿದೆ.ಆದರೆ ಇದುವರೆಗೂ ಪರಿಹಾರ ನೀಡಿಲ್ಲ. ಬದಲಾಗಿ ಕೇಸರಿ ಶಾಲು, ಹಿಜಾಬ್ ಹೆಸರಿನಲ್ಲಿ ಜನರನ್ನು ಬೇರೆಡೆಗೆ ಸೆಳೆಯುತ್ತಿದೆ. ಈ ಎಲ್ಲಾ ವಿಷಯಗಳನ್ನಿಟ್ಟುಕೊಂಡು ಹೋರಾಟ ರೂಪಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಘಟಕಗಳ ಅಧ್ಯಕ್ಷ ಕೋಡಿಹಳ್ಳಿ ಸಿದ್ದರಾಜು,ಅನಿಲ್‍ಕುಮಾರ್,ಲಕ್ಕಣ್ಣ, ರುದ್ರೇಶಗೌಡ, ಪುಟ್ಟರಾಜು, ವೆಂಕಟೇಶಗೌಡ,ಶಿವಕುಮಾರ್, ಕಾಂತರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಅಪೂರ್ಣ
ತುಮಕೂರು ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಮತ್ತು ಭದ್ರ ಮೇಲ್ದಂಡೆ ಯೋಜನೆಯ ಕಾಮಗಾರಿಗಳು ಇದುವರೆಗೂ ಪೂರ್ಣಗೊಂಡಿಲ್ಲ.ಎತ್ತಿನಹೊಳೆ ನಾಲಾ ಕಾಮಗಾರಿ ಪೂರ್ಣಗೊಂಡಿದೆ.ಆದರೆ ನೀರು ಸಂಗ್ರಹ ಮಾಡುವ ಜಲಸಂಗ್ರಹಾಗಾರವೇ ನಿರ್ಮಾಣವಾಗಿಲ್ಲ.
ಆದರೆ ಎಸ್ಸಿಪಿ ಮತ್ತು ಟಿಎಸ್ಸಿಪಿ ಹಣದಲ್ಲಿ ಕಾಂಕ್ರಿಟ್ ರಸ್ತೆ ಮಾಡುವ ಮೂಲಕ ಗುತ್ತಿಗೆದಾರರು ಹಣ ಲಪಟಾಯಿಸುತಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಫೆಬ್ರವರಿ 14 ರಂದು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಾಕಲಾಗಿದೆ. ಅಂದು ತುಮಕೂರಿನಿಂದ 1000 ಜನ ಭಾಗವಹಿಸಲಿದ್ದೇವೆ.
– ಆನಂದಪಟೇಲ್ ರೈತ ಸಂಘದ ಜಿಲ್ಲಾಧ್ಯಕ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ