ಹೊಸಕೋಟೆ:
ಯುವಕನ ಹತ್ಯೆಗೆ ಪ್ರತೀಕಾರವಾಗಿ ಆತನ ಕುಟುಂಬಸ್ಥರು ಆರೋಪಿ ಮನೆ ಮೇಲೆ ದಾಳಿ ನಡೆಸಿದ್ದು, ಪರಿಣಾಮ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದ ಘಟನೆಯೊಂದು ನಗರದ ಹೊರವಲಯದ ಹೊಸಕೋಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜೂನ್ 16ರಂದು ಬೆಳಗ್ಗೆ ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಗಾಪುರ ಗ್ರಾಮದ ನವೀನ್ ನಾಯಕ್ ಎಂಬಾತನನ್ನು ದುಷ್ಕರ್ಮಿಗಳು ಕಾರಿನಲ್ಲಿ ಬಂದು ಬರ್ಬರವಾಗಿ ಕೊಲೆಗೈದಿದ್ದರು. ತರಕಾರಿ ತರುತ್ತಿದ್ದ ನವೀನ್ ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ನವೀನ್ ನಾಯಕ್ ಹೊಸಕೋಟೆ-ಕೋಲಾರ ಸಂಪರ್ಕ ಕಲ್ಪಿಸುವ ರಾಮಸಮುದ್ರದ ಬಳಿ ತರಕಾರಿ ಅಂಗಡಿ ಇಟ್ಟುಕೊಂಡಿದ್ದರು. ಇವರ ಅಂಗಡಿ ಪಕ್ಕದಲ್ಲಿದ್ದ ಸೊಣ್ಣಪ್ಪ ಎಂಬಾತ ನವೀನ್ ಏಳಿಗೆ ಸಹಿಸುತ್ತಿರಲಿಲ್ಲ. ಹೀಗಾಗಿ, ಕೋಲಾರ ತಾಲೂಕಿನ ಮಹೀಂದ್ರ ಎಂಬಾತನೊಂದಿಗೆ ಸೇರಿಕೊಂಡು ನವೀನ್ ಕೊಲೆಗೆ ಸುಪಾರಿ ಕೊಟ್ಟಿದ್ದಾನೆ. ನಂದಗುಡಿ ಪೊಲೀಸರ ತನಿಖೆಯಲ್ಲಿ ಈ ಕೊಲೆ ರಹಸ್ಯ ಬಯಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಇಬ್ಬರು ಬಂಧನಕ್ಕೊಳಗಾಗಿದ್ದಾರೆ. ಇದರ ಬೆನ್ನಲ್ಲೇ ಕೊಲೆ ಪ್ರಕರಣದ ಆರೋಪಿ ಸೊಣ್ಣಪ್ಪ ಅವರ ಹೊಸಕೋಟೆ ಮನೆ ಹಾಗೂ ಮಹೀಂದ್ರ ಅವರ ಕೋಲಾರದ ನಿವಾಸದ ಮೇಲೆ ಕೊಲೆಯಾದ ನವೀನ್ ನಾಯಕ್ ಕುಟುಂಬಸ್ಥರು ದಾಳಿ ನಡೆಸಿದ್ದಾರೆ.
ಮನೆಯಲ್ಲಿನ ಪೀಠೋಪಕರಣಗಳು, ಟಿವಿ, ಫ್ರಿಡ್ಜ್, ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್, ಮನೆ ಮುಂದಿನ ಶೀಟ್‌ಗಳನ್ನೂ ನಾಶ ಮಾಡಿದ್ದಾರೆನ್ನಲಾಗಿದೆ. ಈ ಕುರಿತು ಹೊಸಕೋಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.