ಪ್ರಯಾಗ್ ರಾಜ್:
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾಕುಂಭ ಮೇಳದ ವೇಳೆ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಸ್ಥಳದಲ್ಲಿ ಇಲ್ಲಿಯವರೆಗೂ ಒಟ್ಟು 35 ಕೋಟಿ ಜನರು ಸ್ನಾನ ಮಾಡಿದ್ದಾರೆ.
ವಸಂತ ಪಂಚಮಿಯ ಅಮೃತ ಸ್ನಾನದ ಶುಭ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಮಹಾಕುಂಭ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ಒಟ್ಟು 350 ಮಿಲಿಯನ್ (35 ಕೋಟಿ) ಗೂ ಅಧಿಕ ಜನರು ಸ್ನಾನ ಮಾಡಿದ್ದಾರೆ.
ಸೋಮವಾರ ಬೆಳಗ್ಗೆ 8 ಗಂಟೆಯ ಹೊತ್ತಿಗೆ 6.2 ಮಿಲಿಯನ್ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಮಹಾಕುಂಭ ಮುಗಿಯಲು ಇನ್ನೂ 23 ದಿನಗಳು ಉಳಿದಿದ್ದು, ಒಟ್ಟು ಸಂಖ್ಯೆ 500 ಮಿಲಿಯನ್ ಗೂ ಅಧಿಕ ಜನರು ಸ್ನಾನ ಮಾಡುವ ನಿರೀಕ್ಷೆಯಿದೆ.
ಪವಿತ್ರ ಸ್ನಾನದ ಮೂಲಕ ದೈವಿಕ ಆಶೀರ್ವಾದವನ್ನು ಪಡೆಯಲು ಭಾರತ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಪ್ರತಿದಿನ ಆಗಮಿಸುತ್ತಿದ್ದಾರೆ. ಭಾನುವಾರ ಸುಮಾರು 12 ಮಿಲಿಯನ್ ಭಕ್ತರು ಸ್ನಾನ ಮಾಡಿದ್ದಾರೆ. ಇವರಲ್ಲಿ 1 ಮಿಲಿಯನ್ ನಷ್ಟು ಸಾಧು ಸಂತರು, ವಿದೇಶಿ ಭಕ್ತರು ಸೇರಿದ್ದಾರೆ.
ಮೌನಿ ಅಮವ್ಯಾಸೆಯಿಂದ ಸಂಗಮದಲ್ಲಿ ಅತಿ ಹೆಚ್ಚು 80 ಮಿಲಿಯನ್ ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದರು. ಮಕರ ಸಂಕ್ರಾಂತಿ ದಿನದಂದು ಸುಮಾರು 35 ಮಿಲಿಯನ್ ಜನರು, ಜನವರಿ 30 ರಂದು ಸುಮಾರು 20 ಮಿಲಿಯನ್ ಭಕ್ತರು, ಫೆಬ್ರವರಿ 1 ರಂದು 17 ಮಿಲಿಯನ್ ಜನರು ಸ್ನಾನ ಮಾಡಿದ್ದರು.