ಮಾಹಿತಿ ಕೊಟ್ಟಾಗ ಯೂಕ್ರೇನ್​ನಿಂದ ಮರಳದ ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರಕ್ಕೆ ಖರ್ಚಾದದ್ದು ಎಷ್ಟು ಗೊತ್ತಾ?

ಕೀವ್​: 

ರಷ್ಯಾ ಯೂಕ್ರೇನ್​ ಮೇಲೆ ಸಮರ ಸಾರಲಿದೆ ಎಂಬ ಅನುಮಾನ ವ್ಯಕ್ತವಾಗುತ್ತಲೇ ಭಾರತ ಸರ್ಕಾರ ಯೂಕ್ರೇನ್​ನಲ್ಲಿ ಇರುವ ವಿದ್ಯಾರ್ಥಿಗಳಿಗೆ ದೇಶ ಬಿಟ್ಟು ಬರುವಂತೆ ತಿಳಿಸಿತ್ತು. ಆದರೆ ಯೂಕ್ರೇನ್​ನ ಕಾಲೇಜುಗಳು ವಿದ್ಯಾರ್ಥಿಗಳಿಗೆ ಹೋಗಲು ಬಿಟ್ಟಿರಲಿಲ್ಲ.

ಆನ್​ಲೈನ್​ ತರಗತಿ ನಡೆಸುವುದಿಲ್ಲ, ಕಾಲೇಜಿಗೆ ಅಟೆಂಡ್​ ಆಗಲೇಬೇಕು, ರಷ್ಯಾ ಯುದ್ಧ ಮಾಡುವುದಾಗಿ 10 ವರ್ಷಗಳಿಂದ ಹೇಳುತ್ತಿದ್ದು, ಏನೂ ಆಗುವುದಿಲ್ಲ ಎಂದು ಕಾಲೇಜುಗಳು ಹೇಳಿದ್ದನ್ನು ನಂಬಿ ವಿದ್ಯಾರ್ಥಿಗಳು ಅಲ್ಲಿಯೇ ಉಳಿದುಕೊಂಡರು. ಇನ್ನು ಕೆಲವು ವಿದ್ಯಾರ್ಥಿಗಳು ಭಾರತ ಸರ್ಕಾರ ಕರೆ ಕೊಟ್ಟಾಗ ತಮಗೆ ವಾಪಸ್​ ಬರಲು ವಿಮಾನದಲ್ಲಿ ಟಿಕೆಟ್​ ಸಿಗಲಿಲ್ಲ, ವಿಮಾನದ ರೇಟ್​ ಹೆಚ್ಚಾಗಿತ್ತು ಎಂದೆಲ್ಲಾ ಹೇಳಿಕೊಂಡಿದ್ದಾರೆ.

ಅದೇನೇ ಇರಲಿ. ಯುದ್ಧ ಶುರುವಾಗುತ್ತಲೇ ಬೆದರಿದ ವಿದ್ಯಾರ್ಥಿಗಳ ರಕ್ಷಣೆಗೆ ನಿಂತ ಭಾರತ ಸರ್ಕಾರ ‘ಆಪರೇಷನ್​ ಗಂಗಾ’ ಮೂಲಕ ವಿದ್ಯಾರ್ಥಿಗಳನ್ನು ಕರೆತರುವ ಕಾರ್ಯದಲ್ಲಿ ತೊಡಗಿತು.

ಕೀವ್​ ವಿಮಾನ ನಿಲ್ದಾನವನ್ನು ಮೊದಲ ದಿನವೇ ರಷ್ಯಾ ವಶಕ್ಕೆ ಪಡೆದದ್ದರಿಂದ ಎಲ್ಲಾ ವಿಮಾನಗಳನ್ನು ರದ್ದು ಮಾಡಿದ್ದರಿಂದ ಅಲ್ಲಿಗೆ ಹೋಗಿದ್ದ ಭಾರತದ ವಿಮಾನಗಳು ವಾಪಸ್​ ಆಗಬೇಕಾದ ಅನಿವಾರ್ಯತೆಯೂ ಉಂಟಾಗಿತ್ತು. ಕೊನೆಗೆ ಸಮೀಪದ ಸ್ಥಳಗಳಿಗೆ ವಿದ್ಯಾರ್ಥಿಗಳಿಗೆ ತಲುಪಲು ಹೇಳಿ ಅಲ್ಲಿಂದ ಇಲ್ಲಿಯವರೆಗೆ ಸಹಸ್ರಾರು ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲಾಗಿದೆ.

ರೊಮೇನಿಯಾ, ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ ಮತ್ತು ಮೊಲ್ಡೊವಾದಿಂದ ಭಾರತೀಯರನ್ನು ರಕ್ಷಿಸಲು ಭಾರತೀಯ ಸಶಸ್ತ್ರ ಪಡೆಗಳು, ಏರ್ ಇಂಡಿಯಾ, ಇಂಡಿಗೊ, ಸ್ಪೈಸ್‌ಜೆಟ್ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗಳು ‘ಆಪರೇಷನ್ ಗಂಗಾ’ ಅಡಿಯಲ್ಲಿ ವಿಮಾನಗಳನ್ನು ನಿರ್ವಹಿಸಿದವು. ಕಳೆದ ವಾರದಲ್ಲಿಯೇ ಸುಮಾರು 18 ಸಾವಿರ ಭಾರತೀಯರನ್ನು ಸುರಕ್ಷಿತವಾಗಿ ಮನೆಗೆ ಕರೆತರಲಾಗಿದೆ. ಇದಕ್ಕಾಗಿ 76 ವಿಮಾನಗಳು ಕಾರ್ಯ ನಿರ್ವಹಿಸಿವೆ.

ಒಟ್ಟಾರೆಯಾಗಿ ಕೇಂದ್ರ ಸರ್ಕಾರಕ್ಕೆ ತಗುಲಿರುವ ಖರ್ಚು ಎಷ್ಟು ಎಂದು ಊಹಿಸಿದ್ದೀರಾ? ಕಳೆದ ವಾರದ ಲೆಕ್ಕಾಚಾರ ಹಾಕುವುದಾದರೆ ಭಾರತದಿಂದ ಯೂಕ್ರೇನ್​ ಮತ್ತು ಅಲ್ಲಿಂದ ಭಾರತಕ್ಕೆ ಹೀಗೆ ದ್ವಿಮುಖ ಸಂಚಾರಕ್ಕೆ ಖರ್ಚಾಗಿರುವುದು ಸುಮಾರು 70 ಕೋಟಿ ರೂಪಾಯಿಗಳು!

ಬೋಯಿಂಗ್ ಡ್ರೀಮ್‌ಲೈನರ್ 787 ಮತ್ತು ಏರ್‌ಬಸ್ ಎ 321 ಅನ್ನು ನಿರ್ವಹಿಸಲು ಸರ್ಕಾರವು ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಗಂಟೆಗೆ 7-8 ಲಕ್ಷ ರೂಪಾಯಿಗಳನ್ನು ಪಾವತಿಸುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೆಹಲಿ ಮತ್ತು ಬುಕಾರೆಸ್ಟ್ ನಡುವೆ ದ್ವಿಮುಖ ಹಾರಾಟವನ್ನು ನಿರ್ವಹಿಸುವ ಸರಾಸರಿ ವೆಚ್ಚವು ಸುಮಾರು 18 ಗಂಟೆಗಳ ಒಟ್ಟು ಪ್ರಯಾಣ ಸಮಯ.

ಒಂದು ಬಾರಿ ಹಾರಾಟ ನಡೆಸಿದರೆ ಇದಕ್ಕೆ ಸುಮಾರು 1.35 ಕೋಟಿ ರೂಪಾಯಿ ಖರ್ಚಾಗುತ್ತದೆ. ಮುಂಬೈ ಮತ್ತು ಬುಕಾರೆಸ್ಟ್ ನಡುವಿನ ವಿಮಾನ ಕಾರ್ಯಾಚರಣೆಯ ಸರಾಸರಿ ವೆಚ್ಚ ಸುಮಾರು 1.7 ಕೋಟಿ ರೂಪಾಯಿಗಳು ಎಂದು ಅಧಿಕಾರಿ ಹೇಳಿದ್ದಾರೆ.

ಫೆಬ್ರವರಿ 24 ರಂದು ಉಕ್ರೇನ್ ದೇಶದ ಮೇಲೆ ಆಕ್ರಮಣ ಮಾಡಿದಾಗ ಸುಮಾರು 20 ಸಾವಿರ ಭಾರತೀಯರು, ಹೆಚ್ಚಾಗಿ ವಿದ್ಯಾರ್ಥಿಗಳು ಯೂಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದರು ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಹೇಳಿದ್ದಾರೆ. ಅಂದಿನಿಂದ, 17,400 ಕ್ಕೂ ಹೆಚ್ಚು ಭಾರತೀಯರು ಭಾರತಕ್ಕೆ ಮರಳಿದ್ದಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap