ಬದಲಾದ ಜೀವನಶೈಲಿ ಮತ್ತು ಸರಿಯಾದ ಸಮಯದಲ್ಲಿ ಊಟ ಮಾಡದ ಕಾರಣದಿಂದಾಗಿ ಕೆಲವೊಮ್ಮೆ ನಮಗೆ ಒಳ್ಳೆಯ ನಿದ್ರೆ ಬರುವುದಿಲ್ಲ. ಇದರಿಂದಾಗಿ ನಾವು ಮರುದಿನ ದಣಿದಂತೆ ಕಾಣುತ್ತೇವೆ. ಇದರ ಹೊರತಾಗಿ, ಕೆಲಸವನ್ನು ಮಾಡಲು ಮನಸ್ಸಿಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಕೆಲವೊಮ್ಮೆ ಅತಿಯಾದ ಒತ್ತಡದಿಂದಾಗಿ ನಿದ್ರೆ ಸಾಧ್ಯವಾಗುವುದಿಲ್ಲ.ಇಂತಹ ಪರಿಸ್ಥಿತಿಯಲ್ಲಿ, ಕೆಲವರು ನಿದ್ರೆ ಪಡೆಯಲು ಔಷಧಿಗಳ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದು ಒಳ್ಳೆಯ ಅಭ್ಯಾಸ ಅಲ್ಲ.
ಇತ್ತೀಚಿನ ಅಧ್ಯಯನಗಳ ಪ್ರಕಾರ, ಸರಿಯಾಗಿ ನಿದ್ರೆ ಮಾಡದವರು ಮಧುಮೇಹದ ಅಪಾಯವನ್ನು ಹೊಂದಿರುತ್ತಾರೆ. ನಿದ್ರೆಯ ಸಮಯ ಕಡಿಮೆಯಾದರೂ ಮಧುಮೇಹ ಬರುವ ಅಪಾಯವಿದೆ ಎಂದು ಹೇಳಲಾಗುತ್ತದೆ. ಕೆಲಸ ಮತ್ತು ವೃತ್ತಿಗೆ ನೀಡುವಷ್ಟೇ ಪ್ರಾಮುಖ್ಯತೆ ನಿದ್ದೆಗೂ ನೀಡಬೇಕು ಎನ್ನುತ್ತಾರೆ. ಅನೇಕರು ಮಾಡುವ ತಪ್ಪೆಂದರೆ ಅವರು ನಿದ್ದೆ ಮಾಡುವುದನ್ನು ಬಿಟ್ಟು ಹೆಚ್ಚು ಫೋನ್ ಮತ್ತು ಟಿವಿ ನೋಡುತ್ತಾರೆ. ಹೀಗೆ ಮಾಡುವುದರಿಂದ ಮಧುಮೇಹ ಬರುವ ಅಪಾಯ ಬಹಳ ಹೆಚ್ಚು.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಪ್ರತಿಯೊಬ್ಬರಿಗೂ 8 ರಿಂದ 9 ಗಂಟೆಗಳ ನಿದ್ದೆ ಬೇಕು. ಕನಿಷ್ಠ 7 ಗಂಟೆಗಳ ಕಾಲ ಶಾಂತಿಯುತವಾಗಿ ಮಲಗಬೇಕು. ಚಿಕ್ಕ ಮಕ್ಕಳು ಮತ್ತು ವೃದ್ಧರಿಗೆ ಹೆಚ್ಚು ನಿದ್ರೆ ಬೇಕು. ಬೆಳಗ್ಗೆ ಬೇಗ ಏಳುವುದು ಎಂದರೆ ರಾತ್ರಿ ಬೇಗ ಮಲಗುವುದು. ಸಂಜೆ 7 ಗಂಟೆಗೆ ಮೊದಲು ನಿಮ್ಮ ಊಟವನ್ನು ಮುಗಿಸಿ. ಆದ್ದರಿಂದ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ನಿದ್ರಾಹೀನತೆಯಿಂದ ಉಂಟಾಗುವ ರೋಗಗಳು: ಸರಿಯಾಗಿ ನಿದ್ದೆ ಆಗದಿದ್ದರೆ ಆಯಾಸ, ಏಕಾಗ್ರತೆಯ ತೊಂದರೆ, ಮನಸ್ಥಿತಿಯ ಏರುಪೇರು ಹಾಗೂ ಕೆಲಸದಲ್ಲಿ ಸಾಮರ್ಥ್ಯ ಕಡಿಮೆಯಾಗುವುದು ಮುಂತಾದ ಸಮಸ್ಯೆ ಎದುರಾಗಬಹುದು. ನಿದ್ರಾಹೀನತೆಗೆ ಹಲವು ಕಾರಣಗಳಿದ್ದು, ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಇದಷ್ಟೇ ಅಲ್ಲದೇ ಇನ್ನು ಕೆಲವು ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು.
ದೀರ್ಘಕಾಲದ ನಿದ್ರಾಹೀನತೆಯಿಂದ ಬಳಲುತ್ತಿರುವವರು ಅಧಿಕ ರಕ್ತದೊತ್ತಡ ಸಮಸ್ಯೆಗೆ ಸಿಲುಕಬಹುದು. ಪ್ರತಿದಿನ ನಾವು ಮಲಗಿದಾಗ ರಕ್ತದೊತ್ತಡ ಸಾಮಾನ್ಯವಾಗಿ ಕಡಿಮೆಯಾಗುತ್ತದೆ. ಪ್ರತಿದಿನ ಸರಿಯಾಗಿ ನಿದ್ದೆ ಮಾಡದಿದ್ದರೆ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಹೆಚ್ಚು. ನಿದ್ರಾಹೀನತೆ ಮಿತಿ ಮೀರಿದರೆ ಹೃದ್ರೋಗ ಮತ್ತು ಪಾರ್ಶ್ವವಾಯು ಬರುವ ಸಾಧ್ಯತೆ ಕೂಡ ಉಂಟು ಎನ್ನುತ್ತಾರೆ ತಜ್ಞರು.
ನಿದ್ರೆಗೂ ಮಧುಮೇಹಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹಲವರು ಅಂದುಕೊಂಡಿರುತ್ತಾರೆ. ಆದರೆ, ಪ್ರತಿದಿನ ಕಡಿಮೆ ಸಮಯ ನಿದ್ದೆ ಮಾಡುವುದರಿಂದ ಮಧುಮೇಹ ಬರುವ ಸಾಧ್ಯತೆ ಕೂಡ ಹೆಚ್ಚು. ನಿದ್ರಾಹೀನತೆಯಿಂದ ಜೀವಕೋಶಗಳು ಇನ್ಸುಲಿನ್‌ಗೆ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ. ನಿದ್ರಾಹೀನತೆ ಹೆಚ್ಚಾದರೆ ದೇಹದೊಳಗಿನ ಜೀವಕೋಶಗಳ ಪ್ರವೇಶಕ್ಕೆ ಗ್ಲೂಕೋಸ್ ಅಡ್ಡ ಬರಬಹುದು.
ನಿದ್ರಾಹೀನತೆಯಿಂದ ಬಳಲುತ್ತಿರುವವರು ತೂಕ ಹೆಚ್ಚಾಗುವ ಸಾಧ್ಯತೆಯೂ ಉಂಟು. ಸರಿಯಾಗಿ ನಿದ್ದೆ ಮಾಡದಿದ್ದರೆ ಮೆದುಳಿನಲ್ಲಿ ಹಸಿವನ್ನು ನಿಯಂತ್ರಿಸುವ ಹಾರ್ಮೋನ್ಗಳಿಗೆ ತೊಂದರೆಯಾಗುತ್ತದೆ. ಇದರಿಂದಾಗಿ ಅವರು ಹೆಚ್ಚು ತಿನ್ನಲು ಆರಂಭಿಸುತ್ತಾರೆ. ಮಧ್ಯ ರಾತ್ರಿ ಕೂಡ ತಿಂಡಿ ಸೇವಿಸಲು ಶುರು ಮಾಡಬಹುದು. ಇದರ ಪರಿಣಾಮ ಅವರು ಬೆಳಿಗ್ಗೆ ತಡವಾಗಿ ಏಳುವುದು ಮತ್ತು ವ್ಯಾಯಾಮ ಮಾಡದೇ ಇರುವುದು ಇರುತ್ತದೆ. ಇವೆಲ್ಲವೂ ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ ಎನ್ನುತ್ತಾರೆ ತಜ್ಞರು.