ತಮಿಳುನಾಡು
ಊಟಿ, ನೀಲಗಿರಿ ಮತ್ತು ಕೊಡೈಕೆನಾಲ್‌ಗೆ ವಾಹನ ಪ್ರವೇಶವನ್ನು ನಿಯಂತ್ರಿಸಲು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಈ ಫೇಮಸ್ ಗಿರಿಧಾಮಗಳಿಗೆ ಭೇಟಿ ನೀಡಲು ಉದ್ದೇಶಿಸಿರುವ ವಾಹನಗಳಿಗೆ ಇ-ಪಾಸ್‌ಗಳನ್ನು ನೀಡುವ ವ್ಯವಸ್ಥೆಯನ್ನು ಮಾಡಲು ಆಯಾ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದೆ.
ನೀಲಗಿರಿ ಮತ್ತು ಕೊಡೈಕೆನಾಲ್‌ಗೆ ಭೇಟಿ ನೀಡಲು ಯೋಜಿಸುವ ಎಲ್ಲಾ ವಾಹನಗಳು ತಮ್ಮ ವಿವರಗಳನ್ನು ಸಲ್ಲಿಸಲು ಮತ್ತು ಇ-ಪಾಸ್ ಪಡೆಯಲು ಆನ್‌ಲೈನ್ ವ್ಯವಸ್ಥೆ ಮಾಡಬೇಕು. ಅಥವಾ ಬೇರೆ ಯೋಜನೆ ಮಾಡಬೇಕು ಎಂದು ನೀಲಗಿರಿ ಮತ್ತು ದಿಂಡಿಗಲ್‌ನ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಸದ್ಯಕ್ಕೆ ಇ- ಪಾಸ್‌ಗಳನ್ನು ಹೊಂದಿರುವ ವಾಹನಗಳಿಗೆ ಮಾತ್ರ ಊಟಿ, ಕೊಡೈಕೆನಾಲ್‌ಗೆ ಪ್ರವೇಶ ನೀಡಲಾಗುತ್ತದೆ.
ಬಿರು ಬೇಸಿಗೆಯಲ್ಲಿ ತಣ್ಣಗೆ ಊಟಿ ಮತ್ತು ಕೊಡೈಕೆನಾಲ್‌ಗೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಜಿಲ್ಲೆಗಳಿಗೆ ಬರುವ ವಾಹನಗಳ ಒಳಹರಿವು, ಪ್ರಸ್ತುತ ಇರುವ ವಿವಿಧ ವಾಹನಗಳು ಮತ್ತು ಬೇಸಿಗೆಯ ತಿಂಗಳುಗಳಲ್ಲಿ ಈ ಗಿರಿಧಾಮಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಗೆ ಸಂಬಂಧಿಸಿದಂತೆ ಡೇಟಾವನ್ನು ಸಂಗ್ರಹಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಊಟಿ, ಕೊಡೈಕೆನಾಲ್‌ಗೆ ಬರುವ ವಾಹನಗಳು ಇ- ಪಾಸ್ ಹೊಂದಿರಬೇಕು ಎಂಬ ಈ ನಿಯಮವು ಮೇ 7 ರಿಂದ ಜಾರಿಗೆ ಬರಲಿದೆ. ಜೂನ್ 30 ರವರೆಗೆ ಇದು ಅನ್ವಯವಾಗಲಿದೆ. ಅಂದರೆ ಈ ಅವಧಿಯಲ್ಲಿ ನೀವು ಗಿರಿಧಾಮಗಳಿಗೆ ಪ್ರಯಾಣಿಸುತ್ತಿದ್ದರೆ, ಪ್ರವಾಸಿಗರು ಇ-ಪಾಸ್ ಪಡೆಯುವುದು ಕಡ್ಡಾಯವಾಗಿದೆ.
ಇ-ಪಾಸ್ ತೆಗೆದುಕೊಳ್ಳಲು ಸಾಫ್ಟ್‌ವೇರ್ ರಚಿಸಲು ಜಿಲ್ಲಾಡಳಿತವು ತಮಿಳುನಾಡು ಇ-ಆಡಳಿತ ಸಂಸ್ಥೆ (ಟಿಎನ್‌ಇಜಿಎ) ಯೊಂದಿಗೆ ಕೈ ಜೋಡಿಸಿದೆ ಎಂದು ನೀಲಗಿರಿ ಜಿಲ್ಲಾಧಿಕಾರಿ ಎಂ ಅರುಣಾ ಭಾನುವಾರ ಹೇಳಿದ್ದಾರೆ.
ಎಎನ್‌ಐಯೊಂದಿಗೆ ಮಾತನಾಡಿದ ಅವರು, “ನಾವು ಟಿಎನ್‌ಇಜಿಎ ಯೊಂದಿಗೆ ಕೈಜೋಡಿಸಿದ್ದೇವೆ. ಪ್ರವಾಸಿಗರು ಅರ್ಜಿ ಸಲ್ಲಿಸಲು ಮತ್ತು ನೀಲಗಿರಿಗೆ ಪ್ರವೇಶಿಸಲು ನಾವು ಸಾಫ್ಟ್‌ವೇರ್ ಅನ್ನು ರಚಿಸಿದ್ದೇವೆ. ಅವರು ಮಾಡಬೇಕಾಗಿರುವುದು ಅವರ ಹೆಸರು, ಅವರ ವಿಳಾಸ, ಮುಂತಾದ ಕೆಲವು ಬೇಸಿಕ್ ವಿವರಗಳನ್ನು ನೀಡಬೇಕು. ಅವರು ನೀಲಗಿರಿಯಲ್ಲಿ ಎಷ್ಟು ದಿನ ಇರುತ್ತಾರೆ..? ಅವರು ಇರಲು ಹೋಗುವ ಸ್ಥಳ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವಾಹನದ ಹೆಸರು, ಪ್ರಕಾರ, ಇತ್ಯಾದಿ” ವಿವರಗಳನ್ನು ತುಂಬಬೇಕು.
ಅದರ ನಂತರ, ಇ-ಪಾಸ್ ಕ್ರಿಯೆಟ್ ಆಗಲಿದೆ. ePass ಒಂದು QR ಕೋಡ್ ಅನ್ನು ಹೊಂದಿರುತ್ತದೆ. ಅದನ್ನು ನಮ್ಮ ಜನರು ಚೆಕ್‌ಪೋಸ್ಟ್‌ನಲ್ಲಿ ಸ್ಕ್ಯಾನ್ ಮಾಡುತ್ತಾರೆ. ವಾಹನಗಳ ಸಂಖ್ಯೆ ಅಥವಾ ಪ್ರವಾಸಿಗರ ಸಂಖ್ಯೆಗೆ ಯಾವುದೇ ನಿರ್ಬಂಧವಿಲ್ಲ. ಸ್ಥಳೀಯ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ನಾವು ಅವರಿಗೆ ಇ-ಪಾಸ್‌ಗಳಿಂದ ವಿನಾಯಿತಿ ನೀಡಿದ್ದೇವೆ ಎಂದಿದ್ದಾರೆ.
ಇ ಪಾಸ್ ಅನ್ನು ಕ್ರಿಯೆಟ್ ಮಾಡುವುದು ಹೇಗೆ?
* https://www.tnesevai.tn.gov.in/.. https://epass.tnega.org/home ವೆಬ್‌ಸೈಟ್‌ಗೆ ಲಾಗಿನ್ ಆಗಿ
* ನಿಮ್ಮ ಹೆಸರು, ವಿಳಾಸ, ವಾಸ್ತವ್ಯದ ಅವಧಿ ಇತ್ಯಾದಿ ವಿವರಗಳನ್ನು ಭರ್ತಿ ಮಾಡಿ.
* ಸಂಖ್ಯೆ ಮತ್ತು ಇತರ ವಿವರಗಳೊಂದಿಗೆ ನಿಮ್ಮ ವಾಹನದ ಹೆಸರನ್ನು ನಮೂದಿಸಿ.
* ಪಾಸ್ ರಚಿಸಲು ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. (ಇ-ಪಾಸ್ ಅನ್ನು ರಚಿಸುವ ಆಯ್ಕೆಯನ್ನು ವೆಬ್‌ಸೈಟ್ ಇನ್ನೂ ನೀಡಿಲ್ಲ. ಶೀಘ್ರದಲ್ಲೇ ಲಭ್ಯವಾಗಲಿದೆ).
ಇನ್ನು, ನೀಲಗಿರಿ ಜಿಲ್ಲೆಯ ನೋಂದಣಿ ಸಂಖ್ಯೆ “TN 43” ಹೊಂದಿರುವ ನೀಲಗಿರಿ ಜಿಲ್ಲೆಯಲ್ಲಿ ವಾಸಿಸುವ ನಾಗರಿಕರು ತಮ್ಮ ವಾಹನಗಳಿಗೆ ಇ- ಪಾಸ್ ಪಡೆಯುವ ಅಗತ್ಯವಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ