ಚೆನ್ನೈ:
ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ಚಿತ್ರಕಥೆಗಾರ 47 ವರ್ಷದ ವಿಕ್ರಮ್ ಸುಗುಮಾರನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮದುರೈನಿಂದ ಚೆನ್ನೈಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಆತನನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ವರದಿ ತಿಳಿಸಿದೆ.
ವಿಕ್ರಮ್ ಅವರ ಅಕಾಲಿಕ ನಿಧನ ತಮಿಳು ಚಿತ್ರರಂಗಕ್ಕೆ ಆಘಾತವನ್ನುಂಟುಮಾಡಿದೆ. ಅವರೊಂದಿಗೆ ಕೆಲಸ ಮಾಡಿದ ಸಹಕಲಾವಿದರು ಮತ್ತು ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಶೋಕ ಸಂದೇಶಗಳನ್ನು ಹಂಚಿಕೊಂಡಿದ್ದಾರೆ. ನಟ ಶಾಂತನು ಭಾಗ್ಯರಾಜ್, ವಿಕ್ರಮ್ ಜೊತೆಗಿನ ಫೋಟೋಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡು, “#Rip ಪ್ರೀತಿಯ ಸಹೋದರ, ನಿನ್ನಿಂದ ಸಾಕಷ್ಟು ಕಲಿತಿದ್ದೇನೆ, ಒಟ್ಟಿಗೆ ಕಳೆದ ಪ್ರತಿ ಕ್ಷಣವನ್ನು ಶಾಶ್ವತವಾಗಿ ಗೌರವಿಸುವೆ. ತೀರಾ ಬೇಗನೆ ತೊರೆದೆ, ನಿನ್ನ ನೆನಪು ಎಂದಿಗೂ ಇರಲಿದೆ ” ಎಂದು ಭಾವುಕವಾಗಿ ಬರೆದಿದ್ದಾರೆ.
ನಟ ಕಾಯಲ್ ದೇವರಾಜ್ ಕೂಡ ಸಂತಾಪ ವ್ಯಕ್ತಪಡಿಸಿದ್ದು, “ಜೂನ್ 2, ಈ ಸುದ್ದಿಯನ್ನು ನಂಬಲಾಗುತ್ತಿಲ್ಲ. ಮಧುರೈನಿಂದ ಚೆನ್ನೈಗೆ ಬಸ್‌ನಲ್ಲಿ ಬರುತ್ತಿದ್ದಾಗ ಹೃದಯಾಘಾತದಿಂದ ನಿರ್ದೇಶಕ ಮತ್ತು ನಟ ವಿಕ್ರಮ್ ಸುಕುಮಾರನ್ ನಿಧನರಾದರು” ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪರಮಕುಡಿಯಲ್ಲಿ ಜನಿಸಿದ ವಿಕ್ರಮ್ ಸುಕುಮಾರನ್, ಗ್ರಾಮೀಣ ಜೀವನ ಮತ್ತು ಸಾಮಾಜಿಕ ವಿಷಯಗಳನ್ನು ಅಥೆಂಟಿಕ್ ಆಗಿ ಚಿತ್ರಿಸುವ ಮೂಲಕ ಖ್ಯಾತರಾದವರು. 2013ರಲ್ಲಿ ಬಿಡುಗಡೆಯಾದ ತಮ್ಮ ಮೊದಲ ಚಿತ್ರ ಮಧ ಯಾನೈ ಕೂಟ್ಟಂ ಗ್ರಾಮೀಣ ತಮಿಳುನಾಡಿನ ಜಾತಿ ಆಧಾರಿತ ಘರ್ಷಣೆಯನ್ನು ಕಠಿಣವಾಗಿ ಚಿತ್ರಿಸಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ಈ ಚಿತ್ರದಲ್ಲಿ ಕದಿರ್ ಮತ್ತು ಅಂಜು ನಟಿಸಿದ್ದರು.
ನಿರ್ದೇಶನಕ್ಕೆ ಮೊದಲು, ವಿಕ್ರಮ್ ಖ್ಯಾತ ನಿರ್ದೇಶಕ ಬಾಲು ಮಹೇಂದ್ರ ಅವರ ಸಹಾಯಕರಾಗಿ 1999-2000ರಲ್ಲಿ ಕೆಲಸ ಮಾಡಿದರು ಮತ್ತು ಸುಬ್ರಮಣಿಯಪುರಂ (2008) ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ಅವರ ಕೆಲಸಗಳು ಸಾಂಸ್ಕೃತಿಕ ಆಳ ಮತ್ತು ಸಾಮಾಜಿಕವಾಗಿ ಪ್ರಸ್ತುತವಾದ ಕಥೆಗಳಿಗೆ ಬದ್ಧವಾಗಿವೆ. ಕೆಲವು ವರ್ಷಗಳ ವಿರಾಮದ ನಂತರ, 2023ರಲ್ಲಿ ರಾವಣ ಕೋಟ್ಟಂ ಚಿತ್ರವನ್ನು ಬಿಡುಗಡೆ ಮಾಡಿದರು, ಇದರಲ್ಲಿ ಶಾಂತನು, ಆನಂದಿ, ಪ್ರಭು, ಮತ್ತು ಇಳವರಸು ನಟಿಸಿದ್ದರು. ಆದರೆ, ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಾಣಲಿಲ್ಲ. ವಿಕ್ರಮ್ ತಮ್ಮ ಮುಂದಿನ ಯೋಜನೆ ತೇರಂ ಪೋರಂನಲ್ಲಿ ಕೆಲಸ ಮಾಡುತ್ತಿದ್ದರು, ಇದು ಪರ್ವತಾರೋಹಣವನ್ನು ಕೇಂದ್ರೀಕರಿಸಿದ ಚಿತ್ರವಾಗಿದೆ.
ವಿಕ್ರಮ್ ಚಿತ್ರರಂಗದ ಕೆಲವರಿಂದ ದ್ರೋಹಕ್ಕೊಳಗಾಗಿದ್ದೇನೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಆದರೆ, ಘಟನೆಗೆ ಸಾಕ್ಷ್ಯಾಧಾರವಿಲ್ಲದ ಕಾರಣ ಯಾರನ್ನೂ ಹೆಸರಿಸಲಿಲ್ಲ. ಅವರು ಚೆನ್ನೈನಲ್ಲಿ ವಾಸಿಸುತ್ತಿದ್ದ ತಮ್ಮ ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಮತ್ತು ತಮಿಳು ಚಿತ್ರರಂಗದ ಸದಸ್ಯರು ವಿಕ್ರಮ್ ಅವರ ಸಾಮಾಜಿಕವಾಗಿ ಜಾಗೃತ ಕಥಾನಕಗಳು ಮತ್ತು ಗ್ರಾಮೀಣ ಕಥೆಗಳಿಗೆ ನೀಡಿದ ಅಥೆಂಟಿಕ್ ಚಿತ್ರಣವನ್ನು ಸ್ಮರಿಸಿದ್ದಾರೆ. ಸಂಗೀತಗಾರ ಜಸ್ಟಿನ್ ಪ್ರಭಾಕರನ್, “ಕಲಾತ್ಮಕ ಚಿತ್ರಕಲೆಯನ್ನು ಮೀರಿ ಕನಸು ಕಂಡ ಚಿತ್ರಕಾರ, ಆದರೆ ಬೇಗನೆ ಹೊಟುಹೋದರು” ಎಂದು ಬರೆದಿದ್ದಾರೆ.








