ನಿಷ್ಠುರ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಇನ್ನು ನೆನಪು ಮಾತ್ರ

 ಬೆಂಗಳೂರು : 

     ಇವರು ಸ್ವಾತಂತ್ರ್ಯ ಹೋರಾಟಗಾರರಾಗಿ ಮಾತ್ರವೆ ಗುರುತಿಸಿಕೊಂಡಿರಲಿಲ್ಲ. ಹೋರಾಟಗಾರರಾಗಿ, ಜನರ ಧ್ವನಿಯಾಗಿ ನಿಂತು ಅದರಲ್ಲಿ ಯಶಸ್ಸನ್ನೂ ಕಂಡವರು. ಅಂತಹ ಧೀಮಂತ ಚೇತನ ಶತಾಯುಷಿ ಹೆಚ್.ಎಸ್.ದೊರೆಸ್ವಾಮಿ ಇನ್ನಿಲ್ಲ. ಅವರಿಗೆ 104 ವರ್ಷ ವಯಸ್ಸಾಗಿತ್ತು.

      ಇತ್ತಿಚೆಗಷ್ಟೆ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ಹಿಂತಿರುಗಿದ್ದ ಅವರಿಗೆ ಬುಧವಾರ ಹೃದಯಾಘಾತವಾಗಿ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

     ಎಷ್ಟೇ ಎಚ್ಚರಿಕೆಯಿಂದಿದ್ದರೂ ಮಹಾಮಾರಿ ಕೊರೊನಾ ಅವರನ್ನು ಕಾಡಿತ್ತು. ಕಳೆದ ತಿಂಗಳು ಸೋಂಕಿನಿಂದ ಬಳಲುತ್ತಿದ್ದ ಅವರಿಗೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರ ನಿಗಾವಣೆಯಲ್ಲಿ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡಿತ್ತು. ಕೊರೊನಾದಿಂದ ಗುಣಮುಖರಾಗಿ ದೊರೆಸ್ವಾಮಿ ಅವರು ಚೇತರಿಸಿಕೊಂಡಿದ್ದರು. ಆದರೆ ಪದೆ ಪದೆ ಅವರನ್ನು ಅನಾರೋಗ್ಯ ಕಾಡುತ್ತಿತ್ತು. ಬುಧವಾರ ಮಧ್ಯಾಹ್ಞ 1.30ರ ಸುಮಾರಿನಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

     ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ ಅವರು ಸಾಹಿತ್ಯ ಮಂದಿರ ಪ್ರಕಾಶನ ಸಂಸ್ಥೆ ಹಾಗೂ ಪೌರವಾಣಿ ಎಂಬ ದೈನಿಕ ಪತ್ರಿಕೆ ನಡೆಸುತ್ತ ಪತ್ರಕರ್ತರಾಗಿಯೂ ಗುರುತಿಸಿಕೊಂಡಿದ್ದರು. ತಮ್ಮ ಇಳಿ ವಯಸ್ಸಿನಲ್ಲೂ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ದೊರೆಸ್ವಾಮಿ ಅವರು ಭ್ರಷ್ಟರ ಪಾಲಿನ ಸಿಂಹಸ್ವಪ್ನವಾಗಿದ್ದರು.

     ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದವರ ಪೈಕಿ ಸಾಕ್ಷಿ ಪ್ರಜ್ಞೆಯಂತಿದ್ದ ದೊರೆ ಸ್ವಾಮಿ ಅವರು ನಾಡಿನ ಹಲವು ವಿದ್ಯಮಾನಗಳ ಜೊತೆ ಬೆರೆತು ಹೋಗಿದ್ದರು. ಯಾವುದೇ ಹೋರಾಟ, ಸತ್ಯಾಗ್ರಹ, ಧರಣಿ, ಚರ್ಚೆ, ಕಾರ್ಯಾಗಾರ ಎಲ್ಲದರಲ್ಲೂ ದೊರೆಸ್ವಾಮಿ ಕಾಣಿಸಿಕೊಳ್ಳುತ್ತಿದ್ದರು. ಕಳೆದ ಒಂದೂವರೆ ವರ್ಷದಿಂದ ವಯೋಸಹಜ ಬಳಲಿಕೆ ಹಾಗೂ ಕೋವಿಡ್ ಆತಂಕದಿಂದ ಅವರು ಹೊರಗೆ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ.

      ನಾಡಿನಲ್ಲಿ ಸುಧಾಕರ್ ಚತುರ್ವೇದಿ ಮತ್ತು ದೊರೆಸ್ವಾಮಿ ಸೇರಿದಂತೆ ಕೆಲವೇ ಕೆಲವು ಬೆರಳಣಿಕೆಯಷ್ಟು ಮಂದಿ ಹಿರಿಯರು ಸ್ವಾತಂತ್ರ್ಯ ಸಂಗ್ರಾಮಕ್ಕೆ ನೇರ ಸಾಕ್ಷಿಯಾಗಿದ್ದರು. ಸುಧಾಕರ್ ಚತುರ್ವೇದಿ ಅವರು ಕಳೆದ ವರ್ಷ ಇಹದ ಪ್ರಯಾಣ ಮುಗಿಸಿದರೆ ದೊರೆಸ್ವಾಮಿ ಅವರು ಈಗ ಅಗಲಿದ್ದಾರೆ. ಈ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಕೊಂಡಿ ಕಳಚಿದಂತಾಗಿದೆ. ಮೈಸೂರು ಸಂಸ್ಥಾನದ ಹಾರೋಹಳ್ಳಿಯಲ್ಲಿ 1918ರ ಏಪ್ರಿಲ್ 10ರಂದು ಜನಿಸಿದ ದೊರೆ ಸ್ವಾಮಿ ಅವರು, ಐದು ವರ್ಷಕ್ಕೆ ತಂದೆ ತಾಯಿಗಳನ್ನು ಕಳೆದುಕೊಂಡರು. ತಾತ ಶಾಮಣ್ಣ ಶಾನುಭೋಗರಾಗಿದ್ದರು, ಅವರ ಜೊತೆ ದೊರೆಸ್ವಾಮಿ ಬೆಳೆದರು. ಶಾಮಣ್ಣ ಶಾಸನ ಸಭೆಯ ನಾಮನಿರ್ದೇಶಿತ ಸದಸ್ಯರಾಗಿ ಕೆಲಸ ಮಾಡಿದ್ದರು. ದೊರೆಸ್ವಾಮಿ ಅವರ ಅಣ್ಣ ಸೀತಾರಾಮ್ ಸ್ವಾತಂತ್ರ್ಯದ ಬಳಿಕ ಬೆಂಗಳೂರಿನ ಮೆಯರ್ ಆಗಿ ಕೆಲಸ ಮಾಡಿದ್ದರು.
ಹುಟ್ಟೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿದ ದೊರೆಸ್ವಾಮಿ ಅವರು ಬಳಿಕ ಬೆಂಗಳೂರಿಗೆ ಆಗಮಿಸಿದರು. ಬೆಂಗಳೂರು ಕೇಂದ್ರ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು. ಪದವಿ ಬಳಿಕ ಪ್ರೌಢಶಾಲೆಯಲ್ಲಿ ಗಣಿತ ಮತ್ತು ಭೌತಶಾಸ್ತ್ರದ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.
ಬಳಿಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡ ದೊರೆಸ್ವಾಮಿ ಅವರು, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪೆÇೀಸ್ಟ್ ಬಾಕ್ಸ್ ನಲ್ಲಿ ಸಣ್ಣ ಪ್ರಮಾಣದ ಬಾಂಬ್ ಅಳವಡಿಸುವ ಮೂಲಕ ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಬ್ರಿಟಿಷ್ ರಾಜ್ ವಿರುದ್ಧ ತೀವ್ರ ಸ್ವರೂಪದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.

     ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೀಡಿದ್ದ ಹೇಳಿಕೆಗಾಗಿ ಕೆಲವರು ದೊರೆ ಸ್ವಾಮಿ ಅವರ ಸ್ವಾತಂತ್ರ್ಯ ಹೋರಾಟವನ್ನೇ ಪ್ರಶ್ನಿಸಿದ್ದರು.

ಭೂ ಕಬಳಿಕೆ ವಿರುದ್ಧ ಹೋರಾಟ :

      2014 ರಲ್ಲಿ ದೊರೆಸ್ವಾಮಿ ಅವರು ಎಎಪಿ, ಎಪಿ ರಾಮಸ್ವಾಮಿ ಅವರ ಸಹಕಾರದಿಂದ ಬೆಂಗಳೂರಿನಲ್ಲಿ ಭೂ ವಿರೋಧಿ ಪ್ರತಿಭಟನೆಗಳನ್ನು ಆರಂಭಿಸಿದರು. ಬೆಂಗಳೂರು ನಗರ ಜಿಲ್ಲೆಯ ಎನ್‍ಕ್ರೋಚ್‍ಮೆಂಟ್ ಮೇಲೆ ಜಂಟಿ ಶಾಸಕಾಂಗ ಸಮಿತಿ ಭಾಗವಾಗಿದ್ದ ರಾಮಸ್ವಾಮಿ ಮತ್ತು ಇತರೆ ಕಾರ್ಯಕರ್ತರು, ಸಂತೋಷ್ ಹೆಗಡೆ ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳು ಬೆಂಬಲ ನೀಡಿದರು. ಇದು ಬಹುದೊಡ್ಡ ಕ್ರಾಂತಿಗೆ ನಾಂದಿಯಾಯಿತು.

ಪ್ರಶಸ್ತಿಗಳು :

     ದೊರೆಸ್ವಾಮಿ ಅವರು, ಗಾಂಧಿಸೇವಾ ಪುರಸ್ಕಾರ, ಬಸವ ಪುರಸ್ಕಾರ, ರಾಮ್ ನಾಥ್ ಗೋಯೆಂಕಾ ಜರ್ನಲಿಜಂ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ.

      ದೊರೆಸ್ವಾಮಿ ಅವರ ಪತ್ನಿ ಲಲಿತಮ್ಮ 2019ರ ಡಿಸೆಂಬರ್ ನಲ್ಲಿ ನಿಧನರಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದೊರೆಸ್ವಾಮಿ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಹಲವಾರು ಸಚಿವರು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

`ಪ್ರಜಾಪ್ರಗತಿ’ಯೊಂದಿಗೆ ನಿಕಟ ಸಂಬಂಧ

      ಸಮಾಜಮುಖಿ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರು ತುಮಕೂರಿನ ಕಡೆಗೆ ಬಂದ ಬಹಳಷ್ಟು ಸಂದರ್ಭಗಳಲ್ಲಿ `ಪ್ರಜಾಪ್ರಗತಿ’ ಪತ್ರಿಕಾ ಕಚೇರಿಗೆ ಆಗಮಿಸಿದ್ದರು. ಸಂಪಾದಕರಾದ ಎಸ್.ನಾಗಣ್ಣ ಅವರೊಂದಿಗೆ ತುಂಬಾ ಹಿಂದಿನಿಂದಲೂ ಆತ್ಮೀಯ ಸಂಬಂಧ ಹೊಂದಿದ್ದ ದೊರೆಸ್ವಾಮಿ ಅವರನ್ನು ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಸುದ್ದಿ ಮತ್ತು ಲೇಖನಗಳು ಗಮನ ಸೆಳೆದಿದ್ದವು. ಬಹಳಷ್ಟು ಹೊತ್ತು ಸಂಪಾದಕರ ಕಚೇರಿಯಲ್ಲಿ ಕುಳಿತು ದೈನಂದಿನ ವಿದ್ಯಮಾನಗಳು, ಸಾಮಾಜಿಕ ಮತ್ತು ಸಮಕಾಲೀನ ಸಂದರ್ಭಗಳ ಬಗ್ಗೆ ಚರ್ಚಿಸಿ ಹೋಗುತ್ತಿದ್ದರು. `ಪ್ರಗತಿ ಟಿವಿ’ಯ ಚರ್ಚೆಯಲ್ಲಿಯೂ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಪ್ರಸ್ತುತ ಸಮಾಜದ ಆಗುಹೋಗುಗಳ ಬಗ್ಗೆ, ಭ್ರಷ್ಟಾಚಾರದ ಬಗ್ಗೆ, ಯುವಶಕ್ತಿ ನೈತಿಕ ಮೌಲ್ಯ ಕಳೆದುಕೊಳ್ಳುತ್ತಿರುವ ಬಗ್ಗೆ, ರಾಜಕಾರಣಿಗಳು ಭ್ರಷ್ಟ ಹಾದಿಯಲ್ಲಿ ನಡೆಯುತ್ತಿರುವ ಬಗ್ಗೆ ಒಟ್ಟಾರೆ ವ್ಯವಸ್ಥೆಯ ಬಗ್ಗೆ ತಮ್ಮ ಸಿಟ್ಟು, ಆಕ್ರೋಶವನ್ನು ಹೊರಹಾಕುತ್ತಿದ್ದ ಆ ದಿನಗಳು ಸ್ಮರಣಾರ್ಹ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap