ಹುಬ್ಬಳ್ಳಿಯಿಂದ ವಿವಿದೆಡೆಗೆ ವಿಮಾನಯಾನ : ನಾಯ್ಡು ಜೊತೆ ಜೋಷಿ ಸಮಾಲೋಚನೆ

ನವದೆಹಲಿ

   ಕರ್ನಾಟಕದ ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಅಹಮದಾಬಾದ್ ಮತ್ತು ಚೆನ್ನೈಗೆ ವಿಮಾನಯಾನ ಸೌಲಭ್ಯ ಕಲ್ಪಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಾಗರಿಕ ವಿಮಾನಯಾನ ಸಚಿವರ ಗಮನ ಸೆಳೆದಿದ್ದಾರೆ. ನವದೆಹಲಿಯ ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಜೋಶಿ ಅವರು ಸಚಿವ ರಾಮಮೋಹನ ನಾಯ್ಡು ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದರು.ಹುಬ್ಬಳ್ಳಿಯಿಂದ ಅಹಮದಾಬಾದ್ ನಡುವೆ ವಿಮಾನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸಚಿವ ಜೋಶಿ ಮನವಿ ಮಾಡಿದರು. 

    ಹುಬ್ಬಳ್ಳಿಯಿಂದ ಚೆನ್ನೈಗೆ ಇರುವ ವಿಮಾನ ಸಂಪರ್ಕವನ್ನು ಸ್ಥಗಿತಗೊಳಿಸಲಾಗುತ್ತಿದ್ದು, ಈ ವಿಮಾನಯಾನವನ್ನು ಮುಂದುವರೆಸುವಂತೆ ಸಚಿವ ನಾಯ್ಡು ಅವರಲ್ಲಿ ಜೋಶಿ ಮನವಿ ಮಾಡಿದರು. ಛೋಟಾ ಮುಂಬೈ ಎಂದೇ ಹೆಸರಾದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಅನೇಕ ಉದ್ಯಮಿಗಳ ಸಂಪರ್ಕವಿದೆ. ಅಹಮದಾಬಾದ್ ಮತ್ತು ಚೆನ್ನೈ ನಗರಗಳಿಗೆ ವಿಮಾನ ಸಾರಿಗೆ ಸೌಲಭ್ಯಕ್ಕೆ ಹೆಚ್ಚು ಆದ್ಯತೆ ನೀಡಿದಲ್ಲಿ ಉದ್ಯಮಿಗಳ ತ್ವರಿತ ಸಂಚಾರ ಮತ್ತು ನಿಕಟ ಸಂಪರ್ಕಕ್ಕೆ ಅನುಕೂಲವಾಗುತ್ತದೆ ಎಂದು ಜೋಶಿ ಹೇಳಿದರು.

   ಹುಬ್ಬಳ್ಳಿ ಒಂದು ಪ್ರಮುಖ ವಾಣಿಜ್ಯ ಕೇಂದ್ರ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹ ಗುರುತಿಸಿಕೊಳ್ಳುತ್ತಿದೆ. ಅಂತೆಯೇ ರೈಲ್ವೆ ನಿಲ್ದಾಣದ ಜತೆ ವಿಮಾನ ನಿಲ್ದಾಣವೂ ಅಂತಾರಾಷ್ಟ್ರೀಯ ಮೆರುಗಿನಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದು ಜೋಶಿ ಸಚಿವ ನಾಯ್ಡು ಅವರ ಗಮನ ಸೆಳೆದರು.  

   ಹುಬ್ಬಳ್ಳಿ ವಿಮಾನ ನಿಲ್ದಾಣದ ವಿಶಾಲವಾದ ಪ್ರದೇಶದಲ್ಲಿ ಹೊಸ ಟರ್ಮಿನಲ್ ಸಹ ನಿರ್ಮಾಣವಾಗುತ್ತಿದೆ. ಪ್ರಯಾಣಿಕರಿಗೆ ಮತ್ತು ವಿಮಾನಗಳಿಗೆ ಅಗತ್ಯ ಮೂಲ ಸೌಲಭ್ಯ ಇಲ್ಲಿದ್ದು, ಚೆನ್ನೈ ಸಂಪರ್ಕದ ವಿಮಾನಯಾನ ಸ್ಥಗಿತಗೊಳಿಸದೆ ಮುಂದುವರೆಸಿ ಎಂದು ನಾಗರಿಕ ವಿಮಾನಯಾನ ಸಚಿವರಿಗೆ ಪ್ರಲ್ಹಾದ್ ಜೋಶಿ ಮನವಿ ಮಾಡಿದರು.

Recent Articles

spot_img

Related Stories

Share via
Copy link
Powered by Social Snap