ರಿಯಾದ್:
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಆಜಾದ್ ಪಾರ್ಟಿ ಅಧ್ಯಕ್ಷ ಗುಲಾಂ ನಬಿ ಆಜಾದ್ ಅವರನ್ನು ಮಂಗಳವಾರ ಕುವೈತ್‌ನಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸರ್ವ ಪಕ್ಷ ನಿಯೋಗದೊಂದಿದೆ ಕುವೈತ್‌ಗೆ ತೆರಳಿದ್ದಾಗ ಅವರ ಆರೋಗ್ಯದಲ್ಲಿ ಏರುಪೇರು ಕಂಡಿದೆ. ತಕ್ಷಣವೇ ಅವರನ್ನು ಆಸ್ಪತ್ರಗೆ ದಾಖಲು ಮಾಡಲಾಗಿದೆ. ಸದ್ಯ ಆಜಾದ್ ಅವರನ್ನು ವೈದ್ಯರ ನಿಗಾದಲ್ಲಿ ಇಡಲಾಗಿದೆ ಎಂದು ಬಿಜೆಪಿ ಸಂಸದ ಬೈಜಯಂತ್ ಜೈ ಪಾಂಡಾ ಅವರು ತಿಳಿಸಿದ್ದಾರೆ.
ನಮ್ಮ ನಿಯೋಗದ ಭೇಟಿಯ ಮಧ್ಯದಲ್ಲಿ ಗುಲಾಂ ನಬಿ ಆಜಾದ್ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು ಎಂದು ನಿಯೋಗದ ನೇತೃತ್ವ ವಹಿಸಿರುವ ಪಾಂಡಾ ಹೇಳಿದ್ದಾರೆ. ಅವರನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ. ಅವರನ್ನು ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಸಂಸದ ತಿಳಿಸಿದ್ದಾರೆ. ಬಹ್ರೇನ್ ಮತ್ತು ಕುವೈತ್‌ನಲ್ಲಿ ನಡೆದ ಸಭೆಗಳಲ್ಲಿ ಅವರು ಬಹಳ ಮುಖ್ಯವಾದ ಕೊಡುಗೆಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದರು. ಅವರ ಅನಾರೋಗ್ಯದಿಂದ ನನಗೆ ದುಃಖವಾಗಿದೆ ಎಂದು ಅವರು ಹೇಳಿದ್ದಾರೆ.
ಅನಾರೋಗ್ಯದ ಹೊರತಾಗಿಯೂ, ಅವರು ದೇಶಕ್ಕಾಗಿ ನಿಯೋಗದ ಭಾಗವಾಗಲು ಒಪ್ಪಿಕೊಂಡರು. ಇಂದಿಗೂ ನಾವು ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾದಾಗ ಅವರ ಕಣ್ಣುಗಳು ಕಣ್ಣೀರಿನಿಂದ ತುಂಬಿದ್ದವು. ಇಂದಿನ ಕಾಲದಲ್ಲಿ ಅಂತಹ ರಾಜಕಾರಣಿಗಳನ್ನು ಕಂಡುಹಿಡಿಯುವುದು ಕಷ್ಟ. ಅವರಿಗೆ ಶೀಘ್ರ ಚೇತರಿಕೆ ಸಿಗಲಿ ಎಂದು ಹಾರೈಸುತ್ತೇವೆ ಎಂದು ನಿಶಿಕಾಂತ್ ದುಬೆ ಹೇಳಿದ್ದಾರೆ.
ಕುವೈತ್‌ನಲ್ಲಿ ತೀವ್ರ ಶಾಖದಿಂದಾಗಿ ನನ್ನ ಆರೋಗ್ಯವು ತೊಂದರೆಗೊಳಗಾಗಿದ್ದರೂ, ದೇವರ ದಯೆಯಿಂದ ನಾನು ಚೆನ್ನಾಗಿದ್ದೇನೆ ಮತ್ತು ಚೇತರಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ ಎಂದು ಗುಲಾಂ ನಬಿ ಆಜಾದ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ನಿಮ್ಮೆಲ್ಲರ ಕಾಳಜಿ ಮತ್ತು ಪ್ರಾರ್ಥನೆಗಳಿಗೆ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ.
ಭಯೋತ್ಪಾದನೆಗೆ ಪಾಕಿಸ್ತಾನದ ಬೆಂಬಲವನ್ನು ಜಗತ್ತಿಗೆ ಸಾರಲು ಹೋಗಿರುವ ಭಾರತೀಯ ಸರ್ವಪಕ್ಷ ಸಂಸದೀಯ ನಿಯೋಗ, ವಿದೇಶಗಳಲ್ಲಿ ಪಾಕಿಸ್ತಾನವನ್ನು ಬೆತ್ತಲು ಮಾಡುವ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. ಕುವೈತ್‌ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತಾನಾಡಿರುವ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ಪಾಕಿಸ್ತಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
