ಬೆಂಗಳೂರು:
ವನ್ಯಜೀವಿ ಸಪ್ತಾಹದ ಆರಂಭದ ದಿನವೇ ಮಲೆ ಮಹದೇಶ್ವರ ಬೆಟ್ಟ ಕಾನನದ ಹನೂರು ವಲಯದಲ್ಲಿ ಮತ್ತೊಂದು ಹುಲಿ ಹತ್ಯೆ ಆಗಿರುವ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪಿಸಿಸಿಎಫ್ ನೇತೃತ್ವದ ತಂಡದಿಂದ ತನಿಖೆಗೆ ಆದೇಶ ನೀಡಿದ್ದಾರೆ.
ಈ ಸಂಬಂಧ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಲಿಖಿತ ಆದೇಶ ನೀಡಿರುವ ಅವರು, ಮಲೆ ಮಹದೇಶ್ವರ ಬೆಟ್ಟದ ಕಾನನದ ಹನೂರು ವಲಯದ, ಹನೂರು ಗಸ್ತಿನಲ್ಲಿರುವ ಪಚ್ಚೆದೊಡ್ಡಿ ಗ್ರಾಮದ ಬಳಿ ನಿನ್ನೆ ಸತ್ತ ಹುಲಿಯ ಅರ್ಧ ಕಳೇಬರ ಪತ್ತೆಯಾಗಿರುವ ಬಗ್ಗೆ ಪಿಸಿಸಿಎಫ್ ಸ್ಮಿತಾ ಬಿಜ್ಜೂರು ಅವರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಲು ಆದೇಶಿಸುವಂತೆ ಸೂಚಿಸಿದ್ದಾರೆ.
ಈ ಕಾನನದಲ್ಲಿ ಕಳೆದ 3 ವರ್ಷದಲ್ಲಿ ದಾಖಲಾಗಿರುವ ಕಳ್ಳಬೇಟೆ ಪ್ರಕರಣಗಳ ಬಗ್ಗೆಯೂ ಗಮನ ಹರಿಸಿ, ಹಿಂದಿನ ತನಿಖಾ ವರದಿಗಳನ್ನೂ ಪರಾಮರ್ಶಿಸಿ ಮುಂದೆ ಈ ಭಾಗದಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮವಹಿಸಲು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಹಾಗೂ ಕಳ್ಳಬೇಟೆಗಾರರ ವಿರುದ್ಧ ಸೂಕ್ತ ಕ್ರಮದ ಶಿಫಾರಸಿನೊಂದಿಗೆ 8 ದಿನಗಳಲ್ಲಿ ವರದಿ ಸಲ್ಲಿಸಲು ಮತ್ತು ಹುಲಿ ಹಂತಕರನ್ನು ಪತ್ತೆ ಮಾಡಿ ಅವರಿಗೆ ಕಾನೂನು ರೀತ್ಯ ದಂಡನೆ ಕೊಡಿಸಲು ತುರ್ತು ಕ್ರಮ ವಹಿಸಲು ಆದೇಶ ಹೊರಡಿಸುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ಈ ಘಟನೆ ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ಧಾಮದಲ್ಲಿ ನಿರಂತರವಾಗಿ ವನ್ಯಜೀವಿಗಳ ಕಳ್ಳಬೇಟೆ ನಡೆಯುತ್ತಿರುವುದನ್ನು ದೃಢಪಡಿಸುತ್ತಿದ್ದು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಹುಲಿ ಕಳೇಬರ ಸಿಕ್ಕಿದ ವಿಚಾರವಾಗಿ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅಧಿಕಾರಿಗಳು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಹನೂರು ಗಸ್ತಿನಲ್ಲಿರುವ ಪಚ್ಚೆದೊಡ್ಡಿ ಗ್ರಾಮದ ಹತ್ತಿರ ಗುರುವಾರ ಸಂಜೆ ನಮ್ಮ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಸತ್ತ ಹುಲಿಯ ಅರ್ಧ ಕಳೇಬರವೊಂದು ಮಣ್ಣಿನಲ್ಲಿ ಹುದುಗಿಸಿದ್ದು ಪತ್ತೆಯಾಗಿದೆ. ಹುಲಿಯ ತಲೆ, ಭುಜ ಮುಂದಿನ ಕಾಲುಗಳು ಪತ್ತೆಯಾಗಿದ್ದು ಉಳಿದ ಭಾಗಗಳು ಇನ್ನು ಪತ್ತೆಯಾಗಿಲ್ಲ. ಸಿಕ್ಕಿರುವ ಕಳೇಬರದ ಭಾಗದಲ್ಲಿ ಉಗುರುಗಳು ಮತ್ತು ಹಲ್ಲುಗಳು ಇದ್ದು, ಕಳೇಬರದ ಇನ್ನುಳಿದ ಭಾಗವನ್ನು ಹುಡುಕಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಕಳ್ಳ ಬೇಟೆಯ ಪ್ರಕರಣವೆಂದೇ ಪರಿಗಣಿಸಿ ತನಿಖೆ ಮಾಡಲಾಗುತ್ತಿದೆ. ಸೀನ್ ಆಫ್ ಕೈಂ , ಶ್ವಾನ ತನಿಖಾ ದಳ ಮತ್ತಿತರ ಸಹಾಯದಿಂದ ಅರಣ್ಯ ಇಲಾಖೆ ತಕ್ಷಣವೇ ತನಿಖೆ ಪ್ರಾರಂಭಿಸಿದೆ. ಪ್ರಕರಣಕ್ಕೆ ಕಾರಣ ಮತ್ತು ಕಾರಣಕರ್ತರನ್ನು ಅದಷ್ಟು ಬೇಗೆ ಪತ್ತೆ ಹಚ್ಚಲಾಗುವುದು. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ಮಾಹಿತಿಯನ್ನು ನಂತರ ನೀಡಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.








