ಪಡಿತರಕ್ಕಾಗಿ ಮುಂಜಾನೆಯಿಂದಲೇ ಮೈಲುದ್ದದ ಸಾಲು!

ಹುಳಿಯಾರು : 

      ಲಾಕ್‍ಡೌನ್ ಕಾರಣ ಪಡಿತರ ಪಡೆಯಲು ಫಲಾನುಭವಿಗಳು ಬೆಳ್ಳಂಬೆಳಿಗ್ಗೆ ನ್ಯಾಯಬೆಲೆ ಅಂಗಡಿಗಳ ಮುಂಭಾಗದಲ್ಲಿ ರಸ್ತೆಯುದ್ದಕ್ಕೂ ಮೈಲುದ್ದದ ಸಾಲು ನಿಂತು ಗಂಟೆಗಟ್ಟಲೆ ಕಾದು ಪಡಿತರ ಪಡೆಯುವ ದೃಶ್ಯ ಹುಳಿಯಾರು ಪಟ್ಟಣದಲ್ಲಿ ಸಾಮಾನ್ಯವಾಗಿದೆ.

      ಬೆಳಗ್ಗೆ 6 ರಿಂದ 10 ಗಂಟೆಯವರೆವಿಗೆ ಲಾಕ್‍ಡೌನ್ ಸಡಿಲಿಕೆ ಇದೆ. ನಂತರ ಓಡಾಡಿದರೆ ಪೊಲೀಸರ ಲಾಠಿ ರುಚಿ ನಿಶ್ಚಿತ. ಹಾಗಾಗಿ ಹಳ್ಳಿಗಳಿಂದ ಫಲಾನುಭವಿಗಳು ಸೈಕಲ್, ಬೈಕ್ ಮೂಲಕ ಬೆಳ್ಳಂಬೆಳಗ್ಗೆಯೇ ನ್ಯಾಯಬೆಲೆ ಅಂಗಡಿಗಳ ಮುಂದೆ ಬಂದು ಕ್ಯೂ ನಿಲ್ಲುತ್ತಿದ್ದಾರೆ. ಹಳ್ಳಿಗರು ಬರುವುದನ್ನು ನೋಡಿ ಪಟ್ಟಣದವರು ಬಂದು ಸರತಿಯಲ್ಲಿ ಸೇರುತ್ತಿದ್ದಾರೆ. ಹಾಗಾಗಿ ಪ್ರತಿ ನ್ಯಾಯಬೆಲೆ ಅಂಗಡಿಗಳ ಮುಂದೆ ಮೈಲುದ್ದ ಸರತಿ ಇದ್ದೇ ಇರುತ್ತದೆ.

      ಬಯೋಮೆಟ್ರಿಕ್ ಮೂಲಕ ಪಡಿತರ ವಿತರಿಸುತ್ತಿರುವುದರಿಂದ ಒಬ್ಬೊಬ್ಬರಿಗೆ ಕನಿಷ್ಠ ಎಂದರೂ ಹದಿನೈದಿಪ್ಪತ್ತು ನಿಮಿಷ ಸಮಯ ಹಿಡಿಯುತ್ತಿದೆ. ಹಾಗಾಗಿ ಗಂಟೆಗಟ್ಟಲೆ ಕ್ಯೂ ನಿಲ್ಲುವುದು ಅನಿವಾರ್ಯ. ಅಲ್ಲದೆ ಮೊದಲೆಲ್ಲ ಆಟೊದಲ್ಲಿ ತೆಗೆದು ಕೊಂಡು ಹೋಗುತ್ತಿದ್ದರು. ಈಗ ಆಟೊ ಕೂಡ ಬಿಡುತ್ತಿಲ್ಲವಾದ್ದರಿಂದ ದಿನಸಿ ವಸ್ತುಗಳನ್ನು ಕೊಂಡವರು ತಲೆ ಮತ್ತು ಹೆಗಲ ಮೇಲೆ ಹೊತ್ತುಕೊಂಡು ಹೋಗುವುದು ಸಾಮಾನ್ಯ ದೃಶ್ಯವಾಗಿತ್ತು.

      ಹಳ್ಳಿಗಳಿಂದ ಬರುವ ಫಲಾನುಭವಿಗಳು ಪಡಿತರ ತೆಗೆದುಕೊಂಡು ಹೋಗಲು ಬಹಳ ಪ್ರಯಾಸ ಪಡುತ್ತಿದ್ದಾರೆ. ಮಕ್ಕಳು, ವೃದ್ಧರು ಬಿಸಿಲ ಝಳದಲ್ಲಿ ತಲೆಮೇಲೆ ಹೊತ್ತುಕೊಂಡು ಹೋಗುವುದು ಕಲ್ಲು ಹೃದಯವನ್ನೂ ಕರಿಗಿಸುವ ದೃಶ್ಯವಾಗಿದೆ. ಹಾಗಾಗಿ ಹಳ್ಳಿಗಳಿಗೆ ತೆರಳಿ ಪಡಿತರ ವಿತರಿಸುವ ವ್ಯವಸ್ಥೆ ಮಾಡಲು ತಹಸೀಲ್ದಾರ್ ಕ್ರಮ ಕೈಗೊಳ್ಳಬೇಕಿದೆ. ಇನ್ನು ಗುಂಪುಗೂಡದಂತೆ ತಡೆಯುವ ನಿಟ್ಟಿನಲ್ಲಿ ಫಲಾನುಭವಿಗಳಿಗೆ ಟೋಕನ್ ವಿತರಿಸುವ ವ್ಯವಸ್ಥೆಯ ಜೊತೆಗೆ ಬಯೋಮೆಟ್ರಿಕ್ ಇಲ್ಲದೆ ಕಾರ್ಡುದಾರರಿಗೆಲ್ಲ ಪಡಿತರ ವಿತರಿಸಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link