ಹುಳಿಯಾರು:
ಕೊರೊನಾ ಕಾರಣ ಮಾವಿನ ಹಣ್ಣಿನ ವ್ಯಾಪಾರ ಸಂಪೂರ್ಣ ಕುಸಿದಿದೆ. ಮಾವು ಖರೀದಿಸುವವರ ಸಂಖ್ಯೆ ಬಹಳ ವಿರಳವಾಗಿದೆ. ಹೀಗಾಗಿ ವ್ಯಾಪಾರಸ್ಥರು ನಷ್ಟ ಅನುಭವಿಸುವಂತಾಗಿದೆ.
ಸರ್ಕಾರ ತಳ್ಳು ಗಾಡಿಗಳಲ್ಲಿ ಹಣ್ಣಿನ ವ್ಯಾಪಾರಕ್ಕೆ ಅವಕಾಶ ನೀಡಿರುವುದರಿಂದ, ಅನೇಕರು ಅಂಗಡಿ ಮುಚ್ಚಿ ತಳ್ಳು ಗಾಡಿಗಳಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಅಲ್ಲದೇ ಮಹಿಳೆಯರು ಬುಟ್ಟಿಯಲ್ಲಿ ಮಾರುತ್ತಿದ್ದಾರೆ. ಆದರೂ ವ್ಯಾಪಾರದ ಅವಧಿ 6 ರಿಂದ 10 ಘಂಟೆವರೆಗೆ ಮಾತ್ರ ಇರುವುದರಿಂದ ವ್ಯಾಪಾರವೂ ಉತ್ತಮವಾಗಿಲ್ಲ.
ಹುಳಿಯಾರು ಪಟ್ಟಣದಲ್ಲಿ ಸೀಜನ್ ಫ್ರೂಟ್ಸ್ ವ್ಯಾಪಾರವನ್ನೇ ನೆಚ್ಚಿಕೊಂಡಿರುವ ಅನೇಕ ಕುಟುಂಬಗಳು ಜೀವನ ನಡೆಸುತ್ತಿವೆ. ಕಳೆದ ಎರಡು ತಿಂಗಳ ಹಿಂದೆ ದ್ರಾಕ್ಷಿ ವ್ಯಾಪಾರ ಮಾಡಿ ಅಲ್ಪಸ್ಪಲ್ಪ ಆದಾಯ ಗಿಟ್ಟಿಸಿಕೊಂಡಿದ್ದ ವ್ಯಾಪಾರಿಗಳು ಈಗ ಕೋವಿಡ್ ಲಾಕ್‍ಡೌನ್ ಕಾರಣ ಮಾವು ಮಾರಲಾಗದೆ ಚಿಂತಾಕ್ರಾಂತರಾಗಿದ್ದಾರೆ. ಕೆಲವರು ಮಾವಿನ ಮರದಲ್ಲೇ ವ್ಯಾಪಾರ ಮಾಡಿ ನಂತರ ಹಣ್ಣು ಮಾಡಿ ಮಾರುವವರಿದ್ದಾರೆ. ಸದ್ಯ ವ್ಯಾಪಾರವಾಗದೇ ಹಣ್ಣುಗಳು ಕೊಳೆಯುತ್ತಿರುವುದು ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ.
ಕೆಲ ವ್ಯಾಪಾರಿಗಳು ರೈತರಿಗೆ ಮುಂಗಡವಾಗಿ ಹಣ ಪಾವತಿಸಿ ಲಾರಿಯಲ್ಲಿ ಬೇರೆ ಬೇರೆ ನಗರಗಳಿಗೆ ಹಾಗೂ ಬೇರೆ ರಾಜ್ಯಗಳಿಗೆ ಕಳುಹಿಸುತ್ತಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ಲಾಕ್‍ಡೌನ್‍ನಿಂದಾಗಿ ಬೇರೆ ಮಾರುಕಟ್ಟೆಗಳಿಂದ ಬೇಡಿಕೆ ಬಾರದಾಗಿದೆ. ಹೀಗಾಗಿ ಮರದಿಂದ ಮಾವಿನ ಕಾಯಿ ಕೀಳುವುದೂ ಸಹ ನಷ್ಟವಾಗುತ್ತಿದೆ.
ಅಲ್ಲದೆ ರೈತರು ನೇರವಾಗಿ ಮಾರುಕಟ್ಟೆಗೆ ಬಂದು ಮಾವಿನ ಹಣ್ಣು ಮಾರುತ್ತಿದ್ದರು. ಆದರೆ ಲಾಕ್‍ಡೌನ್‍ನಿಂದ ವ್ಯಾಪಾರ ಮಾಡಲಾಗದೆಂದು ನೆಂಟರಿಷ್ಟರಿಗೆ ಕರೆದು ಪುಕ್ಕಟ್ಟೆ ಹಣ್ಣು ಕೊಡುತ್ತಿದ್ದಾರೆ. ಮಾವು ಒಂದೇ ಅಲ್ಲ ಹಲಸಿನ ಹಣ್ಣಿನ ಕಥೆಯೂ ಇದೆ ಆಗಿದೆ.
ಒಟ್ಟಾರೆ ಮಾವು ಹಾಗೂ ಹಲಸಿನ ಅವಧಿಯಲ್ಲಿ ಒಳ್ಳೆಯ ಲಾಭ ಮಾಡುತ್ತಿದ್ದ ವ್ಯಾಪಾರಿಗಳಿಗೆ ಕೊರೊನಾ ಅಡ್ಡಿಯಾಗಿದ್ದರೆ ಮತ್ತೊಂದು ಕಡೆ ರೈತರಿಗೂ ಕಠಿಣವಾಗಿದೆ. ಖರೀದಿದಾರರ ಸಂಖ್ಯೆ ಕಡಿಮೆ ಇರುವ ಕಾರಣ ಕಾಯಿಗಳಿಗೂ ಬೇಡಿಕೆ ಇಲ್ಲ ಎನ್ನುವ ನೋವು ರೈತರು ಮತ್ತು ವ್ಯಾಪಾರಿಗಳನ್ನು ಕಾಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ