ಹುಳಿಯಾರು :
ಹುಳಿಯಾರು ಪಟ್ಟಣ ಪಂಚಾಯ್ತಿಯ ನೂತನ ಸದಸ್ಯೆ ಶೃತಿ ಸನತ್ ಅವರು ಜೂ.5 ರಂದು ಆಚರಿಸಲಾದ ಪರಿಸರ ದಿನದ ಅಂಗವಾಗಿ ಹುಳಿಯಾರು ಕೆರೆದಡದಲ್ಲಿ 32 ಸಸಿಗಳನ್ನು ನೆಡುವ ಮೂಲಕ ತಮ್ಮ ಪರಿಸರ ಕಾಳಜಿ ವ್ಯಕ್ತಪಡಿಸಿದ್ದಾರೆ.
ಹುಳಿಯಾರು ಬಸ್ ನಿಲ್ದಾಣಕ್ಕೆ ಹಳ್ಳಿಗಳಿಂದ ಬರುವ ಪ್ರಯಾಣಿಕರು ಬಿಸಿಲಿನಲ್ಲಿ ನಿಂತು ಬಸ್‍ಗಳಿಗೆ ಕಾಯುತ್ತಿರುತ್ತಾರೆ. ವೃದ್ಧರು, ಮಹಿಳೆಯರು, ಮಕ್ಕಳು ಗಂಟೆಗಟ್ಟಲೆ ಬಸ್‍ಗಳಿಗಾಗಿ ಬಿಸಿಲಿನಲ್ಲಿ ಕಾಯುತ್ತಿರುತ್ತಾರೆ. ಅಲ್ಲದೆ ಎಳನೀರಿನವರೂ ಸಹ ಬಿಸಿಲಿನಲ್ಲಿ ದಿನಪೂರ್ತಿ ಕುಳಿತು ಮಾರುತ್ತಿರುತ್ತಾರೆ. ಬಸ್ ನಿಲ್ದಾಣ ಕೆರೆ ದಡದಲ್ಲಿರುವುದರಿಂದ ಶಾಶ್ವತ ನೆರಳಿನ ವ್ಯವಸ್ಥೆಯನ್ನು ಕಲ್ಪಿಸಲಾಗುವುದಿಲ್ಲ. ಹಾಗಾಗಿ ಮರದ ನೆರಳಾದರೂ ಸಿಗಲೆಂದು ಸಸಿಗಳನ್ನು ನೆಡಲಾಗಿದೆ ಎಂದು ಸದಸ್ಯೆ ಶೃತಿ ತಿಳಿಸಿದರು.
ಪಪಂ ಮುಖ್ಯಾಧಿಕಾರಿ ಮಂಜುನಾಥ್ ಅವರು ಮಾತನಾಡಿ ಮುಂದಿನ ಪೀಳಿಗೆಗೆ ಹಣ, ಆಸ್ತಿ ಕೊಡುವುದಕ್ಕಿಂತ ಉತ್ತಮ ಪರಿಸರ ಕೊಡಬೇಕು. ಆದರೆ ಮನುಷ್ಯನ ದುರಾಸೆಗೆ ಪರಿಸರ ಮಾಲಿನ್ಯವಾಗಿ ಪ್ರಾಣವಾಯುವನ್ನೂ ದುಡ್ಡುಕೊಟ್ಟು ಖರೀದಿಸುವ ಹಂತಕ್ಕೆ ತಲುಪಿದ್ದೇವೆ. ಒಂದು ಮರ ಕೊಡುವ ಆಮ್ಲಜನಕಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಹಾಗಾಗಿ ಎಲ್ಲರೂ ಗಿಡಮರಗಳನ್ನು ಬೆಳೆಸಲು ಮುಂದಾಗಬೇಕು. ಸದಸ್ಯೆ ಶೃತಿ ಸನತ್ ಅವರು ಪ್ರಯಾಣಿಕರ ಅನುಕೂಲಕ್ಕಾಗಿ ಗಿಡಗಳನ್ನು ನೆಡುತ್ತಿರುವುದು ಅಭಿನಂದನಾರ್ಹ ಕಾರ್ಯ ಎಂದರು.
ಪಪಂ ಪರಿಸರ ಅಧಿಕಾರಿ ಉಮೇಶ್ ಅವರು ಮಾತನಾಡಿ ಒಂದು ಮರ ಮನುಷ್ಯನಲ್ಲದೆ ಪ್ರಾಣಿ, ಪಕ್ಷಿ, ಕೀಟಗಳಿಗೆ ಆಸರೆಯಾಗುವ ಜೊತೆಗೆ ಮಳೆಮೋಡಗಳನ್ನು ಸೆಳೆದು ಧರೆಗೆ ಮಳೆ ಬರಲು ಕಾರಣವಾಗುತ್ತದೆ. ಆದರೆ ಅಭಿವೃದ್ಧಿಯ ನೆಪದಲ್ಲಿ ಮರಗಳನ್ನು ಕಡಿದು ಮನುಷ್ಯ ತನ್ನ ಅವನತಿಗೆ ತಾನೇ ಮುಂದಾಗಿದ್ದಾನೆ. ಮನೆಗೊಂದು ಮರ, ಊರಿಗೊಂದು ವನ ಇರಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮತಮ್ಮ ಮನೆಯ ಮುಂದೆ, ಜಮೀನುಗಳಲ್ಲಿ ಗಿಡ-ಮರಗಳನ್ನು ಯಥೇಚ್ಛವಾಗಿ ಬೆಳಸಬೇಕು. ಮನೆಮುಂದೆ ಸ್ಥಳವಿಲ್ಲದಿದ್ದರೆ ಅಥವಾ ಜಮೀನೇ ಇಲ್ಲದಿದ್ದರೆ ಸಾರ್ವಜನಿಕ ಸ್ಥಳದಲ್ಲಾದರೂ ಗಿಡ-ಮರ ಬೆಳೆಸುವ ಬದ್ಧತೆ ಪ್ರದರ್ಶಿಸಬೇಕು ಎಂದರು.
ವರ್ತಕರ ಸಂಘದ ಅಧ್ಯಕ್ಷ ಎಂಎಸ್‍ಆರ್ ನಟರಾಜ್ ಅವರು ಮಾತನಾಡಿ ಪರಿಸರ ಪ್ರಜ್ಞೆ ಸಾಮಾಜಿಕವಾಗಿ ಎಲ್ಲರಲ್ಲೂ ಬರಬೇಕು. ಇಂದು ಪ್ರಕೃತಿಯ ಮೇಲೆ ಕಾಳಜಿಯಿಲ್ಲದೆ, ಪೂರ್ವಿಕರು ಬೆಳಸಿದ ಮರಗಳನ್ನು ಕಡಿದು ಪರಿಸರ ಅಸಮತೋಲನಕ್ಕೆ ಕಾರಣವಾಗಿದ್ದೇವೆ. ಹುಳಿಯಾರು ಪಟ್ಟಣದಲ್ಲಿಯೂ ಸಹ ಮೊದಲಿದ್ದಂತೆ ಮರಗಿಡಗಳು ಇಲ್ಲದೆ ತಾಪಮಾನ 40 ಡಿಗ್ರಿ ಮುಟ್ಟುತ್ತಿದೆ. ಪಟ್ಟಣದ ಪರಿಸರಾಸಕ್ತರು ಪಪಂ ಸದಸ್ಯೆ ಶೃತಿ ಅವರಂತೆ ಪಟ್ಟಣದಲ್ಲಿ ಗಿಡಗಳನ್ನು ನೆಡಲು ಮುಂದಾದರೆ ವೈಯಕ್ತಿಕವಾಗಿ ತಮ್ಮ ಸಹಕಾರ ಇರುತ್ತದೆ ಎಂದರು.
ಪಪಂ ಸಿಬ್ಬಂದಿಗಳಾದ ವೆಂಕಟೇಶ್, ಕೃಷ್ಣಮೂರ್ತಿ, ಸಾದಿಕ್, ನಾಗರೀಕ ಗುರುಪ್ರಸಾದ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ