ಜನಪ್ರತಿನಿಧಿಗಳ ಮೂಲಕ ಲಸಿಕೆ ಟೋಕನ್ ಹಂಚಿಕೆ : ವಿವಾದ

 ಹುಳಿಯಾರು:

     ಹುಳಿಯಾರಿನ ಎಂಪಿಎಸ್ ಶಾಲೆಯಲ್ಲಿ 18 ರಿಂದ 45 ವರ್ಷ ವಯೋಮಾನದವರಿಗೆ ಕೋವಿಶೀಲ್ಡ್ ಲಸಿಕೆ ಹಾಕಲಾಗುತ್ತಿದ್ದು ಬೆಳಿಗ್ಗೆಯಿಂದಲೇ ಲಸಿಕೆಗಾಗಿ ನೂರಾರು ಜನ ಕಾಯುತ್ತಿದ್ದು ಸರತಿ ಸಾಲು ಹನುಮಂತನ ಬಾಲದಂತೆ ಬೆಳೆದಿತ್ತು. ಆದರೆ ಹಿಂದಿನ ದಿನದ ರಾತ್ರಿಯೇ ಕೌನ್ಸಿಲರ್ ಮೂಲಕ ಟೋಕನ್ ಹಂಚಿಸಿದ್ದು ವಿವಾದಕ್ಕೆ ಕಾರಣವಾಯಿತು.

      18-45 ವಯೋಮಾನದವರಿಗೆ ಲಸಿಕೆ ಕೊಡಲಾಗುತ್ತದೆ ಎಂಬ ವಿಚಾರ ತಿಳಿದು ಸಾಕಷ್ಟು ಮಂದಿ ಬೆಳಗ್ಗೆಯಿಂದಲೇ ಕಾಯುತ್ತಿದ್ದರು. ಆದರೆ ಟೋಕನ್ ಉಳ್ಳವರಿಗೆ ಮಾತ್ರ ಲಸಿಕೆ ಎಂದು ಹೇಳಿದ್ದರಿಂದ ಸ್ವಲ್ಪ ಸಮಯ ಗೊಂದಲದ ವಾತಾವರಣ ಉಂಟಾಗಿತ್ತು. ಸ್ಥಳದಲ್ಲಿ ಟೋಕನ್ ಕೊಡದೆ ಪಟ್ಟಣದ ಎಲ್ಲಾ ವಾರ್ಡಿನ ಪ್ರತಿ ಸದಸ್ಯರಿಗೂ ತಲಾ 15 ಟೋಕನ್‍ಗಳನ್ನು ಹಿಂದಿನ ದಿನದ ರಾತ್ರಿ ವಿತರಿಸಿದ್ದು, ಈ ಬಗ್ಗೆ ಯಾರಿಗೂ ಮಾಹಿತಿ ಇಲ್ಲದ್ದರಿಂದ ಮಾತಿನ ಚಕಮಕಿ ನಡೆಯಿತು.

      ಸರತಿಯಲ್ಲಿ ಕಾದರೂ ಸಹ ಟೋಕನ್ ಇಲ್ಲದೆ ಲಸಿಕೆ ಕೊಡುವುದಿಲ್ಲ ಎಂಬ ಮಾತಿನಿಂದ ಹಲವಾರು ಜನ ಸಿಡಿಮಿಡಿಗೊಂಡು ವಾಪಸ್ ಹೋದ ಪ್ರಸಂಗ ನಡೆಯಿತು. ಹುಳಿಯಾರಿನಲ್ಲಿ ಲಸಿಕೆ ಕೊಡುತ್ತಾರೆ ಎಂದು ಪಕ್ಕದ ಹಳ್ಳಿಗಳಿಂದಲೂ ಬಂದಿದ್ದ ಜನ ಲಸಿಕೆ ಸಿಗದೆ ಹಿಂದಿರುಗಿದರು. ಟೋಕನ್ ಪಡೆದಿದ್ದ ಪಪಂ ಸದಸ್ಯರು ಲಸಿಕೆ ಹಾಕುವ ಸ್ಥಳದಲ್ಲಿ ಉಪಸ್ಥಿತರಿದ್ದು ತಮ್ಮ ಟೋಕನ್ ತಂದವರಿಗೆ ಲಸಿಕೆ ಹಾಕಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಆಶಾ ಕಾರ್ಯಕರ್ತರ ಮೂಲಕ ಈಗಾಗಲೇ ಪಟ್ಟಣದಲ್ಲಿ 18 ವರ್ಷ ಮೇಲ್ಟಟ್ಟವರು ಲಸಿಕೆ ಗಾಗಿ ನೊಂದಣಿ ಮಾಡಿಸಿದ್ದಾರೆ. ಆದರೆ ನೊಂದಣಿ ಮಾಡಿಸಿದ್ದವರನ್ನೂ ಲೆಕ್ಕಿಸದೆ ಪಪಂ ಸದಸ್ಯರು ಕೊಟ್ಟ ಟೋಕನ್ ತಂದವರಿಗೆ ಮಾತ್ರ ಲಸಿಕೆ ಹಾಕಿದರು. ಅಲ್ಲದೆ ಮುಂಜಾನೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದರೂ ಸಹ ಅವರನ್ನು ನಿರ್ಲಕ್ಷ್ಯಿಸಿ ಸದಸ್ಯರ ಟೋಕನ್‍ಗಳಿಗೆ ಮಣೆ ಹಾಕಲಾಯಿತು.
45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವಾಗ 9 ಗಂಟೆಗೆ ಟೋಕನ್ ವಿತರಿಸಿ 10 ಗಂಟೆಯ ನಂತರ ಲಸಿಕೆ ಹಾಕುತ್ತಿದ್ದರು. ಈಗಲೂ ಸಹ ಇದೇ ರೀತಿ ಟೋಕನ್ ಕೊಡಬಹುದೆಂದು ಮುಂಜಾನೆ 7 ಗಂಟೆಯಿಂದಲೂ ಸರತಿ ಸಾಲಿನಲ್ಲಿ ನಿಂತಿದ್ದೆವು. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ರಾತ್ರೋರಾತ್ರಿ ಪಂಚಾಯ್ತಿ ಸದಸ್ಯರಿಗೆ ಟೋಕನ್ ಕೊಟ್ಟಿದ್ದಾರೆ. ಸದಸ್ಯರಿಗೆ ಟೋಕನ್ ಕೊಟ್ಟಿರುವ ಬಗ್ಗೆ ಜನರಿಗೆ ತಿಳಿಸದೆ ಗಂಟೆಗಟ್ಟಲೆ ಜನರನ್ನು ಕ್ಯೂನಲ್ಲಿ ನಿಲ್ಲಿಸಿ ಸಮಯ ವ್ಯರ್ಥ ಮಾಡಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿತ್ತು.
ಒಂದು ಬಾಟಲ್ ಓಪನ್ ಮಾಡಿದರೆ 1 ಮಂದಿಗೆ ಲಸಿಕೆ ಕೊಡಬೇಕು. ಆದರೆ ಟೋಕನ್ ಪಡೆದವರು ಸರಿಯಾದ ಸಮಯಕ್ಕೆ ಬಾರದೆ ಮೊದಲು ಬಂದವರು 10 ಮಂದಿ ಬರುವವರೆವಿಗೂ ಕಾದು ನಂತರ ಲಸಿಕೆ ಪಡೆದರು. ಟೋಕನ್ ಪಡೆದವರೆವಲ್ಲೂ ಸಮಯಕ್ಕೆ ಸರಿಯಾಗಿ ಬಾರದಿದ್ದರಿಂದ ಒಂದೆರಡು ಗಂಟೆಯಲ್ಲಿ ಮುಗಿಯಬೇಕಿದ್ದ ಲಸಿಕಾ ಶಿಬಿರ ಸಂಜೆ 3 ಗಂಟೆಯಾದರೂ ಮುಗಿಯಲಿಲ್ಲ. ಅಚ್ಚರಿ ಎನ್ನುವಂತೆ ಶಿಬಿರ ಮುಗಿದ ನಂತರವೂ ಟೋಕನ್ ಹಿಡಿದುಕೊಂಡು ಕೆಲವರು ಬಂದಿದ್ದರು.

      ಅಲ್ಲದೆ ಇನ್ನೂ ಅನೇಕರ ಬಳಿ ಟೋಕನ್ ಉಳಿದಿದೆ. 300 ಮಂದಿಗೆ ಲಸಿಕೆ ಬಂದಿದ್ದು ಪ್ರತಿ ಸದಸ್ಯರಿಗೆ ತಲಾ 15 ಟೋಕನ್ ಎಂದರೂ 16 ಮಂದಿ ಸದಸ್ಯರಿಂದ 240 ಟೋಕನ್ ವಿತರಣೆ ಆಗಬೇಕು. ಮೊದಲ ದಿನವೇ ಟೋಕನ್ ಪಡೆದವರೆಲ್ಲರಿಗೂ ಲಸಿಕೆ ವಿತರಣೆ ಆಗಬೇಕು. ಇನ್ನೂ ಟೋಕನ್ ಉಳಿದಿದೆ ಎಂದರೆ ಟೋಕನಲ್ಲೂ ಗೋಲ್‍ಮಾಲ್ ನಡೆದಿರಬೇಕು. ಅಥವಾ ಟೋಕನ್ ಪಡೆದವರು ಲಸಿಕೆ ಹಾಕಿಸಿಕೊಳ್ಳಲು ಬರುವುದಕ್ಕೆ ನಿರಾಸಕ್ತಿ ತಾಳಿರಬಹುದು. ಹಾಗಾಗಿ ಲಸಿಕೆ ಹಾಕಿಸಿಕೊಳ್ಳಲು ಉತ್ಸುಕರಾಗಿರುವವರಿಗೆ ಮೊದಲು ಟೋಕನ್ ಕೊಡಿ. ನಂತರ ಲಸಿಕೆ ಉಳಿದಿದ್ದರೆ ಪಂಚಾಯ್ತಿ ಸದಸ್ಯರಿಗೆ ಜನರನ್ನು ಕರೆತರುವ ಟಾಸ್ಕ್ ಕೊಡಲಿ ಎಂಬುದು ಜನರ ಒತ್ತಾಯವಾಗಿದೆ.

      ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸಲೇಬೇಕೆಂಬ ಉದ್ದೇಶದಿಂದ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ಹೆಚ್ಚಿನ ಲಸಿಕೆ ಕೊಡಲಾಗುತ್ತಿದ್ದು, ಭಾನುವಾರ ಒಟ್ಟು 300 ಮಂದಿಗೆ ಲಸಿಕೆ ಬಂದಿತ್ತು. ತಹಸೀಲ್ದಾರ್ ಅವರ ಸೂಚನೆ ಮೇರೆಗೆ ಪಪಂ ಸದಸ್ಯರಿಗೆ ಟೋಕನ್ ಕೊಟ್ಟೆವು. ಹಾಗಾಗಿ ಸ್ವಲ್ಪ ಗೊಂದಲವಾಯಿತು. ಮುಂದಿನ ದಿನಗಳಲ್ಲಿ ಹೆಚ್ಚಿನ ಲಸಿಕೆ ಬರುವುದರಿಂದ ಲಸಿಕೆ ಸಿಗುವುದೋ ಇಲ್ಲವೋ ಎಂಬ ಗೊಂದಲ ಬೇಡ. ಎಲ್ಲರಿಗೂ ಲಸಿಕೆ ದೊರೆಯುತ್ತದೆ. ಅಲ್ಲಿಯವರೆಗೆ ಎಲ್ಲರೂ ಸಹಕರಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link