ಹುಳಿಯಾರು :
ಮಹಾಮಾರಿ ಕೊರೊನಾ 2 ನೇ ಅಲೆಯಿಂದಾಗಿ 2 ತಿಂಗಳು ಲಾಕ್‍ಡೌನ್ ಘೋಷಿಸಲಾಗಿತ್ತು. ಈಗ ಕೊರೊನಾ ಪ್ರಕರಣ ಕಡಿಮೆಯಾದ ಪರಿಣಾಮ ಲಾಕ್‍ಡೌನ್ ಸಡಿಲಿಸಿದ್ದು 2 ತಿಂಗಳ ನಂತರ ಹುಳಿಯಾರು ಪಟ್ಟಣ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ.
ಕಳೆದ 2 ತಿಂಗಳಿನಿಂದ ವ್ಯಾಪಾರ, ಉದ್ಯೋಗವಿಲ್ಲದೆ ಮನೆಯಲ್ಲೆ ಕುಳಿತಿದ್ದ ಜನತೆ ಮುಂದೇನು ಎನ್ನುವ ಚಿಂತೆಯಲ್ಲಿರುವಾಗಲೆ, ಎಲ್ಲವೂ ಎಂದಿನಂತೆ ಆರಂಭಗೊಂಡಿರುವುದು ಬಹುತೇಕ ಜನರಲ್ಲಿ ಸಂತಸದ ಛಾಯೆ ಮೂಡಿಸಿದೆ. ಮಹಾಮಾರಿ ಯಾವುದೇ ಸಮಯದಲ್ಲಿಯೂ ತನ್ನ ಸ್ವರೂಪವನ್ನು ತೋರ್ಪಡಿಸುವ ಸಾಧ್ಯತೆಯ ಅಂಜಿಕೆ ಈಗಲೂ ಜನತೆಯನ್ನು ಕಾಡುತ್ತಿದ್ದು ಏನಾದರೂ ಆಗಲಿ ಬಂದದ್ದನ್ನು ಎದುರಿಸೋಣ ಎನ್ನುವ ಧೈರ್ಯದೊಂದಿಗೆ ವ್ಯಾಪಾರ, ವಹಿವಾಟು ಆರಂಭಿಸಿದ್ದಾರೆ.
ಸಂಜೆ 5 ಗಂಟೆಯವರೆವಿಗೂ ಅಂಗಡಿ ಮುಂಗಟ್ಟುಗಳ ವ್ಯಾಪಾರಕ್ಕೆ ಅವಕಾಶ ನೀಡಿದ್ದರಿಂದ ಪಟ್ಟಣದ ಬಹುತೇಕ ಅಂಗಡಿಗಳು ತೆರೆದಿದ್ದು, ವಾಣಿಜ್ಯ ಚಟುವಟಿಕೆಗಳು ಚುರುಕಾಗಿ ನಡೆದವು. ಪಟ್ಟಣದ ನಿವಾಸಿಗಳಲ್ಲದೆ ಹಳ್ಳಿಹಳ್ಳಿಗಳಿಂದಲೂ ಜನರು ಪಟ್ಟಣಕ್ಕೆ ಬಂದಿದ್ದರಿಂದ ಎಂದಿನಂತೆ ಪಟ್ಟಣದಲ್ಲಿ ಜನರ ಓಡಾಟ ಇತ್ತು. ಇದರಿಂದಾಗಿ ವಾಹನಗಳ ಸಂಚಾರದ ಭರಾಟೆ ಜೋರಾಗೆ ಇತ್ತು. ಇದುವರೆಗೂ ಮನೆ ಹಿಡಿದು ಕುಳಿತಿದ್ದ ವ್ಯಾಪಾರಸ್ಥರು, ಕಾರ್ಮಿಕ ವರ್ಗ ಮನೆ ಬಿಟ್ಟು ಹೊರ ಬಂದು ಮತ್ತೆ ತಮ್ಮ ಕಾಯಕ ಆರಂಭಿಸಿದ್ದವು.
ಕಡ್ಡಾಯವಾಗಿ ಮಾಸ್ಕ್ ಧರಿಸುವ ಮತ್ತು ಅಂತರ ಕಾಪಾಡುವುದರೊಂದಿಗೆ ವ್ಯಾಪಾರ, ವಹಿವಾಟು ಆರಂಭಗೊಂಡಿದೆಯಾದರೂ ಅನ್‍ಲಾಕ್‍ನಲ್ಲಿ ಮಾರುಕಟ್ಟೆ ಸ್ಥಿತಿ ಗಮನಿಸಿದ ಯಾರಿಗೆ ಆಗಲಿ ಅಂತರದ ಅರಿವೆ ಇಲ್ಲವೆನೊ ಎನ್ನುವಂತೆ ಜನತೆ ನಡೆದುಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು. ವ್ಯಾಪಾರ, ವಹಿವಾಟುಗಳಿಗಾಗಿ ಆಗಮಿಸಿದ್ದ ಜನಸಾಮಾನ್ಯರು ಖರೀದಿಗಾಗಿ ಮುಗಿ ಬಿದ್ದಿದ್ದರು. ಸರ್ಕಾರಿ ಬಸ್‍ಗಳು ರಸ್ತೆಗಿಳಿದಿದ್ದರೂ ಪ್ರಯಾಣಿಕರ ಸ್ಪಂದನೆ ನೀರಸವಾಗಿತ್ತು. ಇದರರ್ಥ ಜನರಲ್ಲಿ ಇನ್ನೂ ಕೊರೊನಾ ಭೀತಿ ಇನ್ನೂ ತಪ್ಪಿಲ್ಲ ಎನ್ನುವುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
