ಹುಳಿಯಾರು :
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‍ಗಳ ವಿತರಣಾ ಸಮಾರಂಭ ನಡೆಯಿತು. ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಪ್ರೀತಿ ಮತ್ತು ಪ್ರೇಮದ ಪಾಠ ಮಾಡಿ ಗಮನ ಸೆಳೆದರು.
ಹೌದು ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ನೋಡುವುದಕ್ಕಿಂತ ಓದುವುದು ಶ್ರೇಷ್ಠ. ನೋಡುವುದಕ್ಕೂ, ಕೇಳುವುದಕ್ಕೂ ಒಂದು ಮಿತಿ ಇರುತ್ತದೆ. ಆದರೆ ಓದುವುದಕ್ಕೆ ಮಿತಿ ಎನ್ನುವುದಿಲ್ಲ. ಓದು ಯಾವುದೋ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ ಎಂದು ರಾಮಾಯಣದ ಸೀತೆ ಪಾತ್ರ ನೆನಪು ಮಾಡಿಕೊಂಡರು. ರಾಮಾಯಣ ಓದಿದವರಿಗಿದ್ದ ಸೀತೆಯ ಮೇಲಿನ ಕಲ್ಪನೆಯನ್ನು ಧಾರವಾಹಿ ತೆಗೆದು ಸೌಂದರ್ಯಕ್ಕೆ ಸ್ಥಿಮಿತಗೊಳಿಸಿದರು. ಸೀತೆಯೆಂದರೆ ಧಾರವಾಹಿಯ ಸುಂದರವಾದ ಹೀರೋಯಿನ್ ನೆನಪಿಗೆ ಬರುವಂತೆ ಮಾಡಿಬಿಟ್ಟರು ಎಂದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಅವರು ಸೀತೆ ಸುಂದರವಾಗಿ ಇದ್ದರೂ ಇರಬಹುದೇನೋ ಎಂದು ಮಾತು ಸೇರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಪ್ರೀತಿ, ಪ್ರೇಮದ ಪಾಠ ಆರಂಭಿಸಿದರು. ಸೌಂದರ್ಯಕ್ಕೂ ಪ್ರೀತಿಗೂ ಸಂಬಂಧವೇ ಇಲ್ಲ. ಸೌಂದರ್ಯವಾಗಿರುವವರನ್ನೇ ಎಲ್ಲರೂ ಪ್ರೀತಿಸುವುದಿಲ್ಲ. ಪ್ರೀತಿ ಮನಸ್ಸಿನಿಂದ ಭಾವನೆಯಿಂದ ಉದ್ಭವವಾಗುತ್ತದೆ ಬಿಟ್ಟರೆ ಆಕರ್ಷಣೆಯಿಂದ ಉದ್ಭವವಾಗುತ್ತದೆ ಎಂದು ನಾನು ತಿಳಿದಿಲ್ಲ ಎಂದರು.
ಆಕರ್ಷಣೆಯೇ ಬೇರೆ ಪ್ರೀತಿಯೇ ಬೇರೆ. ಆಕರ್ಷಣೆ ಪ್ರೀತಿಯಲ್ಲಿ ಕೊನೆಗೊಂಡರೆ ಒಳ್ಳೆಯದು. ಹಾಗಂತ ಆಕರ್ಷಿತರಾಗಿಯೇ ಪ್ರೀತಿ ಮಾಡಬೇಕೆಂಬ ನಿಯಮವಿಲ್ಲ. ಪ್ರೀತಿ ಶ್ರೇಷ್ಠವಾಗಿದ್ದು ಪ್ರೀತಿ ಹುಟ್ಟಲು ಬೇಕಾದಷ್ಟು ಆಯಾಮಗಳಿರುತ್ತವೆ. ಹಾಗಾಗಿ ಮಕ್ಕಳಿಗೆ ಪ್ರೀತಿ ಮತ್ತು ಪ್ರೇಮದ ವ್ಯತ್ಯಾಸಗೊತ್ತಾಗಬೇಕು. ಪ್ರೇಮ ಹೆಣ್ಣು ಗಂಡಿನ ಮಧ್ಯೆ ಬರುತ್ತದೆ. ಮನುಷ್ಯ ಮನುಷ್ಯನನ್ನು, ಮನುಷ್ಯ ಪ್ರಕೃತಿಯನ್ನು, ಮನುಷ್ಯ ಪ್ರಾಣಿಗಳನ್ನೂ ಇಷ್ಟಪಡುವುದು ಪ್ರೀತಿ ಎಂದು ವಿವರಣೆ ನೀಡಿ ಗಮನ ಸೆಳೆದರು.
ಕಾರ್ಯಕ್ರಮದ ಅಧ್ಯಕ್ಷೆಯನ್ನು ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ವಹಿಸಿದ್ದರು. ಗ್ರಂಥಪಾಲಕ ಲೋಕೇಶ್‍ನಾಯ್ಕ, ಉಪನ್ಯಾಸಕರುಗಳಾದ ಮೋಹನ್, ವಲಿ, ಸುಷ್ಮಾಬೀರಾದಾರ್, ಗ್ರಾಪಂ ಅಧ್ಯಕ್ಷ ಕೆ.ಸಿ.ವಿಕಾಸ್, ಹಿರಿಯ ವಿದ್ಯಾರ್ಥಿಗಳ ಸಂಘದ ಕೆಂಕೆರೆ ನವೀನ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ