ಹುಳಿಯಾರು : ಕೋಳಿ ತ್ಯಾಜ್ಯ ವಿಲೇವಾರಿ ಹೊಣೆ ಮಾಲೀಕರದು

 ಹುಳಿಯಾರು : 

      ಕೋಳಿ ಮತ್ತು ಮಟನ್ ತ್ಯಾಜ್ಯ ವಿಲೇವಾರಿ ಹೊಣೆಯನ್ನು ಕೋಳಿ ಮತ್ತು ಮಟನ್ ಅಂಗಡಿ ಮಾಲೀಕರೆ ಹೊರಬೇಕಿದ್ದು ತಕ್ಷಣದಿಂದ ಸಾರ್ವಜನಿಕ ಸ್ಥಳಗಳಲ್ಲಿ ವಿಲೇವಾರಿ ಮಾಡಿದ್ದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಹಾಗೂ ಹುಳಿಯಾರು ಪಿಎಸ್‍ಐ ಕೆ.ಟಿ.ರಮೇಶ್ ಎಚ್ಚರಿಕೆ ನೀಡಿದ್ದಾರೆ.

      ಹುಳಿಯಾರು ಪೊಲೀಸ್ ಠಾಣೆಯಲ್ಲಿ ಕೋಳಿ ಅಂಗಡಿ ಮತ್ತು ಮಟನ್ ಸ್ಟಾಲ್ ಮಾಲೀಕರ ಸಭೆಯಲ್ಲಿ ಈ ಎಚ್ಚರಿಕೆ ನೀಡಲಾಯಿತು.
ಕೋಳಿ ತ್ಯಾಜ್ಯವನ್ನು ಹುಳಿಯಾರು ಕೆರೆ ಅಂಗಳ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ವಿಲೇ ಮಾಡುತ್ತಿರುವುದರಿಂದ ನಾಯಿ, ಹಂದಿಗಳ ಕಾಟದ ಜತೆಗೆ ದುರ್ನಾತ ಬೀರುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಅಲ್ಲದೆ ಇನ್ನೊಂದು ತಿಂಗಳಲ್ಲಿ ಹುಳಿಯಾರು ಕೆರೆಗೆ ಹೇಮಾವತಿ ಹರಿಯುವುದರಿಂದ ನೀರು ಕಲುಷಿತವಾಗಿ ಈ ನೀರು ಕುಡಿಯುವ ಪ್ರಾಣಿ, ಪಕ್ಷಿಗಳ ಜೀವಕ್ಕೆ ಆಪತ್ತು ಎದುರಾಗುತ್ತದೆ ಎಂಬುದು ಪ್ರಾಣಿಪ್ರಿಯರ ಆತಂಕವಾಗಿದೆ. ಇನ್ನು ಮಟನ್ ಸ್ಟಾಲ್‍ನವರು ಪಟ್ಟಣದ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಹಾಕುತ್ತಿರುವ ದೂರುಗಳ ಬಂದಿರುವುದರಿಂದ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.

      ಹುಳಿಯಾರು ಪಂಚಾಯ್ತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಜಾಗದ ಸಮಸ್ಯೆಯಿದೆ. ಅಲ್ಲದೆ ಸರ್ಕಾರಿ ಜಮೀನು ಸಹ ಇಲ್ಲದಾಗಿದೆ. ಹಾಗಾಗಿ ಮೇಲಧಿಕಾರಿಗಳಿಗೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸ್ಥಳವಕಾಶ ಕಲ್ಪಿಸುವಂತೆ ಪತ್ರ ಬರೆಯಲಾಗಿದೆ. ಸ್ಥಳವಕಾಶ ಆಗುವವರೆವಿಗೆ ಕೋಳಿ ಮತ್ತು ಮಟನ್ ಅಂಗಡಿಯ ಮಾಲೀಕರು ತಮ್ಮ ತಮ್ಮ ಅಂಗಡಿಯ ತ್ಯಾಜ್ಯಗಳನ್ನು ತಮ್ಮ ತಮ್ಮ ಜಮೀನಿನಲ್ಲಿ ವಿಲೇವಾರಿ ಮಾಡಿಕೊಳ್ಳುವಂತೆಯೂ, ಅಕ್ಕಪಕ್ಕದ ಜಮೀನಿನವರಿಗೆ ಹಾಗೂ ದಾರಿಹೋಕರಿಗೆ ತೊಂದರೆಯಾಗದಂತೆ ಶೌಚಾಲಯದ ಗುಂಡಿ ಮಾಧರಿಯಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿಕೊಳ್ಳುವಂತೆ ಸಭೆಯಲ್ಲಿ ತಿಳಿಸಲಾಯಿತು.

      ಹುಳಿಯಾರು ಪಟ್ಟಣದಲ್ಲಿನ ಯಾವೊಂದು ಮಟನ್ ಸ್ಟಾಲ್‍ಗೂ ಪರವಾನಗಿ ಕೊಟ್ಟಿಲ್ಲ. ತಕ್ಷಣದಿಂದಲೇ ಎಲ್ಲರೂ ಪರವಾನಗಿ ಪಡೆದುಕೊಳ್ಳಬೇಕು. ಪರವಾನಗಿ ಕೊಡುವಾಗ ವಿಧಿಸುವ ನಿಯಮಗಳಂತೆ ಮಟನ್ ಕಟ್ ಮಾಡುವ ಮತ್ತು ತ್ಯಾಜ್ಯ ವಿಲೇ ಮಾಡಬೇಕು. 15 ದಿನಗಳೊಳಗೆ ಪರವಾನಗಿ ಪಡೆಯದಿದ್ದರೆ ಅನಧಿಕೃತ ಮಟನ್ ಸ್ಟಾಲ್ ಎಂದು ಬೀಗ ಜಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರಲ್ಲದೆ ಕೋಳಿ ಅಂಗಡಿಯವರೂ ಸಹ ಪರವಾನಗಿ ರಿನವಲ್ ಮಾಡದೆ ಅಂಗಡಿ ನಡೆಸುತ್ತಿದ್ದು ತಕ್ಷಣ ನವೀಕರಿಸುವಂತೆ ಸೂಚನೆ ನೀಡಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link