ಹುಳಿಯಾರು :
ಚೆನ್ನಾಗಿದ್ದ ಜಲ್ಲಿ ರಸ್ತೆಗೆ ಕೆರೆ ಮಣ್ಣು ಹಾಕಿ ಕೆಸರು ಗದ್ದೆ ಮಾಡಿ ಬಿಟ್ರು ಎಂದು ಹುಳಿಯಾರು ಹೋಬಳಿಯ ಬಿಳಿಕಲ್ಲು ಗೊಲ್ಲರಹಟ್ಟಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಯಳನಾಡು ಗ್ರಾಪಂ ವ್ಯಾಪ್ತಿಯ ತಮ್ಮಡಿಹಳ್ಳಿ ಗೊಲ್ಲರಹಟ್ಟಿವರೆವಿಗೂ ಉತ್ತಮವಾದ ಡಾಂಬಾರ್ ರಸ್ತೆ ಮಾಡಿದ್ದಾರೆ. ಅಲ್ಲಿಂದ ಕೇವಲ 2 ಕಿ.ಮೀ ದೂರದಲ್ಲಿ ಬಿಳಿಕಲ್ಲು ಗೊಲ್ಲರಹಟ್ಟಿಯಿದೆ. ಆದರೆ ಅಲ್ಲಿಗೆ ಡಾಂಬಾರ್ ರಸ್ತೆ ಮಾಡದೆ ನಿರ್ಲಕ್ಷ್ಯಿಸಿದ್ದಾರೆ. ಆದರೂ ಏಳೆಂಟು ವರ್ಷಗಳ ಹಿಂದೆ ಜಲ್ಲಿ ರಸ್ತೆ ಮಾಡಿದ್ದು ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಜಲ್ಲಿ ಎದ್ದು ಜನರ ಓಡಾಟಕ್ಕೆ ತೊಂದರೆಯಾಗಿತ್ತು.
ಹಾಗಾಗಿ ಜನಪ್ರತಿನಿಧಿಗಳಿಗೆ ಬಿಳಿಕಲ್ಲು ಗೊಲ್ಲರಟ್ಟಿಯ ರಸ್ತೆಗೆ ಡಾಂಬಾರ್ ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ. ಆದರೂ ಏಳೆಂಟು ವರ್ಷ ಯಾರೊಬ್ಬರೂ ರಸ್ತೆ ದುರಸ್ಥಿಗೆ ಮುಂದಾಗಿರಲಿಲ್ಲ. ಆದರೆ ಇತ್ತೀಚೆಗಷ್ಟೆ ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಅವರು ರಸ್ತೆಗೆ ಮಣ್ಣು ಹಾಕಿಸಿದ್ದು ಹಿಂದೆ ಹೇಗೋ ಓಡಾಡುವಂತಿದ್ದ ರಸ್ತೆ ಈಗ ಕೆಸರು ಗದ್ದೆಯಾಗಿದೆ.
ಪರಿಣಾಮ ಈ ಭಾಗದ ಶಾಲಾ ವಿದ್ಯಾರ್ಥಿಗಳು, ಕೂಲಿಕಾರ್ಮಿಕರು ನಿತ್ಯ ಕೆಸರು ಸಿಡಿಸಿಕೊಂಡು ಓಡಾಡುವಂತಾಗಿದೆ. ಅಲ್ಲದೆ ಬೈಕ್ ಸವಾರರು ಬಿದ್ದು-ಎದ್ದು ಸರ್ಕಸ್ ಮಾಡಿ ಸಂಚರಿಸುವಂತಾಗಿದೆ. ವೃದ್ಧರಂತೂ ಜಾರಿ ಬೀಳುವ ಭಯದಲ್ಲಿ ಒಡಾಡುತ್ತಿದ್ದು, ಹತ್ತದಿನೈದು ನಿಮಿಷದ ಪ್ರಯಾಣ ಈಗ ಗಂಟೆಗಟ್ಟಲೆ ಆಗುತ್ತಿದೆ. ಅಲ್ಲದೆ ರಸ್ತೆಯ ಅವಸ್ಥೆ ನೋಡಿ ಹಳ್ಳಿಗೆ ದಿನಬಳಕೆ ವಸ್ತುಗಳ ಮಾರಾಟಕ್ಕೆ ಬರುವವರೂ ಬಾರದಂತ್ತಾಗಿದ್ದು ಊರಿನ ಜನರೆ ಪಟ್ಟಣಕ್ಕೆ ಹೋಗುವ ಅನಿವಾರ್ಯತೆ ಸೃಷ್ಠಿಯಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
ರಸ್ತೆಗೆ ಮಣ್ಣು ಹಾಕುವಾಗ ಕೆಸರಾಗದ ಗ್ರಾವೆಲ್ ಮಣ್ಣು ಹಾಕುವ ನಿಯಮವಿದೆ. ಆದರೆ ಸ್ವಲ್ಪ ಮಳೆ ಬಂದರೂ ಕೆಸರಾಗುವ ಕೆರೆಯ ಮಣ್ಣು ಹೊಡೆದಿದ್ದಾರೆ. ಜಿಪಂ ಎಂಜಿನಿಯರ್ ಸಹ ಕಾಮಗಾರಿ ವೀಕ್ಷಿಸದೆ ಕಛೇರಿಯಲ್ಲೇ ಕುಳಿತು ಪೈಲ್‍ಗೆ ಸಹಿ ಹಾಕಿ ಕಾಮಗಾರಿಯ ಬಿಲ್ ಮಂಜೂರು ಮಾಡಿದ್ದಾರೆ. ಹಾಗಾಗಿ ಚೆನ್ನಾಗಿದ್ದ ರಸ್ತೆ ಈಗ ಓಡಾಡಲು ಆಗದಂತೆ ಸಂಪೂರ್ಣ ಹಾಳಾಗಿದೆ ಎಂಬುದು ಗ್ರಾಮದ ಯುವಕರ ದೂರಾಗಿದೆ. ಇನ್ನಾದರೂ ರಸ್ತೆಗೆ ಒಳ್ಳೆಯ ಮಣ್ಣು ಹಾಕಿಸಿ ಸುಗಮ ಸಂಚಾರಕ್ಕೆ ಅನುವು ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ರಸ್ತೆಯ ಕಾಮಗಾರಿ ಮಾಡುವಾಗಲೇ ಒಳ್ಳೆಯ ಮಣ್ಣು ಹಾಕುತ್ತಿಲ್ಲ ಎಂದು ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಹಾಗೂ ಅಧಿಕಾರಿಗಳಿಗೆ ದೂರವಾಣಿ ಮೂಲಕ ದೂರು ಹೇಳಿದ್ದೇನೆ. ಉತ್ತಮವಾದ ಗ್ರಾವೆಲ್ ಮಣ್ಣು ಹಾಕುವಂತೆ ತಿಳಿಸುವುದಾಗಿ ಹೇಳಿದ್ದರಾದರೂ ತಿಳಿಸಿದಂತೆ ಕಂಡು ಬಂದಿಲ್ಲ. ಹಾಗಾಗಿಯೇ ತೀರ ಕಳಪೆಯ ಮಣ್ಣು ರಸ್ತೆಗೆ ಹಾಕಿದ್ದು ಮಳೆ ಬಂದರೆ ಕೆಸರು ಗದ್ದೆ, ಬಿಸಿಲಾದರೆ ದೂಳು ರಸ್ತೆಯಾಗಿ ಮಾರ್ಪಟ್ಟು ಓಡಾಡಲಾಗದ ದುಸ್ಥಿತಿಗೆ ರಸ್ತೆಯಾಗಿದೆ.
-ದೇವರಾಜು, ನಿವಾಸಿ, ಬಿಳಿಕಲ್ಲು ಗೊಲ್ಲರಹಟ್ಟಿ
ಬಿಳಿಕಲ್ಲು ಗೊಲ್ಲರಹಟ್ಟಿಯ ಜನರು ರಸ್ತೆ ದುರಸ್ಥಿಗೆ ಮನವಿ ಮಾಡಿದ್ದರು. ಆದರೆ ಡಾಂಬಾರು ರಸ್ತೆಗೆ ಆಗುವಷ್ಟು ದುಡ್ಡಿರಲಿಲ್ಲ. ಹಾಗಾಗಿ ಜಂಗಲ್ ತೆಗೆದು ಮಣ್ಣು ಹಾಕಿದೆವು. ಆದರೆ ಮಳೆ ಬಂದಾಗ ಸಹಜವಾಗಿ ಸ್ವಲ್ಪ ಕೆಸರಾಗಿದೆ ಅಷ್ಟೆ. ವಾಸ್ತವವಾಗಿ ಅಲ್ಲಿನ ನಿವಾಸಿಗಳಿಗೆ ಮಣ್ಣು ಹಾಕಲು ಹೇಳಿದ್ದೆವು. ಅವರೇ ಈ ರೀತಿ ಮಣ್ಣು ಹಾಕಿದ್ದಾರೆ. ಈಗ ಈ ಮಣ್ಣಿನ ಮೇಲೆ ಬಂಡೆ ಮಣ್ಣು ಹೊಡೆದರೆ ಸರಿಯಾಗುತ್ತದೆ. ಎಂಜಿನಿಯರ್ ಬಳಿ ಮಾತಾಡಿ ಕ್ರಮ ಕೈಗೊಳ್ಳುತ್ತೇನೆ.
-ವೈ.ಸಿ.ಸಿದ್ಧರಾಮಯ್ಯ, ಜಿಪಂ ಸದಸ್ಯ, ಹುಳಿಯಾರು
