ಡಿವೈಗೆರೆ ಗ್ರಾಪಂ ಉದ್ಯೋಗ ಖಾತ್ರಿಯಲ್ಲಿ ಅವ್ಯವಹಾರ

ಹುಳಿಯಾರು : 

      ಹಂದನಕೆರೆ ಹೋಬಳಿಯ ದೊಡ್ಡಎಣ್ಣೇಗೆರೆ ಗ್ರಾಮ ಪಂಚಾಯ್ತಿಯ ಉದ್ಯೋಗಖಾತ್ರಿಯಲ್ಲಿ ಅವ್ಯಹಾರ ನಡೆದಿದ್ದು ಮೇಲಧಿಕಾರಿಗಳು ಸೂಕ್ತ ತನಿಖೆ ನಡೆಸುವಂತೆ ತಾಪಂ ಸದಸ್ಯ ಶ್ರೀಹರ್ಷ ಸೇರಿದಂತೆ ಗ್ರಾಪಂ ಸದಸ್ಯರು ಒತ್ತಾಯಿಸಿದ್ದಾರೆ.

      ದೊಡ್ಡಎಣ್ಣೇಗೆರೆಯ ಗ್ರಾಪಂ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಎನ್‍ಆರ್‍ಇಜಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಮೀಸಲಿಟ್ಟಿದ್ದ 5 ಲಕ್ಷ ರೂ. ಅನುದಾನದಲ್ಲಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಗಮನಕ್ಕೆ ತಂದು ಅವರ ಒಪ್ಪಿಗೆ ಪಡೆದು ಕಾಮಗಾರಿ ಆರಂಭಿಸದೆ ಏಕಾಏಕಿ ತಮಗಿಷ್ಟ ಬಂದವರಿಂದ ಕಾಮಗಾರಿ ಮಾಡಿಸುತ್ತಿದ್ದಾರೆ. ಕಾಮಗಾರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಗುತ್ತಿಗೆದಾರರೇ ತಂದು ಮಾಡಬೇಕಿದ್ದರೂ ಪಂಚಾಯ್ತಿಯಿಂದ ಪ್ರತ್ಯೇಕವಾಗಿ ಪೈಪ್‍ಲೈನ್ ಮಾಡಿ ಕಾಮಗಾರಿ ನೀರು ಪೂರೈಕೆ ಮಾಡುತ್ತಿದ್ದಾರೆ. ಗ್ರಾಪಂನ ಅನೇಕ ಹಳ್ಳಿಗಳಲ್ಲಿ ನಲ್ಲಿ ಹಾಕಿ ನೀರು ಕೊಡಿ ಎಂದು ಕೇಳುತ್ತಿದ್ದರೂ ಸಹ ಅವರಿಗೆ ನಲ್ಲಿ ಸಂಪರ್ಕ ಕೊಡದೆ ಗುತ್ತಿಗೆದಾರರಿಗೆ ನೀರು ಪೂರೈಸಲು ಲಕ್ಷಾಂತರ ರೂ. ವೆಚ್ಚ ಮಾಡಿ ನೀರು ಕೊಟ್ಟಿದ್ದಾರೆ ಎಂದು ಆರೋಪಿಸಿದರಲ್ಲದೆ ಈ ಪೈಪ್ ಲೈನ್ ಕಾಮಗಾರಿಯ ಬಿಲ್ ಪಾವತಿಸಿದಂತೆ ಗ್ರಾಪಂನ ಏಳೆಂಟು ಮಂದಿ ಸದಸ್ಯರು ಒತ್ತಾಯಿಸಿದ್ದಾರೆ.

      ತಾಪಂ ಸದಸ್ಯ ಶ್ರೀಹರ್ಷ ಅವರು ಮಾತನಾಡಿ, 14 ಮತ್ತು 15 ನೇ ಹಣಕಾಸು ಸೇರಿದಂತೆ ಸರ್ಕಾರದಿಂದ ಯಾವುದೇ ಹಣವನ್ನು ಸಾಮಾನ್ಯ ಸಭೆಯ ಅನುಮೋದನೆ ಪಡೆದು ಖರ್ಚು ಮಾಡುವುದು ನಿಯಮ ಆದರೆ ಇಲ್ಲಿನ ಸದಸ್ಯರು ಹೇಳುವಂತೆ 3 ತಿಂಗಳಿಂದ ಸಭೆಯನ್ನೇ ಮಾಡಿಲ್ಲ. ಆದರೂ ಕಾಮಗಾರಿ ಮಾಡುತ್ತಿದ್ದಾರೆ. ಹಾಗಾಗಿ ಇದು ಕಾನೂನು ಬಾಹೀರವಾಗಿದ್ದು ಮೇಲಾಧಿಕಾರಿಗಳು ಇವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ದೊಡ್ಡಎಣ್ಣೇಗೆರೆ ಗ್ರಾಮ ಪಂಚಾಯ್ತಿ ತಾಲೂಕಿನಲ್ಲೇ ದೊಡ್ಡ ಗ್ರಾಮ ಪಂಚಾಯ್ತಿಯಾಗಿದ್ದು ಇಲ್ಲಿಗೆ ಖಾಯಂ ಪಿಡಿಓ ಅಗತ್ಯವಿದೆ. ಪಂಚಾಯ್ತಿ ಕೆಲಸಗಳು ಸುಗಮವಾಗಿ ನಡೆಯಲು ಜಿಪಂ ಸಿಇಓ ಅವರು ತಕ್ಷಣ ಗ್ರಾಪಂಗೆ ಪಿಡಿಓ ನೇಮಕ ಮಾಡುವಂತೆ ಒತ್ತಾಯಿಸಿದರು.

      ಗ್ರಾಪಂ ಸದಸ್ಯ ಪ್ರಶಾಂತ್ ಅವರು ಮಾತನಾಡಿ, 15 ನೇ ಹಣಕಾಸು ಯೋಜನೆಯಲ್ಲಿ 4 0 ಲಕ್ಷ ರೂ ಬಿಡುಗಡೆಯಾಗಿದೆ. ಈ ಬಗ್ಗೆ ಪಂಚಾಯ್ತಿ ಸದಸ್ಯರ ಗಮನಕ್ಕೆ ತರದೆ ತಮಗಿಷ್ಟ ಬಂದ ಕೆಲಸ ಮಾಡಿಸುತ್ತಿದ್ದಾರೆ. ಅಲ್ಲದೆ ಕಮಿಷನ್ ಕೊಟ್ಟರೆ ಅಕ್ರಮವಾಗಿಯೂ ಬಿಲ್ ಮಾಡಿ ಕೊಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಪ್ರಭಾರ ಪಿಡಿಓ ಅವರು ತಮ್ಮ ಬೆಂಬಲಿಗರಿಂದ ಪೋನ್ ಮಾಡಿಸಿ ಬೆದರಿಕೆ ಹಾಕಿಸುತ್ತಾರೆ. ಇಲ್ಲವಾದಲ್ಲಿ ಅಟ್ರ್ರಾಸಿಟಿ ಪ್ರಕರಣ ದಾಖಲಿಸಿ ಕೋರ್ಟು ಕಛೇರಿ ಅಲೆಸುತ್ತಾರೆ. ಹಾಗಾಗಿ ಸದಸ್ಯರು ಇಲ್ಲಿಯವರೆವಿಗೂ ಪ್ರಶ್ನಿಸದೆ ಮೌನವಾಗಿದ್ದರು. ಆದರೆ ಈಗ ಪಂಚಾಯ್ತಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದ ಪರಿಣಾಮ ಮಾಧ್ಯಮಗಳ ಮೂಲಕ ಪಂಚಾಯ್ತಿಯ ಅನುದಾನಗಳ ಖರ್ಚು ವೆಚ್ಚದ ಬಗ್ಗೆ ಲೆಕ್ಕ ಕೇಳುತ್ತಿದ್ದೇವೆ ಎಂದಿದ್ದಾರೆ.

      ನಮ್ಮ ಗ್ರಾಮಗಳಲ್ಲಿ ಒಳ್ಳೆಯ ಕೆಲಸ ಮಾಡುವ ಸದುದ್ದೇಶದಿಂದ ಚುನಾವಣೆಗೆ ನಿಂತು ಗೆದ್ದು ಬಂದಿದ್ದೇವೆ. ಆದರೆ ಗೆದ್ದು ಐದಾರು ತಿಂಗಳು ಕಳೆದಿದ್ದರೂ ಸಹ ಪಂಚಾಯ್ತಿ ಅಧ್ಯಕ್ಷರು ಮತ್ತು ಪ್ರಭಾರ ಪಿಡಿಓ ಸರಿಯಾಗಿ ಸ್ಪಂಧಿಸುತ್ತಿಲ್ಲ. ಊರಿನ ಕೆಲಸ ಕಾರ್ಯ ಕೇಳಿದರೂ ಮಾಡಿಕೊಡುವುದಿಲ್ಲ. ಬಹುಮುಖ್ಯವಾಗಿ ಕಛೇರಿಗೆ ಸರಿಯಾಗಿ ಬರುವುದೇ ಇಲ್ಲ. ಸಾರ್ವಜನಿಕರಲ್ಲದೆ ಸದಸ್ಯರೂ ಕೂಡ ಪಂಚಾಯ್ತಿಗೆ ಅಲೆಯುವಂತಾಗಿದೆ. ಸರ್ಕಾರದಿಂದ ಬಂದಿರುವ ಅನುದಾನಗಳ ಬಗ್ಗೆ ಮಾಹಿತಿ ನೀಡದೆ ಗೌಪ್ಯವಾಗಿಟ್ಟು ಇವರಿಬ್ಬರೇ ಅನಗತ್ಯ ಕೆಲಗಳನ್ನು ಮಾಡಿ ಬಿಲ್ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಪಂಚಾಯ್ತಿಯ ಈ ಅವ್ಯವಹಾರಗಳ ಬಗ್ಗೆ ತನಿಖೆಯಾಗಬೇಕು ಎಂದು ಸದಸ್ಯರುಗಳು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link