ದೊಡ್ಡಎಣ್ಣೇಗೆರೆ ಗ್ರಾಪಂ ಮುಂದೆ ಹರಿದ ರಾಷ್ಟ್ರಧ್ವಜ ಹಾರಾಟ

ಹುಳಿಯಾರು : 

      ಹಂದನಕೆರೆ ಹೋಬಳಿಯ ದೊಡ್ಡಎಣ್ಣೇಗೆರೆ ಗ್ರಾಪಂ ಮುಂದೆ ಕಳೆದ ಹದಿನೈದಿಪ್ಪತ್ತು ದಿನಗಳಿಂದ ಸತತವಾಗಿ ಹರಿದು ಹೋಗಿರುವ ತ್ರಿವರ್ಣ ಧ್ವಜವನ್ನೇ ಹಾರಿಸಿ ರಾಷ್ಟ್ರಧ್ವಜಕ್ಕೆ ಅಗೌರವ ಮಾಡಲಾಗುತ್ತಿದೆ.

      ಹೌದು, ಸರ್ಕಾರ ಎಲ್ಲಾ ಗ್ರಾಪಂ ಕಛೇರಿಗಳ ಮುಂದೆ ಪ್ರತಿದಿನ ಕಡ್ಡಾಯವಾಗಿ ತ್ರಿವರ್ಣ ಧ್ವಜ ಹಾರಿಸಬೇಕೆಂಬ ನಿಯಮ ಜಾರಿಗೆ ತಂದ ಮೇಲೆ ಧ್ವಜಕ್ಕೆ ಸಂಬಂಧಿಸಿದ ಅವಾಂತರಗಳು ಆಗುತ್ತಲೇ ಇವೆ. ಇದೀಗ ಅಂತದ್ದೆ ಅವಾಂತರದ ಪಟ್ಟಿಗೆ ದೊಡ್ಡಎಣ್ಣೇಗೆರೆ ಗ್ರಾಮ ಪಂಚಾಯ್ತಿ ಸೇರಿದೆ.

      ಹರಿದ, ಕೊಳಕಾದ, ಹಾಳಾದ ರಾಷ್ಟ್ರಧ್ವಜ ಹಾರಿಸುವದು ಅಪರಾಧ. ರಾಷ್ಟ್ರ ಧ್ವಜಕ್ಕೆ ತನ್ನದೆ ಆದ ಘನತೆ, ಗೌರವ ಇದೆ. ಆದರೆ ದೊಡ್ಡಎಣ್ಣೆಗೆರೆ ಗ್ರಾಪಂ ಧ್ವಜಸ್ಥಂಭದಲ್ಲಿ ಹರಿದ ದ್ವಜ ಹಾರಾಡುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಊರಿನ ಮಧ್ಯಭಾಗದಲ್ಲಿರುವ ಈ ಗ್ರಾಪಂ ಕಚೇರಿಗೆ ನಿತ್ಯ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಕೆಲಸದ ನಿಮಿತ್ತ ಬರುತ್ತಾರೆ. ಅಲ್ಲದೆ ಪಂಚಾಯ್ತಿ ಎದುರಿಗಿನ ರಸ್ತೆಯ ಮೂಲಕ ಹಂನಕೆರೆ, ತಿಪಟೂರಿಗೆ ನಿತ್ಯ ನೂರಾರು ಮಂದಿ ಬಸ್, ಕಾರು, ದ್ವಿಚಕ್ರ ವಾಹನದಲ್ಲಿ ಓಡಾಡುತ್ತಾರೆ. ಹೀಗಿದ್ದರೂ ರಾಷ್ಟ್ರ ಧ್ವಜದ ಬಗ್ಗೆ ಕಿಂಚಿತ್ತೂ ಗೌರವ ಇಲ್ಲದೆ, ಧ್ವಜ ಬದಲಾಯಿಸಿ ಹರಿದ ರಾಷ್ಟ್ರಧ್ವಜ ಹಾರಿಸಿ ಸಾರ್ವಜನಿಕರ, ದಾರಿಹೋಕರ ಟೀಕೆಗೆ ಗ್ರಾಪಂ ಸಿಬ್ಬಂದಿ ಗುರಿಯಾಗಿದ್ದಾರೆ.

      ಸರ್ಕಾರಿ ಕೆಲಸ ದೇವರ ಕೆಲಸ ಎನ್ನುತ್ತಾರೆ. ಆದರೆ ಇಲ್ಲಿನ ಪಿಡಿಓಗೆ ಸರ್ಕಾರಿ ಕೆಲಸ, ನಮ್ಮ ರಾಷ್ಟ್ರ, ನಮ್ಮ ಧ್ವಜ ಎನ್ನುವ ಅಭಿಮಾನ, ಗೌರವವಿಲ್ಲ. ಹಾಗಾಗಿಯೇ ಕಛೇರಿಗೆ ಸರಿಯಾಗಿ ಬರದೆ ಅತ್ತೆಮನೆಗೆ ಬಂದಂತೆ ಬರುತ್ತಾರೆ. ನಿತ್ಯವೂ ಒಂದಿಲ್ಲೊಂದು ಸಬೂಬು ಹೇಳಿ ಕಚೇರಿಗೆ ಗೈರಾಗುತ್ತಾರೆ. ಕಚೇರಿಗೆ ಬಂದಾಗ ಕಮಿಷನ್ ದಂಧೆಯಲ್ಲಿ ಸಮಯ ದೂಡುತ್ತಾರೆ. ಹಾಗಾಗಿ ರಾಷ್ಟ್ರಧ್ವಜ ಹರಿದಿದ್ದರೂ ಬದಲಿಸದೆ ಜಾಣಕುರುಡು ಪ್ರದರ್ಶಿಸಿದ್ದಾರೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು.

-ಪ್ರಶಾಂತ್, ಗ್ರಾಪಂ ಸದಸ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap