ಹುಳಿಯಾರು :
ವೈ.ಎಸ್.ಪಾಳ್ಯ ನ್ಯಾಯಬೆಲೆ ಅಂಗಡಿಯವರು ಮಣ್ಣು ಮಿಶ್ರಿತ ರಾಗಿ ವಿತರಿಸುತ್ತಿದ್ದಾರೆಂದು ಆರೋಪಿಸಿದ್ದ ವಳಗೆರೆಹಳ್ಳಿಯ ಪಡಿತರದಾರ ರವಿ ಅವರಿಂದ ಮಣ್ಣು ಮಿಶ್ರಿತ ರಾಗಿಯನ್ನು ಹಿಂಪಡೆದು ಗುಣಮಟ್ಟದ ರಾಗಿ ವಿತರಿಸಿದ್ದಾರೆ.
ಲಾಕ್‍ಡೌನ್ ಸಂಕಷ್ಟದಲ್ಲಿ ಜನರಿಗೆ ನೆರವಾಗುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಡಿತರ ಕಾರ್ಡುದಾರ ಕುಟುಂಬಗಳಿಗೆ ಉಚಿತವಾಗಿ ಅಕ್ಕಿ ಮತ್ತು ರಾಗಿ ವಿತರಣೆ ಮಾಡುತ್ತಿವೆ. ಅದರಂತೆ ಹುಳಿಯಾರು ಪಪಂ ವ್ಯಾಪ್ತಿಯ ವೈ.ಎಸ್.ಪಾಳ್ಯದ ನ್ಯಾಯಬೆಲೆ ಅಂಗಡಿಯಲ್ಲಿ ಗುಣಮಟ್ಟದ ಅಕ್ಕಿ ವಿತರಣೆ ಮಾಡುತ್ತಿದ್ದರಾದರೂ ಕೋಳಿಗೆ ಹಾಕುವಂತಹ ಕಳಪೆ ಗುಣಮಟ್ಟದ ರಾಗಿ ವಿತರಿಸುತ್ತಿದ್ದಾರೆ ಎಂದು ವಳಗೆರೆಹಳ್ಳಿಯ ರವಿ ದೂರಿದ್ದರು.
ಕೋವಿಡ್ ಸಂದರ್ಭದಲ್ಲಿ ಕೆಲಸವಿಲ್ಲದೆ ಜೀವನ ನಡೆಸುವುದೇ ಕಷ್ಟವಾಗಿರುವ ನಾವು ಸರ್ಕಾರ ನೀಡುವ ಪಡಿತರ ಆಹಾರ ಧಾನ್ಯವನ್ನೇ ಅವಲಂಬಿಸಿದ್ದೇವೆ. ಹೀಗೆ ಕಲ್ಲು ಮಣ್ಣು ಮಿಶ್ರಿತ ರಾಗಿಯನ್ನು ವಿತರಿಸಿದರೆ ತಿನ್ನುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದರು. ಕ್ಲೀನಿಂಗ್ ಮಿಲ್‍ನಲ್ಲಿ ಕ್ಲೀನ್ ಮಾಡಿಸಿದರೂ ಹೋಗದಷ್ಟು ಮಣ್ಣು ಬೆರೆತಿರುವುದರಿಂದ ಈ ತಿಂಗಳು ಊಟಕ್ಕೆ ರಾಗಿ ಇಲ್ಲದಂತಾಗಿದ್ದು, ಆಹಾರಾಧಿಕಾರಿಗಳು ರಾಗಿ ಬದಲಾಯಿಸಿ ಕೊಟ್ಟು ಉಪಕಾರ ಮಾಡುವಂತೆ ಮನವಿ ಮಾಡಿದ್ದರು.
ಈ ಸಂಬಂಧ ಪತ್ರಿಕೆ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಗೊಂಡ ಆಹಾರಾಧಿಕಾರಿ ಪ್ರಜ್ವಲ್ ಅವರು ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಿ, ಮಣ್ಣು ಮಿಶ್ರಿತ ರಾಗಿ ಪಡೆದಿದ್ದ ರವಿ ಅವರಿಗೆ ದೂರವಾಣಿ ಕರೆ ಮಾಡಿ ಕರೆಸಿ ಮಣ್ಣಿನ ರಾಗಿ ಹಿಂಪಡೆದು ಗುಣಮಟ್ಟದ ರಾಗಿ ಬದಲಾಯಿಸಿ ಕೊಟ್ಟಿದ್ದಾರೆ. ಅಲ್ಲದೆ ಮಾಧ್ಯಮಗಳ ಬಳಿ ಹೋಗುವ ಮೊದಲು ನನ್ನ ಗಮನಕ್ಕೆ ತಂದಿದ್ದರೂ ಸರಿಪಡಿಸಿಕೊಡುತ್ತಿದ್ದೆ. ಇನ್ನು ಮುಂದೆ ಸಮಸ್ಯೆಗಳಿದ್ದರೆ ನನಗೆ ಕರೆ ಮಾಡಿ ಸರಿಪಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
