ಬಿಡುವು ಕೊಟ್ಟ ಮಳೆ, ಹೆಸರು ಕೂಯ್ಲು ಚುರುಕು

 ಹುಳಿಯಾರು : 

      ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಹತ್ತನ್ನೆರಡು ದಿನಗಳಿಂದ ಮಳೆಯ ಕಾಟದಿಂದ ಸ್ಥಗಿತವಾಗಿದ್ದ ಹೆಸರು ಮತ್ತು ಅಲಸಂದೆಯ ಕೊಯ್ಲು ಈಗ ಮತ್ತೆ ಚುರುಕುಗೊಂಡಿದೆ.

      ಹೌದು, ತಾಲ್ಲೂಕಿನಲ್ಲಿ ಹತ್ತನ್ನೆರಡು ದಿನಗಳಿಂದ ಸೂರ್ಯನ ಸುಳಿವೂ ಸಹ ಇರದೆ ಎಡಬಿಡದೆ ತುಂತುರು ಮಳೆ ಬೀಳುವ ಜೊತೆಗೆ ಮೋಡ ಕವಿದ ವಾತಾವರಣವಿತ್ತು. ಒಂದರ್ಥದಲ್ಲಿ ತಾಲೂಕಿನಲ್ಲಿ ಮಲೆನಾಡು ವಾತಾವರಣ ಸೃಷ್ಠಿಯಾಗಿ ರೈತರ ಕೂಯ್ಲಿಗೆ ಅಡ್ಡಿಯಾಗಿತ್ತು.
ಈ ಬಾರಿ ಬಿತ್ತನೆ ಅವಧಿಗೆ ಪೂರ್ವದಲ್ಲಿ ಹೆಸರು ಹಾಗೂ ಅಲಸಂದೆ ಬೆಳೆ ಹೂವಾಗುವ ಹಂತದಲ್ಲಿ ಮತ್ತೊಂದು ಬಾರಿ ಹದವಾದ ಮಳೆಯಾಗಿದ್ದರಿಂದ ನಾಲ್ಕಾರು ವರ್ಷಗಳಲ್ಲಿ ಕಂಡಿರದ ಹೆಸರು ಬೆಳೆ ಈ ಬಾರಿ ರೈತರ ಹೊಲದಲ್ಲಿ ಬೆಳೆದು ನಿಂತಿತ್ತು. ಯಾವುದೇ ರೋಗದ ಸುಳಿವಿಲ್ಲದೆ ಉತ್ತಮ ಇಳುವರಿ ಕಂಡಿದ್ದ ರೈತರು ಹಿರಿಹಿರಿ ಹಿಗ್ಗಿದ್ದರು.

ಆದರೆ ಹೆಸರು ಹಾಗೂ ಅಲಸಂದೆ ಬೆಳೆ ಸರಿಯಾಗಿ ಕೊಯ್ಲಿಗೆ ಬರುವ ಸಮಯಕ್ಕೆ ನಿರಂತರ ಸೋನೆ ಮಳೆ ಹಾಗೂ ಮೋಡ ಮುಸುಕಿದ ಕಾರಣವಾಗಿ ಕೊಯ್ಲಿಗೆ ಅಡ್ಡಿಯುಂಟು ಮಾಡಿತ್ತು. ಅಲ್ಲದೆ ನಿರಂತರ ಮಳೆ ಬಿದ್ದ ಪರಿಣಾಮ ಬುಡ್ಡಿಗಳಲ್ಲಿನ ಕಾಳುಗಳು ಮೊಳಕೆಯೊಡೆದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಈಗ ಮಳೆ ಬಿಡುವು ಕೊಟ್ಟಿದೆಯಲ್ಲದೆ ಸೂರ್ಯನ ಬಿಸಿಲು ಸಹ ಬೀಳುತ್ತಿದೆ. ಪರಿಣಾಮ ಕೊಯ್ಲು ಕಾರ್ಯ ಚುರುಕುಗೊಂಡಿದ್ದು, ಬೆಳೆಗಾರರು ಕೃಷಿ ಕಾರ್ಮಿಕರನ್ನು ಕರೆದೊಯ್ದು ಜಮೀನಿನಲ್ಲಿ ಹೆಸರು, ಅಲಸಂದೆ ಬಿಡಿಸಿ ಕಣಕ್ಕೆ ಹಾಕಿ ಕಾಳು ಬೇರ್ಪಡಿಸುವ ಕಾರ್ಯವನ್ನು ಭರದಿಂದ ನಡೆಸುತ್ತಿದ್ದಾರೆ. ಆದರೆ ಮಳೆ ಹೆಚ್ಚಾಗಿ ಬಿದ್ದಿದ್ದರಿಂದ ಕೆಲ ರೈತರ ಕಾಳು ಕಪ್ಪು ಬಣ್ಣಕ್ಕೆ ತಿರುಗಿದೆ. ಕೆಲವರ ಕಾಳು ಮೊಳಕೆಯೊಡೆದಿದೆ. ಕೆಲವರ ಕಾಳಂತು ಕೆಟ್ಟಿದೆ. ಭಾರಿ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ತೀವ್ರ ನಿರಾಸೆ ಮೂಡಿಸಿದ್ದು ಕೂಲಿಯ ಹಣ ಸಹ ಗಿಟ್ಟದಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link