ಹುಳಿಯಾರು :
ಲಾಕ್‍ಡೌನ್‍ನಿಂದಾಗಿ ಹಲವು ತಿಂಗಳುಗಳಿಂದ ವಿದ್ಯಾರ್ಥಿಗಳಿಲ್ಲದೆ ಬಿಕೋ ಎನ್ನುತ್ತಿದ್ದ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಈಗ ವಿದ್ಯಾರ್ಥಿಗಳ ಕಲರವ ಕಂಡು ಬರುತ್ತಿದೆ. ಪ್ರತಿಯೊಂದು ವಿಭಾಗದಲ್ಲಿ ತರಗತಿಗಳು ತುಂಬಿದ್ದು ವಿದ್ಯಾರ್ಥಿಗಳು ಆಸಕ್ತಿಯಿಂದ ಬಂದು ಪಾಠ ಕೇಳುತ್ತಿದ್ದಾರೆ.
ಶೇ 60ರಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದು ಮನೆಯಲ್ಲೇ ಇದ್ದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಒಂದು ರೀತಿಯ ಏಕತಾನತೆ ನೆಲೆಸಿತ್ತು. ಕಾಲೇಜು ಆವರಣಕ್ಕೆ ಬಂದೊಡನೆ ಬೇಸರ ಮರೆತು ಎಲ್ಲರೊಂದಿಗೆ ಬೆರೆತರು. ಗೆಳೆಯ, ಗೆಳತಿಯರನ್ನು ಕಂಡು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು. ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಕುಳಿತು ಮಾತನಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೆ ಕಾಲೇಜಿನಲ್ಲಿ ಒಂದು ರೀತಿಯ ಸಂಭ್ರಮ ನೆಲೆಸಿತ್ತು.
ವಿದ್ಯಾರ್ಥಿಗಳೇ ಸ್ವಯಂ ಪ್ರೇರಣೆಯಿಂದ ಜಾಗೃತರಾಗಿ ಮಾಸ್ಕ್ ಧರಿಸಿ ಕಾಲೇಜಿಗೆ ಬಂದಿದ್ದರು. ಕಾಲೇಜಿನ ಪ್ರವೇಶ ದ್ವಾರದಲ್ಲಿಯೇ ವಿದ್ಯಾರ್ಥಿಗಳು ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆಯೇ ಎನ್ನುವು ಬಗ್ಗೆ ಮೊಬೈಲ್ ಸಂದೇಶವನ್ನು ಪರಿಶೀಲಿಸಲಾಗುತ್ತಿತ್ತು. ಅಲ್ಲದೆ ವಿದ್ಯಾರ್ಥಿಗಳಿಗೆ ದೈಹಿಕ ಉಷ್ಣಾಂಶ ತಪಾಸಣೆ ಮಾಡಿ ಒಳ ಬಿಡಲಾಗುತ್ತಿತ್ತು. ಲಸಿಕೆ ಪ್ರಮಾಣಪತ್ರ ಇರದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗುತ್ತಿತ್ತು. ಅಲ್ಲದೆ ಪೋಷಕರಿಂದ ಒಪ್ಪಿಗೆ ಪತ್ರ ತರುವಂತೆ ಸೂಚನೆ ಸಹ ನೀಡಲಾಗುತ್ತಿತ್ತು.
ತುಂಬಿದ್ದ ಬಸ್‍ಗಳು: ಕಾಲೇಜುಗಳು ಆರಂಭವಾಗಿರುವ ಕಾರಣ ಸಾರಿಗೆ ಸಂಸ್ಥೆ ಬಸ್‍ಗಳು ಬೆಳಿಗ್ಗೆ ವಿದ್ಯಾರ್ಥಿಗಳಿಂದ ತುಂಬಿದ್ದವು. ವಿವಿಧ ಹಳ್ಳಿಗಳಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಬಸ್ ಹತ್ತಿದ್ದರು. ಮಧ್ಯಾಹ್ನ ಕಾಲೇಜು ಮುಗಿಸಿಕೊಂಡು ಮನೆಗೆ ಹೋಗುವಾಗಲೂ ಬಸ್‍ಗಳಲ್ಲಿ ವಿದ್ಯಾರ್ಥಿಗಳು ಕಂಡು ಬಂದರು.
ಸಂಪೂರ್ಣವಾಗಿ ಖಾಸಗಿ ಮತ್ತು ಸರ್ಕಾರಿ ಬಸ್‍ಗಳ ಸೇವೆ ಇನ್ನೂ ಆರಂಭವಾಗಿಲ್ಲವಾದ್ದರಿಂದ ಕೆಲ ಹಳ್ಳಿಗಳಿಂದ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ತೊಂದರೆಯಾಯಿತಲ್ಲದೆ ಕೆಲ ವಿದ್ಯಾರ್ಥಿಗಳು ತಡವಾಗಿ ಬರಲು ಕಾರಣವಾಗಿತ್ತು. ಬೈಕ್ ಉಳ್ಳ ವಿದ್ಯಾರ್ಥಿಗಳು ಬೈಕ್‍ನಲ್ಲಿ ಬಂದರೆ ಕೆಲ ಪೋಷಕರು ಬೈಕ್‍ನಲ್ಲಿ ತಮ್ಮ ಮಕ್ಕಳನ್ನು ಕಾಲೇಜಿಗೆ ಬಿಟ್ಟು ಕಾಲೇಜು ಮುಗಿದ ನಂತರ ಕರೆದುಕೊಂಡು ಹೋಗುತ್ತಿದ್ದರು.
ಅರ್ಥವಾಗದ ಆನ್‍ಲೈನ್ ಶಿಕ್ಷಣ
ಆನ್‍ಲೈನ್ ಶಿಕ್ಷಣದಲ್ಲಿ ಕೆಲವು ವಿಷಯಗಳು ಅರ್ಥವಾಗುತ್ತಿದ್ದವು ಕೆಲವು ಅರ್ಥವಾಗುತ್ತಿರಲಿಲ್ಲ. ಕಾಲೇಜು ಆರಂಭವಾಗಿರುವುದು ಖುಷಿ ಆಗಿದೆ. ನಾವೇ ಅಂತರವನ್ನು ಕಾಪಾಡಿಕೊಳ್ಳಬೇಕಿದ್ದು ಕೋವಿಡ್ ನಿಯಮಗಳನ್ನು ನಾವೇ ಸ್ವಯಂ ಪ್ರೇರಿತರಾಗಿ ಪಾಲಿಸುತ್ತೇವೆ.
– ತರುಣ್, ಬಿಕಾಂ ವಿದ್ಯಾರ್ಥಿ
ಸ್ನೇಹಿತರ ಸಮಾಗಮದಿಂದ ಖುಷಿ
ಕಾಲೇಜು ಪುನರಾರಂಭ ಆಗುತ್ತಿರುವುದು ಸಂತಸ ತಂದಿದೆ. ಆನ್‍ಲೈನ್ ಶಿಕ್ಷಣ ಪದ್ಧತಿಯಿಂದ ಕಲಿಯಲು ತೊಂದರೆ ಆಗಿದೆ. ಇದೀಗ ಭೌತಿಕ ತರಗತಿ ಆರಂಭವಾಗಿರುವುದರಿಂದ ಅನುಕೂಲ ಆಗುತ್ತಿದೆ. ಸ್ನೇಹಿತರ ಸಮಾಗಮದಿಂದ ಖುಷಿ ತಂದಿದೆ.
– ನಯನ, ಬಿಕಾಂ, ವಿದ್ಯಾರ್ಥಿನಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ