ಹುಳಿಯಾರು :
ಮಂಗಳೂರು-ವಿಶಾಖಪಟ್ಟಣಂ ರಾಷ್ಟ್ರೀಯ ಹೆದ್ದಾರಿ-234 ರ ಹುಳಿಯಾರು ಭಾಗದ ರಸ್ತೆ ವಿಸ್ತರಣೆಯ ಕಾಮಗಾರಿ 3 ವರ್ಷ ಕಳೆದರೂ ಮುಗಿಯದೆ ಸ್ಥಗಿತವಾದ ಪರಿಣಾಮ ವಾಹನ ಸವಾರರು ಬೇಸಿಗೆಯಲ್ಲಿ ಧೂಳಿನ ಮಜ್ಜನ, ಮಳೆಗಾಲದಲ್ಲಿ ಬಿದು-ಎದ್ದು ವಾಹನ ತಳ್ಳಿಕೊಂಡು ಪ್ರಯಾಣಿಸುವ ಅನಿವಾರ್ಯ ಕರ್ಮ ಸೃಷ್ಠಿಯಾಗಿದೆ.
ಹೌದು, ಗುರುವಾರ ಸಂಜೆ ಹುಳಿಯಾರಿನಲ್ಲಿ ಬಿದ್ದ ಮಳೆಗೆ ರಾಮಗೋಪಾಲ್ ಸರ್ಕಲ್ ಬಳಿಯ ಅರ್ಧಕ್ಕೆ ಸ್ಥಗಿತಗೊಂಡಿರುವ ರಸ್ತೆ ಕೆರೆಯಾಗಿ ಮಾರ್ಪಟ್ಟು, ವಾಹನ ಸವಾರರಿಗೆ ಕಿರಿಕಿರಿ ತಂದೊಡ್ಡಿತ್ತು. ಮಳೆ ನೀರಿನ ಜೊತೆಗೆ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದಾಗಿ ರಸ್ತೆಯ ನೀರು ಚರಂಡಿಗೆ ಹರಿಯದೆ ಚರಂಡಿ ನೀರೆ ರಸ್ತೆಗೆ ಹರಿದ ಪರಿಣಾಮ ಬೆಳಗ್ಗೆವರೆಗೂ ನೀರು ರಸ್ತೆಯಲ್ಲಿ ಓಡಾಡುವವರಿಗೆ ಸಾಕಷ್ಟು ತೊಂದರೆಯಾಯಿತು.
ಕಳೆದ 3 ವರ್ಷಗಳಿಂದಲೂ ಇಲ್ಲಿನ ಸಮಸ್ಯೆಗೆ ಮುಕ್ತಿ ಸಿಗದೆ ವಾಹನ ಸವಾರರಿಗೆ ಹಾಗೂ ರಸ್ತೆ ಪಕ್ಕದ ವ್ಯಾಪಾರಿಗಳು ಹಾಗೂ ನಿವಾಸಿಗಳು ನಿತ್ಯವೂ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿ ಶಾಪಹಾಕಿ ದಿನ ದೂಡುತ್ತಿದ್ದಾರೆ. ಸಾಧಾರಣ ಮಳೆಬಂದರೂ ಸಾಕು, ಮೇಲಿನಿಂದ ನೀರು ಹರಿದು ಬಂದು ರಾಮಗೋಪಾಲ್ ಸರ್ಕಲ್ ಬಳಿ ನಿಲ್ಲುತ್ತದೆ. ಹೊರಗೆ ಹರಿಯದೆ ನಿಂತ ಜಾಗದಲ್ಲೇ ನೀರು ನಿಲ್ಲುತ್ತಿದ್ದು ಸೊಳ್ಳೆಗಳ ಕಾಟ, ಕೊಳಚೆ ನೀರಿನ ದುರ್ನಾತ ಹೇಳತೀರದಾಗಿದೆ.
ಈಗಾಗಲೇ ಮಳೆ ನೀರು ನಿಂತ ಗುಂಡಿಗೆ ಒಬ್ಬರು ಬಿದ್ದು ಸಾವನ್ನಪ್ಪಿದ್ದಾರೆ. ಹಾರುನ್ ಷರೀಪ್ ಅವರ ಈರುಳ್ಳಿ ಗೋಡನ್ ಕುಸಿದಿದೆ. ಇಲ್ಲಿನ ನಿವಾಸಿಗಳ ಮನೆಗೆ ಮಳೆ ಬಂದಾಗ ನೀರು ನುಗ್ಗುವುದು ಸಾಮಾನ್ಯವಾಗಿದೆ. ಆದರೂ ಅಧಿಕಾರಿಗಳು, ಜನಪತ್ರಿನಿಧಿಗಳು ರಸ್ತೆ ಕಾಮಗಾರಿ ಮುಗಿಸದೆ ನಿರ್ಲಕ್ಷ್ಯಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಮಗಾರಿಯನ್ನು ವೈಜ್ಞಾನಿಕವಾಗಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ನೆರವಾಗುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
