ಹುಳಿಯಾರು:
ಕೊರೊನಾದಿಂದಾಗಿ ಕಳೆದ 10 ತಿಂಗಳಿನಿಂದ ಮುಚ್ಚಿದ್ದ ಶಾಲೆಗಳು ಜನವರಿ 1 ರಿಂದ ಪುನರಾರಂಭವಾಯಿತು. ಶಾಲಾಕಾಲೇಜು ಸಿಬ್ಬಂದಿ ಸಹ ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸಿದರು. ಹುಳಿಯಾರು ಹೋಬಳಿಯ ದಬ್ಬಗುಂಟೆಯಲ್ಲಿ ನೂತನ ಗ್ರಾಪಂ ಸದಸ್ಯ ಡಿ.ಬಿ.ರವಿಕುಮಾರ್ ಅವರು ಉಚಿತವಾಗಿ ಮಾಸ್ಕ್ ವಿತರಿಸಿ ಮಕ್ಕಳನ್ನು ಸ್ವಾಗತಿಸುವ ಮೂಲಕ ಮಾಧರಿಯಾದರು.
ಹೌದು ಇಡೀ ಮನಕುಲವನ್ನೇ ತಲ್ಲಣಗೊಳಿಸಿದ್ದ ಕೊರೊನಾ ಮಹಾಮಾರ ಆರ್ಭಟಕ್ಕೆ ಹೆದರಿ ಸರ್ಕಾರ ಶಾಲಾ-ಕಾಲೇಜುಗಳ ಬಾಗಿಲು ಬಂದ್ ಮಾಡಿತ್ತು. ಲಾಕ್‍ಡೌನ್ ತೆರವಾಗದ ನಂತರ ಆನ್‍ಲೈನ್ ಮೂಲಕ, ತದನಂತರ ವಿದ್ಯಾಗಮನದ ಮೂಲಕ ಮಕ್ಕಳಿಗೆ ಪಾಠ ಪ್ರವಚನ ಬೋದನೆ ಆರಂಭಿಸಿತ್ತು. ಈಗ ರಾಜ್ಯದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಜನವರಿ 1 ರಿಂದ ಶಾಲಾಕಾಲೇಜುಗಳನ್ನು ಸರ್ಕಾರ ಪುನರಾರಂಭಿಸಿತು.
ಸರ್ಕಾರ ಸೇರಿದಂತೆ ಎಲ್ಲರಿಗೂ ಮಕ್ಕಳು ಶಾಲಾಕಾಲೇಜುಗಳಿಗೆ ಆಗಮಿಸುವ ಬಗ್ಗೆ ಅನುಮಾನ ಮೂಡಿತ್ತು. ಆದರೆ ಸರ್ಕಾರದ ನಿರ್ಧಾರವನ್ನು ಪೋಷಕರು ಸ್ವಾಗತಿಸಿದ್ದು ತಮ್ಮ ಮಕ್ಕಳನ್ನು ನಿರಾತಂಕವಾಗಿ ಶಾಲಾಕಾಲೇಜುಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಮಕ್ಕಳೂ ಸಹ ಎಂದಿನಂತೆ ಸಂತಸದಿಂದಲೇ ಶಾಲೆಗಳತ್ತ ಹೆಜ್ಜೆ ಹಾಕಿದರು. ಈ ಮೂಲಕ ಸರ್ಕಾರ ನಿರಾಳವಾಯಿತು.
6, 7, 8 ಮತ್ತು 9 ನೇ ತರಗತಿ ಮಕ್ಕಳಿಗೆ ಶಾಲಾ ಆವರಣದಲ್ಲಿಯೇ ವಿದ್ಯಾಗಮ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿಗೆ ಒಂದು ತರಗತಿಯಲ್ಲಿ 15 ಮಕ್ಕಳು, ಒಂದು ಡೆಸ್ಕ್‍ನಲ್ಲಿ ಇಬ್ಬರು ವಿದ್ಯಾರ್ಥಿಗಳು ಮಾತ್ರ ಕುಳಿತುಕೊಳ್ಳಲು ಅವಕಾಶ ಕಲ್ಪಿಸಿ ತರಗತಿ ಆರಂಭಿಸಲಾಯಿತು. ತರಗತಿಗಳನ್ನು ಪ್ರವೇಶಿಸುವ ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಕೈಗಳಿ ಸ್ಯಾನಿಟೈಸರ್ ಹಾಕಲಾಯಿತು.
ದಬ್ಬಗುಂಟೆ ಗ್ರಾಮದಲ್ಲಿ ನೂತನ ಗ್ರಾಪಂ ಸದಸ್ಯ ಡಿ.ಬಿ.ರವಿಕುಮಾರ್ ಅವರು ಶಾಲೆಗೆ ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ ಮಾಸ್ಕ್ ವಿತರಿಸಿ ಮಾತನಾಡಿ ಶಾಲೆಗಳು ಮುಚ್ಚಿರುವುದರಿಂದ ಮಕ್ಕಳಲ್ಲಿ ಕಲಿಕಾಸಕ್ತಿಯೇ ಇಲ್ಲದಾಗಿದೆ. ಅಲ್ಲದೆ ಪೋಷಕರ ಜತೆ ಕೂಲಿಗಳಿಗೆ ಹೋಗುತ್ತಿರುವ ನಿದರ್ಶನಗಳಿವೆ. ಸರ್ಕಾರ ಈಗಲಾದರೂ ಶಾಲಾಕಾಲೇಜು ಆರಂಭಿಸಿರುವುದ ಮಕ್ಕಳ ಭವಿಷ್ಯದ ದೃಷ್ಠಿಯಿಂದ ಸ್ವಾಗತಾರ್ಹ ನಡೆಯಾಗಿದೆ ಎಂದರು.
ಶಾಲೆಗೆ ಬರುವ ವಿದ್ಯಾರ್ಥಿಗಳು ಕೊರೊನಾ ಬಗ್ಗೆ ಎಚ್ಚರಿಕೆ ವಹಿಸದೆ ಮೈಮರೆತು ಸೋಂಕು ತಗುಲಿದರೆ ಸಾರ್ವಜನಿಕರ ಒತ್ತಡಕ್ಕೆ ಮಣಿದು ಮತ್ತೆ ಶಾಲೆಗಳನ್ನು ಮುಚ್ಚುತ್ತದೆ. ಹಾಗಾಗಿ ಎಂದಿನಂತೆ ಶಾಲೆಗಳು ನಡೆಯಬೇಕೆಂದಾದರೆ ಮಕ್ಕಳು ಹಾಗೂ ಸಿಬ್ಬಂದಿ ಜಾಗೃತರಾಗಬೇಕು. ಆಟದ ಸಮಯದಲ್ಲಿ, ಆನಾರೋಗ್ಯದ ಸಂದರ್ಭದಲ್ಲಿ ಮೈಯೆಲ್ಲ ಕಣ್ಣಾಗಿರಬೇಕಿದೆ ಎಂದು ಎಚ್ಚರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ