ಹುಳಿಯಾರು : ಪುರದಮಠದಲ್ಲಿ ಕೃತಿಕಾಉತ್ಸವ ಮುದ್ದೆಯೂಟ ಸವಿದ ಭಕ್ತರು

 ಹುಳಿಯಾರು : 

      ಹೋಬಳಿ ಕೆಂಕೆರೆ ಗ್ರಾಮದಲ್ಲಿ ನೆಲೆಸಿರುವ ಪುರಾಣ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ಕೃತಿಕಾ ಮಹೋತ್ಸವವು ಸ್ವಾಮಿಯ ಮೂಲಸ್ಥಾನ ಪುರದಮಠದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

      ಪುರದಮಠದ ಕೃತಿಕೋತ್ಸವ ಎಂದರೆ ಅದೊಂದು ಮುದ್ದೆ ಜಾತ್ರೆ ಎಂದೇ ಪ್ರಸಿದ್ಧಿ. ಹಾಗಾಗಿ ತುಮಕೂರು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಯ ನಾನಾ ಭಾಗದಿಂದ ಭಕ್ತರು ಆಗಮಿಸುತ್ತಾರೆ. ಸ್ವಾಮಿಯ ದರ್ಶನ ಪಡೆದು ಹಣ್ಣುಕಾಯಿ ಮಾಡಿಸುವ ಜೊತೆಗೆ ರಾಗಿಮುದ್ದೆ ಸವಿಯುತ್ತಾರೆ.

      ಕೃತಿಕೋತ್ಸವಕ್ಕೆ ಮುದ್ದೆ ಊಟ ನೀಡುವುದು ಕಳೆದ ಹತ್ತಾರು ದಶಕಗಳಿಂದಲೂ ನಡೆದುಕೊಂಡು ಬಂದ ಪ್ರತೀತಿ. ಇದಕ್ಕಾಗಿ ಭಕ್ತರು ತಾವು ಬೆಳೆದ ದವಸ ಧಾನ್ಯ, ತರಕಾರಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಮೀಸಲಾಗಿ ನೀಡುತ್ತಾರೆ. ಕೆಲವರು ಅಕ್ಕಿ, ಬೇಳೆಕಾಳು ಸೇರಿದಂತೆ ಸಾರು ತಯಾರಿಸಲು ಬೇಕಾದ ವಸ್ತುಗಳನ್ನು ಕೊಡಿಸಿರುತ್ತಾರೆ. ಇದನ್ನೆಲ್ಲಾ ಉಪಯೋಗಿಸಿ ಗ್ರಾಮದ ಜನರೆಲ್ಲಾ ಸೇರಿ ರಾಗಿಮುದ್ದೆ ಹಾಗೂ ಹುಳ್ಸೊಪ್ಪು ಕಾಳಿನ ಸಾರು ತಯಾರಿಸಿರುತ್ತಾರೆ. ಎರಡ್ಮೂರು ಕ್ವಿಂಟಾಲ್ ರಾಗಿ ಬಳಸಿ ಮುದ್ದೆ, ಏಳೆಂಟು ಕೊಳಗದಷ್ಟು ಸಾಂಬರ್ ತಯಾರಿಸಿ ಬೆಳಗ್ಗೆಯಿಂದ ಸಂಜೆವರೆವಿಗೂ ಭಕ್ತರಿಗೆ ಬಡಿಸುತ್ತಾರೆ. ಜಾತಿ, ಅಂತಸ್ತು ಬೇದವಿಲ್ಲದೆ ಎಲ್ಲರೂ ಸರತಿ ಸಾಲಿನಲ್ಲಿ ನಿಂತು ಮುದ್ದೆಸಾರು ಸ್ವೀಕರಿಸಿ ಸವಿಯುತ್ತಾರೆಂದರು.

      ಸಂಜೆ ಭಕ್ತರೆಲ್ಲರ ಊಟವಾದ ನಂತರ ಮನೆಗಳಿಗೆ ಕೊಂಡೊಯ್ಯುಲು ಸಾರು ನೀಡುತ್ತಾರೆ. ಸಂಜೆ ನಂತರ ಸಾರು ಸ್ವೀಕರಿಸುವ ಸರತಿ ಸಾಲು ಸಹ ನಿಂತಿರುತ್ತದೆ. ಹಾಗಾಗಿಯೇ ಊಟಕ್ಕೆ ಬರುವಾಗಲೇ ಮನೆಗಳಿಂದ ಬಾಕ್ಸ್‍ಗಳನ್ನು ತಂದು ಸಂಜೆಯವರೆವಿಗೂ ಕಾದು ಸಾರು ತೆಗೆದೊಯ್ಯುತ್ತಾರೆ. ಒಟ್ಟಾರೆ ಧಾರ್ಮಿಕ ಸಮಾರಂಭದಲ್ಲಿ ಸುತ್ತಲ್ಲೂ ಕಾಣಸಿಗದ ಮುದ್ದೆ ಊಟ ಸಿಗುವುದರಿಂದ ಇದೊಂದು ಈ ಭಾಗದ ವಿಶೇಷವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link