ಹುಳಿಯಾರು : ದಶಕಗಳ ಹೋರಾಟದ ಫಲ, ಹೇಮೆ ಹರಿಯುವ ಕನಸು ನನಸು

ಹುಳಿಯಾರು :

      ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಳೆದ ಮೂರ್ನಲ್ಕು ತಿಂಗಳಿನಿಂದ ನಿರಂತರವಾಗಿ ಹರಿದು ವಿವಿಧ ಕೆರೆಗಳನ್ನು ತುಂಬಿಸಿರುವ ಹೇಮಾವತಿ ನದಿ ನೀರು ಹುಳಿಯಾರು ಹೋಬಳಿಯ ತಿಮ್ಲಾಪುರ ಕೆರೆಗೆ ಇನ್ನೊಂದು ವಾರದಲ್ಲಿ ಹರಿಯುವ ನಿರೀಕ್ಷೆಯಿದೆ. ಈ ಮೂಲಕ ಈ ಭಾಗದ ಜನರ ಅನೇಕ ದಶಕಗಳ ಕನಸು ನನಸಾಗಲಿದೆ.

      ದಶಕಗಳ ಹಿಂದೆ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳ 64 ದಿನಗಳ ಅಹೋರಾತ್ರಿ ಹೋರಾಟ ಫಲ ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್‍ಕುಮಾರ್ ಹಾಗೂ ಸಿ.ಬಿ.ಸುರೇಶ್ ಬಾಬು ಒತ್ತಡದ ಪರಿಣಾಮ ಬರದನಾಡು ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹೇಮಾವತಿ ಯೋಜನೆ ಮಂಜೂರಾಗಿತ್ತು. ಆದರೆ ಯೋಜನೆ ಮಂಜೂರಾಗಿ ದಶಕಗಳು ಕಳೆದಿದ್ದರೂ ಕಾಮಗಾರಿ ನೆನಗುದಿಗೆ ಬಿದ್ದು ತಾಲೂಕಿಗೆ ಹೇಮೆ ಹರಿಯುವ ಕನಸು ಕನಸಾಗಿಯೇ ಉಳಿದಿತ್ತು.

      ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಚುನಾವಣಾ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನೆನಗುದಿಗೆ ಬಿದ್ದಿದ್ದ ಕಾಮಗಾರಿಗೆ ಜಿಂಕೆ ವೇಗ ಕೊಟ್ಟರಲ್ಲದೆ ಕಾಮಗಾರಿ ಅನುಷ್ಟಾನಕ್ಕೆ ಇದ್ದ ಎಡರುತೊಡರುಗಳನ್ನು ನಿವಾರಿಸಿ ಮೂರ್ನಲ್ಕು ತಿಂಗಳ ಹಿಂದೆ ತಾಲೂಕಿಗೆ ಪ್ರಾಯೋಗಿಕವಾಗಿ ಹೇಮೆ ಹರಿಸಿ ಈ ಭಾಗದ ಜನರ ಕನಸು ನನಸಾಗಿಸಿದರು.

      ಈ ಯೋಜನೆಯ ಗುರುತ್ವಾಕರ್ಷಣೆ ಮೂಲಕ ಹರಿಯುವ ಕೆರೆಗಳ ಪೈಕಿ ಮೊದಲು ಸಾಸಲು ಕೆರೆ ತುಂಬಿಸಿದ ಹೇಮಾವತಿ ನದಿ ನೀರು ನಂತರ ಶೆಟ್ಟಿಕೆರೆ, ಅಣೆಕಟ್ಟೆ, ಅಂಕಸಂದ್ರ, ಬರಗೂರು, ಟೀ ತಾಂಡ್ಯ, ಸಂಧಿ ಹೊಳೆ ಅಣೆಗಳನ್ನು ತುಂಬಿಸಿ ಹೇಮಾವತಿ ಹರಿಯುತ್ತಿದ್ದಾರೆ. ಇದಾದ ನಂತರ ಗೂಬೆಹಳ್ಳಿ, ನಂದಿಹಳ್ಳಿ ಗ್ರಾಮಗಳ ಎರಡ್ಮೂರು ಸಣ್ಣ ಪಿಕಪ್‍ಗಳನ್ನು ತುಂಬಿಸಿ ಬಹು ನಿರೀಕ್ಷಿತ ಕೆರೆಯಾದ ತಿಮ್ಲಾಪುರ ಕೆರೆಗೆ ಹರಿಯಲಿದೆ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆಯ ಎಇಇ ಪ್ರಭಾಕರ್.

      ಮಳೆಯಾಶ್ರಿತ ಪ್ರದೇಶವಾದ ಚಿಕ್ಕನಾಯನಕನಹಳ್ಳಿ ತಾಲೂಕು ಸಮರ್ಪಕವಾದ ಮಳೆಯಿಲ್ಲದೆ ಬರದನಾಡಾಗಿ ಪರಿವರ್ತನೆಯಾಗಿತ್ತು. ಒಂದು ಸಾವಿರ ಅಡಿ ಕೊಳೆವೆ ಬಾವಿ ಕೊರೆದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಣಾಮ ತೋಟಗಳು ಒಣಗಿ ಇಲ್ಲಿನ ಜನರು ಉದ್ಯೋಗ ಅರಸಿ ಪಟ್ಟಣ ಸೇರಿದ್ದರು. ಈಗ ಮೂರ್ನಾಲ್ಕು ತಿಂಗಳಿಂದ ತಾಲೂಕಿನಲ್ಲಿ ಗುರುತ್ವಾಕರ್ಷಣೆ ಮೂಲಕ ಹೇಮೆ ಹರಿಯುತ್ತಿರುವುದರಿಂದ ಬತ್ತಿದ್ದ ಬಾವಿ, ಕೊಳವೆಗಳಲ್ಲಿ ನೀರು ಬರಲಾರಂಭಿಸಿದೆ.

     ಇದರಿಂದಾಗಿ ನೀರು ಹರಿಯುತ್ತಿರುವ ಭಾಗದ ರೈತರು ಸಂಭ್ರಮಕ್ಕೆ ಪಾರವೇ ಇಲ್ಲದಾಗಿದೆ. ಹಾಗಾಗಿ ತಿಮ್ಲಾಪುರ ಭಾಗದ ರೈತರು ತಮ್ಮ ಕೆರೆ ತುಂಬುವುದನ್ನು ಕಾತುರದಿಂದ ಕಾಯುತ್ತಿದ್ದಾರೆ. ಇವರ ಜತೆಗೆ ಹೇಮೆ ಯೋಜನೆ ಮಂಜೂರಿಗಾಗಿ ಅಹೋರಾತ್ರಿ ಧರಣಿ ಕುಳಿತಿದ್ದ ಬಹುತೇಕ ಸಂಘಟನೆಗಳು ಹುಳಿಯಾರು ಹೋಬಳಿಯವರಾಗಿದ್ದಾರೆ. ಅಹಜವಾಗಿಯೇ ತಮ್ಮ ಹೋರಾಟದ ಫಲವನ್ನು ಕೆರೆ ತುಂಬುವುದನ್ನು ಕಣ್ಣಾರೆ ಕಂಡು ಸಂಭ್ರಮಿಸಲು ಎದುರು ನೋಡುತ್ತಿದ್ದಾರೆ. ಇವರೆಲ್ಲರ ನಿರೀಕ್ಷೆಯಂತೆ ತಿಮ್ಲಾಪುರ ಕೆರೆ ನೀರು ಹರಿಯಲು ಕ್ಷಣಗಣನೆ ಆರಂಭವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link