ಹುಳಿಯಾರು : ಕಾಲೇಜು ಶಿಕ್ಷಣ ಆಯುಕ್ತರಿಗೆ ಸಚಿವರ ತರಾಟೆ

 ಹುಳಿಯಾರು : 

       ಪ್ರಥಮ ದರ್ಜೆ ಕಾಲೇಜು ಸಿಬ್ಬಂದಿ ಕೊರತೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಿಂದಲೇ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾದ ಪ್ರದೀಪ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಜರುಗಿದೆ.

      ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಸಚಿವರೂ ಆದ ಜೆ.ಸಿ.ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ದೀರ್ಘ ಕಾಲದ ಕೋವಿಡ್ ರಜೆಯ ನಂತರ ಆರಂಭವಾದ ಕಾಲೇಜಿನ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಸೋಮವಾರ ಸಭೆ ಕರೆಯಲಾಗಿತ್ತು.

      ಈ ಸಭೆಯಲ್ಲಿ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಅವರು ಡೆಪ್ಯೂಟೆಷನ್ ಮೇರೆಗೆ ಡಿ ಗ್ರೂಪ್ ನೌಕರರು ಬೇರೆಬೇರೆ ಕಾಲೇಜುಗಳಿಗೆ ತೆರಳಿರುವುದಿಂದ ಕಾಲೇಜಿನ ಸುಗಮ ಕೆಲಸ ಕಾರ್ಯಗಳಿಗೆ ತೊಡಕಾಗಿದೆ. ಹಾಗಾಗಿ ಕಾಲೇಜು ಅಭಿವೃದ್ಧಿ ಸಮಿತಿ ಹಣದಲ್ಲಿ ಡಿ ಗ್ರೂಪ್ ಸಿಬ್ಬಂದಿ ನೇಮಕಕ್ಕೆ ಅವಕಾಶವಿದ್ದು ನೇಮಿಸಿಕೊಳ್ಳಲು ಸಭೆ ಅನುಮತಿ ಕೊಡುವಂತೆ ಕೇಳಿಕೊಂಡರು.

     ಕಾಲೇಜು ಅಭಿವೃದ್ಧಿ ಸಮಿತಿಯಲ್ಲಿ ಎಷ್ಟು ಹಣ ಸಂಗ್ರಹವಾಗಿದೆ. ಸಿಬ್ಬಂದಿಗೆ ಎಷ್ಟು ಗೌರವಧನ ಕೊಡಬೇಕು ಎಂದು ಸಚಿವರು ಪ್ರಶ್ವಿಸಿದರು. ಒಬ್ಬ ವಿದ್ಯಾರ್ಥಿಯಿಂದ 400 ರೂನಂತೆ ಒಟ್ಟು 1.28 ಲಕ್ಷ ರೂ. ಸಂಗ್ರಹವಾಗಿದೆ. ಇದರಲ್ಲಿ ಒಬ್ಬ ಡಿ ಗ್ರೂಪ್ ನೌಕರರಿಗೆ ಇಲಾಖೆ ಸೂಚನೆಯಂತೆ ಮಾಸಿಕ 10 ಸಾವಿರ ರೂ.ನಂತೆ ವರ್ಷಕ್ಕೆ 1.20 ಲಕ್ಷ ರೂ. ಕೊಡಬೇಕೆಂದು ಪ್ರಾಚಾರ್ಯರು ತಿಳಿಸಿದರು. ಸಂಗ್ರಹವಾಗುವ ಅಷ್ಟೂ ಹಣವನ್ನು ಡಿ.ಗ್ರೂಪ್‍ನವರಿಗೆ ಕೊಟ್ಟರೆ ಕಾಲೇಜು ಅಭಿವೃದ್ಧಿಗೆ ಹಣ ಎಲ್ಲಿರುತ್ತದೆ ಎಂದೇಳಿ ಸಭೆಯಿಂದಲೇ ಶಿಕ್ಷಣ ಇಲಾಖೆಯ ಆಯುಕ್ತರಿಗೆ ದೂರವಾಣಿ ಕರೆ ಮಾಡಿದರು.

      ಡೆಪ್ಯೂಟೆಷನ್ ಇರುವುದು ಕಾಲೇಜಿನ ಹಿತಕ್ಕೆ ವಿನಃ ನೌಕರರ ಹಿತಕಲ್ಲ. ಕಾಲೇಜಿನಲ್ಲಿ ಹೆಚ್ಚುವರಿ ಸಿಬ್ಬಂದಿ ಇದ್ದಾಗ ಮಾತ್ರ ಡೆಪ್ಯೂಟೆಷನ್ ಮಾಡಲು ಸರ್ಕಾರ ಅವಕಾಶ ಕೊಟ್ಟಿದೆ. ಆದರೆ ಇದೇನ್ರಿ ಕಾಲೇಜಿನಲ್ಲಿ ಡಿ ಗ್ರೂಪ್ ನೌಕರರೇ ಇಲ್ಲದಂತೆ ಎಲ್ಲರನ್ನೂ ಡೆಪ್ಯೂಟೆಷನ್ ಮಾಡಿದ್ದೀರಿ. ಹೀಗಾದರೆ ಕಾಲೇಜುಗಳನ್ನು ಹೇಗೆ ನಡೆಸುವುದು ಎಂದು ಖಾರವಾಗಿ ಪ್ರಶ್ನಿಸಿದರಲ್ಲದೆ ತಕ್ಷಣ ಉಪನ್ಯಾಸಕರು ಸೇರಿದಂತೆ ಈ ಕಾಲೇಜಿನಿಂದ ಡೆಪ್ಯೂಟ್ ಆಗಿರುವ ಎಲ್ಲರ ಡೆಪ್ಯೂಟೆಷನ್ ಆದೇಶ ಹಿಂಪಡೆಯಬೇಕು. ಅವರು ಒಪ್ಪದಿದ್ದರೆ ರಾಜೀನಾಮೆ ಪಡೆಯಿರಿ ಅದೇನಾಗುತ್ತೋ ನೋಡೋಣ. ಇದನ್ನು ನಿರ್ಲಕ್ಷ್ಯಿಸಿದರೆ ಅಧಿವೇಷನದಲ್ಲಿ ಇಶ್ಯೂ ರೈಸ್ ಮಾಡುತ್ತೇನೆ ಎಚ್ಚರ ಎಂದರು.
ಈ ಸಭೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಬ್ಯಾಂಕ್ ಮರುಳಪ್ಪ, ಎಂಎಸ್‍ಆರ್ ನಟರಾಜು, ಡಾ.ಉಮಾಸಿದ್ಧರಾಮಯ್ಯ, ಎಲ್.ಆರ್.ಬಾಲಾಜಿ, ನಜರುಲ್ಲಾಖಾನ್, ಕೆಂಕೆರೆ ನವೀನ್, ಬರಕನಹಾಲ್ ಶಿವಕುಮಾರ್ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link