ಹುಳಿಯಾರು : 3-4 ತಿಂಗಳಲ್ಲೇ ಕಿತ್ತೋದ ಅಣೆಕಟ್ಟೆ ರಸ್ತೆ

 ಹುಳಿಯಾರು :

      ಕಾಮಗಾರಿ ನಡೆಯುವ ಸಂದರ್ಭದಲ್ಲೇ ಸಾರ್ವಜನಿಕರು ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ಎಚ್ಚರಿಸಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯಿಸಿದ್ದ ಪರಿಣಾಮ ಕಾಮಗಾರಿ ಮುಗಿದು ಮೂರ್ನಾಲ್ಕು ತಿಂಗಳೊಳಗಾಗಲೇ ರಸ್ತೆಯ ಅಲ್ಲಲ್ಲಿ ಕಿತ್ತೋಗುತ್ತಿದೆ.

      ಹೌದು 19 ಕೋಟಿ ರೂ. ವೆಚ್ಚದಲ್ಲಿ ಹುಳಿಯಾರು ಅಣೇಕಟ್ಟೆ ರಸ್ತೆ ಕಾಮಗಾರಿಯು ಇತ್ತೀಚೆಗೆ ನಡೆಯಿತು. ಕಾಮಗಾರಿ ನಡೆಯುತ್ತಿದ್ದ ಸಂದರ್ಬದಲ್ಲೇ ಸ್ಥಳೀಯರು ಕಾಮಗಾರಿಯು ತೀರ ಕಳಪೆಯಿಂದ ಕೂಡಿದ್ದು ಅತ್ತ ಡಾಂಬಾರ್ ಹಾಕಿಕೊಂಡು ಹೋಗುತ್ತಿದ್ದರೆ ಇತ್ತ ಕಿತ್ತೋಗುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಎರಡ್ಮೂರು ತಿಂಗಳುಗಳ ಹಿಂದೆ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಿದ್ದರು.

      ಈ ರಸ್ತೆಯ ಡಾಂಬಾರೀಕರಣಕ್ಕೆ 19 ಕೋಟಿ ರೂ. ಬಿಡುಗಡೆಯಾಗಿದ್ದರೂ ಸಹ ಹಳೆಯ ಡಾಂಬಾರ್ ಕೀಳದೆ ಅದರ ಮೇಲೆಯೇ ಹೊಸ ಡಾಂಬಾರ್ ಹಾಕಲಾಗುತ್ತಿದೆ. ಪರಿಣಾಮ ಡಾಂಬಾರ್ ಹಾಕಿದ ಮರುಕ್ಷಣವೇ ಜಲ್ಲಿ ಕಲ್ಲುಗಳು ಮೇಲೇಳುತ್ತಿದೆಯಲ್ಲದೆ ರಸ್ತೆಯ ಅಂಚಿನಲ್ಲಿ ಕಿತ್ತೋಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿತ್ತು. ಅಲ್ಲದೆ ಸ್ಥಳಕ್ಕೆ ಆಗಮಿಸಿದ್ದ ಪಿಡಬ್ಲ್ಯೂಡಿ ಎಂಜಿನಿಯರ್ ಸೋಮಶೇಖರ್ ಹಾಗೂ ಚಂದ್ರಶೇಖರ್ ಅವರಿಗೆ ಕಾಲಿನಲ್ಲಿಯೇ ಕೆರೆದು ಕಾಮಗಾರಿಯ ಗುಣಮಟ್ಟದ ಅನಾವರಣ ಮಾಡಿಸಿದ್ದರು.
ಇದಕ್ಕೆ ಎಂಜಿನಿಯರ್ ಸೋಮಶೇಖರ್ ಅವರು ಈ ಕಾಮಗಾರಿಯು ಹಳೆಯ ರಸ್ತೆಯ ಮೇಲೆಯೇ ಹೊಸ ಡಾಂಬರ್ ಹಾಕುವುದಾಗಿದೆ. ಅಲ್ಲದೆ ರಸ್ತೆಯ ಡಾಂಬಾರ್ ಪರ್ಸೆಂಟೇಜ್ ಪರಿಶೀಲಿಸಿದರೆ ಎಸ್ಟಿಮೆಂಟ್ ಪ್ರಕಾರನೇ ಇದೆ. ಅಲ್ಲದೆ ಡಾಂಬರ್ ಸೆಟ್ ಆಗುವ ಮೊದಲೇ ವಾಹನಗಳು ಓಡಾಡಿದ ಪರಿಣಾಮ ಕಿತ್ತುಹೋಗಿದೆ ಅಷ್ಟೆ. ಹಾಕಿರುವ ಡಾಂಬಾರ್ ಸೆಟ್ ಆಗಲು ಬಿಡಿ ಎಂದು ಗುತ್ತಿಗೆದಾರರ ಪರ ಮಾತನಾಡಿದರು.

      ಎಂಜಿನಿಯರ್ ಅವರ ನಿರ್ಲಕ್ಷ್ಯತನದಿಂದ ಕಾಮಗಾರಿ ಮುಗಿದು ಮೂರ್ನಾಲ್ಕು ತಿಂಗಳಲ್ಲೇ ರಸ್ತೆಯ ಡಾಂಬರ್ ಕಿತ್ತೋಗಿ ಜಲ್ಲಿಕಲ್ಲುಗಳು ಮೇಲೇಳುತ್ತಿವೆ. ಪರಿಣಾಮ ವಾಹನಗಳು ಸುಗಮ ಸಂಚಾರಕ್ಕೆ ತೊಡಕಾಗಿದೆ. ಮಳೆ ಹಾಗೂ ಕಿತ್ತೋಗಿರುವ ರಸ್ತೆಯ ಮೇಲೆ ವಾಹನಗಳು ಓಡಾಡಿ ಇಡೀ ರಸ್ತೆ ಕಿತ್ತು ಹಾಳಾಗುವ ಮೊದಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ. ತಕ್ಷಣ ಕಿತ್ತೋಗಿರುವ ಕಡೆಯಲ್ಲಾದರೂ ಮರುಡಾಂಬರೀಕರಣ ಮಾಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ ಎಂಬುದು ಸಾರ್ವಜನಿಕರ ಮನವಿಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link