ಹುಳಿಯಾರು : ರೈತರಿಂದ ಸುಂಕ ವಸೂಲಿ ಮಾಡದಂತೆ ಸೂಚನೆ

 ಹುಳಿಯಾರು :

     ಮುಂಜಾನೆ ಮಾರುಕಟ್ಟೆ, ವಾರದ ಸಂತೆಗೆ ಮುಂಜಾನೆ ಬರುವ ಹಾಗೂ ಪಟ್ಟಣದಲ್ಲಿ ನೇರವಾಗಿ ಸೊಪ್ಪು, ತರಕಾರಿ, ಹಣ್ಣು ಮಾರುವ ರೈತರಿಂದ ಸುಂಕ ವಸೂಲಿ ಮಾಡಬೇಡಿ ಎಂದು ಹುಳಿಯಾರು ಪಪಂ ಮುಖ್ಯಾಧಿಕಾರಿ ಮಂಜುನಾಥ್ ಮನವಿ ಮಾಡಿದರು.

      ಹುಳಿಯಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ವಿವಿಧ ಸುಂಕ ವಸೂಲಾತಿ ಗುತ್ತಿಗೆ ನೀಡಲು ಏರ್ಪಡಿಸಿದ್ದ ಬಹಿರಂಗ ಹರಾಜು ಸಭೆಯಲ್ಲಿ ಮಾತನಾಡಿದರು.

     ಹುಳಿಯಾರು ಪಟ್ಟಣದಲ್ಲಿ 181 ಮಂದಿ ಫುಟ್‍ಫಾತ್ ವ್ಯಾಪಾರಿಗಳು ನೊಂದಣಿ ಮಾಡಿಸಿಕೊಂಡಿದ್ದಾರೆ. ಇವರ ಬಳಿ ನಿತ್ಯ ಸುಂಕ ವಸೂಲಾತಿಗೆ ಗುತ್ತಿಗೆ ನೀಡಲಾಗುವುದು. ಸುಂಕ ವಸೂಲಿ ಮಾಡುತ್ತಿದ್ದೇವೆಂದ ಮಾತ್ರಕ್ಕೆ ವ್ಯಾಪಾರ ಮಾಡುವ ಸ್ಥಳ ಶಾಶ್ವತವಾಗಿ ವ್ಯಾಪಾರಿಗೆ ಸೇರಿದ್ದೆಂದು ಯಾರೂ ಭಾವಿಸಬಾರದು. ಸರ್ಕಾರ ಮತ್ತು ಮೇಲಧಿಕಾರಿಗಳಿಂದ ತೆರವಿಗೆ ಆದೇಶ ಬಂದ ತಕ್ಷಣ ತಕರಾರು ಮಾಡದೆ ತೆರವು ಮಾಡಬೇಕು ಎಂದು ಎಚ್ಚರಿಸಿದರು.

      ಈ ಸಂದರ್ಭದಲ್ಲಿ ಖಾಸಗಿ ಬಸ್ ಏಜೆಂಟರುಗಳು ಬಸ್ ಸುಂಕ ವಸೂಲಿಗೆ ಆಕ್ಷೇಪ ವ್ಯಕ್ತಪಿಡಿದರು. ಕೋವಿಡ್‍ನಿಂದಾಗಿ ಬಸ್ ಮಾಲೀಕರು ನಷ್ಟಕ್ಕೆ ಸಿಲುಕಿದ್ದು ಬಸ್ ಓಡದಿದ್ದರೂ ಟ್ಯಾಕ್ಸ್, ಇನ್ಸೂರೆನ್ಸ್ ಕಟ್ಟಿದ್ದಾರೆ. ಅಲ್ಲದೆ ಸರ್ಕಾರಿ ಬಸ್‍ಗಳ ಸಂಖ್ಯೆ ಹೆಚ್ಚಿರುವುದರಿಂದ ಮೊದಲಿನಂತೆ ಕಲೆಕ್ಷನ್ ಸಹ ಹಾಗುತ್ತಿಲ್ಲ. ಹಾಗಾಗಿ ಈ ವರ್ಷ ಖಾಸಗಿ ಬಸ್‍ಗಳಿಂದ ಸುಂಕ ವಸೂಲಿ ಮಾಡಬೇಡಿ ಎಂದರು. ಇದಕ್ಕೆ ಒಪ್ಪದ ಮುಖ್ಯಾಧಿಕಾರಿಗಳು ಬಸ್ ಸುಂಕ ವಸೂಲಿ ಗುತ್ತಿಗೆಯ ಹರಾಜು ನಡೆಸಿದರು.

      ಫುಟ್‍ಫಾತ್ ಸುಂಕ ವಸೂಲಿಯು 1,60,500 ರೂಗಳಿಗೆ ಹಾಗೂ ಸಂತೆ ಸುಂಕವು 1,20,500 ರೂಗಳಿಗೆ ಮಿಲ್ಟ್ರಿಶಿವಣ್ಣ ಅವರಿಗೂ, ಬಸ್‍ಸ್ಟಾಂಡ್ ಸುಂಕ 21 ಸಾವಿರ ರೂ.ಗಳಿಗೆ ಮುನಾವರ್‍ಗೂ, ಹುಣಸೆ ಮರ ಹರಾಜು 14,500 ರೂಗಳಿಗೆ ಮಂಜುನಾಥ್ ಅವರಿಗೂ ಹರಾಜಾಯಿತು.

      ಮುಖ್ಯಾಧಿಕಾರಿ ಮಂಜುನಾಥ್, ಸಿಬ್ಬಂದಿಗಳಾದ ಜುನೇದ್, ಉಮೇಶ್, ಪ್ರದೀಪ್, ವೆಂಕಟೇಶ್ ಸೇರಿದಂತೆ ಬಿಡ್‍ದಾರರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link