ಹುಳಿಯಾರು :
ಹುಳಿಯಾರು-ಕೋಡಿಪಾಳ್ಯದ ಪ್ರಖ್ಯಾತ ದೇವಸ್ಥಾನವಾದ ಶ್ರೀ ಕಂಕಾಳಿ ಮತ್ತು ಶ್ರೀ ತುಳಜಾಭವಾನಿ ದೇವಸ್ಥಾನಕ್ಕೆ ಕನ್ನಡ ಚಲನಚಿತ್ರದ ಹಿರಿಯ ಖ್ಯಾತ ನಟರಾದ ಎಸ್.ಶಿವರಾಮ್ ಸ್ವಾಮಿ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಧಾರ್ಮಿಕ ಭಾವನೆಗಳಲ್ಲಿ ಕೀಳರಿಮೆ ತೋರುವುದು ಅಪಾಯಕಾರಿ ಬೆಳವಣಿಗೆ ಈ ನಿಟ್ಟಿನಲ್ಲಿ ಧಾರ್ಮಿಕ ಕೇಂದ್ರಗಳು ಜಾತಿ-ಮತ ಬಡವ-ಶ್ರೀಮಂತ ಮೇಲು-ಕೀಳು ಬೇಧವಿಲ್ಲದೇ ಸಮಾಜದಲ್ಲಿ ಜಾತ್ಯಾತೀತ ಮನೋಭಾವನೆ ಮೂಡಿಸುವ ಕಾರ್ಯದಲ್ಲಿ ತೊಡಗಬೇಕು. ಹುಳಿಯಾರಿನ ಕಂಕಾಳಿ ದೇವಸ್ಥಾನದ ಜಾತಿ ತಾರತಮ್ಯವಿಲ್ಲದೆ ಸಾರ್ವಜನಿಕ ಮನ್ನಣೆ ಮತ್ತು ನಂಬಿಕೆ ಪಡೆದಿದೆ. ಹಾಗಾಗಿ ಈ ದೇವಸ್ಥಾನಕ್ಕೆ ನಾನು ಆಗಾಗ ಭೇಟಿ ನೀಡುತ್ತಿರುತ್ತೇನೆ ಎಂದರು.
ಮನುಷ್ಯನ ಮಾನಸಿಕ ನೆಮ್ಮದಿಗೆ ಆಧ್ಯಾತ್ಮ ಮತ್ತು ಧ್ಯಾನ ಎರಡೂ ಅತ್ಯಗತ್ಯ. ಈ ನಿಟ್ಟಿನಲ್ಲಿ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ಕೋಡಿಪಾಳ್ಯದಲ್ಲಿ ಪಿರಮಿಡ್ ಆಕಾರದ ಧ್ಯಾನ ಮಂದಿರ ನಿರ್ಮಿಸುವ ಜೊತೆಗೆ ಕಂಕಾಳಿ, ತುಳಕಾ ಭವಾನಿ, ಮರಿಯಮ್ಮ ದೇವಿ, ಬಲಮುರಿ ಗಣಪತಿ, ಅನಂತ ಪದ್ಮನಾಭ ದೇವಸ್ಥಾನ ಕಟ್ಟಿದ್ದಾರೆ. ಜೊತೆಗೆ ಸಾಂಸ್ಕೃತಿಕ ಸದನ ನಿರ್ಮಿಸಿ ಕಲಾಪ್ರದರ್ಶನ ಏರ್ಪಡಿಸುತ್ತಾರೆ. ಒಂದೇ ಸ್ಥಳದಲ್ಲಿ ಇಷ್ಟೊಂದು ಸೌಲಭ್ಯ ಸಿಗುವುದು ವಿರಳವಾಗಿದ್ದು ಇಲ್ಲಿನ ಜನರು ಭಾಗ್ಯಶಾಲಿಗಳು ಎಂದರು.
ಬೆಂಗಳೂರು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಖ್ಯಸ್ಥರಾದ ಟಿ.ಬಿ. ಶೇಖರ್ ಸ್ವಾಮಿ, ವಿ.ಕರಿಯಪ್ಪಸ್ವಾಮಿ, ಜಯರಾಮ್ ಸ್ವಾಮಿ, ಬಾಲು ಗುರುಸ್ವಾಮಿ, ಪ್ರಕಾಶ್ ಸ್ವಾಮಿ, ಶ್ರೀಧರನ್ ಸ್ವಾಮಿ, ಭೀಮರಾಜ್ ಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ