ಹುಳಿಯಾರು :
ಕಾಮಗಾರಿ ಮುಕ್ತಾಯವಾಗಿ ಮೂರ್ನಾಲ್ಕು ತಿಂಗಳಿಗೆ ಕಿತ್ತೋಗಿದ್ದ ಹುಳಿಯಾರು-ಅಣೇಕಟ್ಟೆ ರಸ್ತೆಯನ್ನು ಪತ್ರಿಕೆಯ ವರದಿ ಪರಿಣಾಮ ದುರಸ್ತಿ ಭಾಗ್ಯ ಕಂಡಿದೆ.
19 ಕೋಟಿ ರೂ. ವೆಚ್ಚದಲ್ಲಿ ಹುಳಿಯಾರು-ಅಣೇಕಟ್ಟೆ ರಸ್ತೆ ಅಭಿವೃದ್ಧಿ ಕಾಮಗಾರಿಯು ಇತ್ತೀಚೆಗೆ ಮುಕ್ತಾಯವಾಗಿತ್ತು. ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲೇ ಸ್ಥಳೀಯರು ಕಾಮಗಾರಿಯು ತೀರ ಕಳಪೆಯಿಂದ ಕೂಡಿದ್ದು ಅತ್ತ ಡಾಂಬಾರ್ ಹಾಕಿಕೊಂಡು ಹೋಗುತ್ತಿದ್ದರೆ ಇತ್ತ ಕಿತ್ತೋಗುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರನಿಗೆ ತರಾಟೆಗೆ ತೆಗೆದುಕೊಂಡಿದ್ದರು.
ಆದರೆ ಎಂಜಿನಿಯರ್ ಸೋಮಶೇಖರ್ ಅವರು ರಸ್ತೆಯ ಡಾಂಬಾರ್ ಪರ್ಸೆಂಟೇಜ್ ಪರಿಶೀಲಿಸಿದರೆ ಎಸ್ಟಿಮೆಂಟ್ ಪ್ರಕಾರನೇ ಇದೆ. ಅಲ್ಲದೆ ಡಾಂಬರು ಸೆಟ್ ಆಗುವ ಮೊದಲೇ ವಾಹನಗಳು ಓಡಾಡಿದ ಪರಿಣಾಮ ಕಿತ್ತೋಗಿದೆ ಅಷ್ಟೆ. ಅಲ್ಲದೆ ಕಿತ್ತೋದರೂ ಹೋಗಲಿ ಬಿಡು ಅದಕ್ಯಾಕೆ ತಲೆ ಕೆಡಿಸಿಕೊಳ್ತಿರಿ ಮತ್ತೆ ಮಾಡಿಕೊಡ್ತಿವಿ ಎಂದಿದ್ದರು.
ಸಾರ್ವಜನಿಕರು ಆರೋಪಿಸಿದಂತೆ ರಸ್ತೆ ಕಾಮಗಾರಿ ಮುಗಿದು ಮೂರ್ನಾಲ್ಕು ತಿಂಗಳಲ್ಲೇ ರಸ್ತೆಗೆ ಹಾಕಿದ್ದ ಡಾಂಬರು ಕಿತ್ತೋಗಿ ಜಲ್ಲಿಕಲ್ಲುಗಳು ಮೇಲೆದ್ದು ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿತ್ತು. ಈ ಬಗ್ಗೆ ಪತ್ರಿಕೆಯಲ್ಲಿ ವರದಿ ಮಾಡಿ ಮಳೆ ಹಾಗೂ ಕಿತ್ತೋಗಿರುವ ರಸ್ತೆಯ ಮೇಲೆ ವಾಹನಗಳು ಓಡಾಡಿ ಇಡೀ ರಸ್ತೆ ಕಿತ್ತು ಹಾಳಾಗುವ ಮೊದಲು ಮರುಡಾಂಬರೀಕರಣಕ್ಕೆ ಒತ್ತಾಯಿಸಲಾಗಿತ್ತು.
ಪತ್ರಿಕೆಯ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಗುತ್ತಿಗೆದಾರರಿಂದ ಕಿತ್ತೋಗಿರುವ ಅಷ್ಟೂ ಕಡೆ ಮರುಡಾಂಬರೀಕರಣ ಮಾಡಿಸಿದ್ದಾರೆ. ಈಗ ಜಲ್ಲಿಕಲ್ಲುಗಳ ಕಿರಿಕಿರಿಯಿಲ್ಲದೆ ವಾಹನಗಳು ನೆಮ್ಮದಿಯಿಂದ ಸಂಚರಿಸಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
