ಹುಳಿಯಾರು ಪ.ಪಂ. ಚುನಾವಣೆ ; 16 ಸ್ಥಾನಗಳಿಗೆ 73 ನಾಮಪತ್ರ ಸಲ್ಲಿಕೆ

 ಹುಳಿಯಾರು : 

      ಹುಳಿಯಾರು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ ಬಳಿಕ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಚುನಾವಣೆ ಭಾರಿ ಕುತೂಹಲ ಸೃಷ್ಠಿಸಿರುವ ಜೊತೆಗೆ ಜಿದ್ದಾಜಿದ್ದಿನ ಪೈಪೋಟಿ ನಿರ್ಮಾಣವಾಗಿದೆ. ಒಟ್ಟು 16 ಸ್ಥಾನಗಳಿಗೆ 73 ನಾಮಪತ್ರಗಳು ಸಲ್ಲಿಕೆಯಾಗುವ ಮೂಲಕ ಚುನಾವಣಾ ಕಣ ರಂಗೇರಿದೆ.

      ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಬಣ ರಾಜಕೀಯ ತಾರಕ್ಕೇರಿ ಬಿ ಫಾರಂ ಹಂಚಿಕೆ ಪ್ರತಿಷ್ಟೆಯಾಗಿ ಮಾರ್ಪಟ್ಟಿತ್ತು. ಹಾಗಾಗಿ ನಾಮಪತ್ರ ಸಲ್ಲಿಕೆಗೆ ಕೊನೆ ದಿನದವರೆವಿಗೂ ಕೇವಲ ಒಂದು ನಾಮಪತ್ರ ಸಲ್ಲಿಕೆಯಾಗಿ ಕೊನೆದಿನ ಬರೋಬ್ಬರಿ 73 ನಾಮಪತ್ರಗಳು ಸಲ್ಲಿಕೆಯಾದವು. ಬಣ ರಾಜಕೀಯದಲ್ಲೂ ಬಿಜೆಪಿಯಿಂದ ಜೆ.ಸಿ.ಮಾಧುಸ್ವಾಮಿ, ಕಾಂಗ್ರೆಸ್‍ನಿಂದ ಟಿ.ಬಿ.ಜಯಚಂದ್ರ 16 ವಾರ್ಡ್‍ಗಳಿಗೂ ಬಿ ಫಾರಂ ತರುವಲ್ಲಿ ಯಶಸ್ವಿಯಾದರು.

ಕುತೂಹಲದ ಸಂಗತಿಯೆಂದರೆ ಕೆ.ಎಸ್.ಕಿರಣ್‍ಕುಮಾರ್ ಬಣದಿಂದ ಬಿಜೆಪಿ ಟಿಕೆಟ್ ಬಯಸಿದ್ದ ಏಳೆಂಟು ಮಂದಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸಾಸಲು ಸತೀಶ್ ಬಣದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದವರ ಪೈಕಿ ನಾಲ್ವರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಇವರು ಕಣದಲ್ಲಿ ಉಳಿದರೆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಅಡ್ಡಿಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಈ ನಿಟ್ಟಿನಲ್ಲಿ ಇವರುಗಳ ನಾಮಪತ್ರ ಹಿಂಪಡೆಸುವ ತೆರೆಮರೆಯ ಕಸರತ್ತೂ ನಡೆಯುತ್ತಿದೆ.

      ಟಿಕೆಟ್ ಹಂಚಿಕೆಯಲ್ಲಿಯೂ ಸಹ ಅಚ್ಚರಿಯ ಬೆಳವಣಿಗೆಗಳೂ ದಾಖಲಾಗಿದೆ. ಪಕ್ಷದಲ್ಲಿ ಬಿ ಪಾರಂ ಪಡೆಯುವುದೇ ಕಷ್ಟಕರವಾದ ಈ ದಿನಗಳಲ್ಲಿ ಬಿಜೆಪಿಯಿಂದ ಎಚ್.ಎನ್.ಕಿರಣ್ ಕುಮಾರ್ ಅವರು ತಮಗೂ ತಮ್ಮ ಪತ್ನಿಗೂ, ಬಡ್ಡಿಪುಟ್ಟರಾಜು ಅವರು ತಮಗೂ ತಮ್ಮ ಅತ್ತಿಗೆಗೂ, ಜೆಡಿಎಸ್‍ನಿಂದ ಎಚ್.ಎನ್.ಕುಮಾರ್ ಅವರು ತಮಗೂ ತಮ್ಮ ನಾದನಿಗೂ ಬಿ ಪಾರಂ ಪಡೆಯುವ ಮೂಲಕ ಒಂದೇ ಕುಟುಂಬಕ್ಕೆ ಎರಡೆರಡು ಬಿ ಫಾರಂ ಪಡೆದಿದ್ದಾರೆ. ಅಲ್ಲದೆ ಬಿಜೆಪಿಯಿಂದ 10 ನೇ ವಾರ್ಡ್‍ಗೆ ಅಭ್ಯರ್ಥಿಯನ್ನೇ ಹಾಕಲಾಗದೆ ಟೀಕೆಗೆ ಗುರಿಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link