ಹುಳಿಯಾರು :
ಭಾರತದಲ್ಲಿ ಸುಮಾರು ಪ್ರತಿಶತ 60-70 ಭಾಗ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಕೃಷಿಯನ್ನೇ ತಮ್ಮ ಬೆನ್ನೆಲುಬು ಎಂದು ತಿಳಿದು ಬದುಕುತ್ತಿದ್ದಾರೆ. ಆದರೆ ಇತ್ತೀಚಿನ ಹವಾಮಾನದ ವೈಪರೀತ್ಯಗಳಿಗೆ ಸಿಲುಕಿ ಆ ಬೆನ್ನೆಲುಬೇ ಮುರಿಯುವಂತಾಗಿದೆ.
ಸರ್ಕಾರ ರೈತರ ಹಿತಕಾಯಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಈ ಹವಾಮಾನದ ವೈಪರೀತ್ಯದಿಂದಾಗಿ ಯೋಜನೆಗಳೆಲ್ಲವೂ ಅಷ್ಟೋಂದು ಯಶಸ್ಸು ಕಾಣುತ್ತಿಲ್ಲ. ಹೀಗಾಗಿ ಪ್ರಸ್ತುತ ದಿನಗಳಲ್ಲಿ ಹವಾಮಾನದ ಬಗ್ಗೆ ತಿಳಿದುಕೊಳ್ಳುವುದು ಅತಿ ಮುಖ್ಯವಾದ ವಿಷಯವಾಗಿದೆ. ಇದಕ್ಕಾಗಿ ಭಾರತೀಯ ಹವಾಮಾನ ಇಲಾಖೆ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಜಂಟಿಯಾಗಿ ಆ್ಯಪನ್ನು ಪರಿಚಯಿಸಲಾಗಿದ್ದು ಈ ತಂತ್ರಾಂಶಕ್ಕೆ “ಮೇಘಧೂತ್” ಎಂದು ಹೆಸರಿಡಲಾಗಿದೆ.
ಇದನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪ್ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಆ್ಯಪ್ ರೈತರ ಜೊತೆಗೆ ಜನಸಾಮಾನ್ಯರಿಗೂ ಹವಾಮಾನದ ವರದಿಯನ್ನು ಒದಗಿಸುವಲ್ಲಿ ಸಫಲವಾಗಿದೆ. ಮೊದಲಿಗೆ ದೇಶದ 150 ಜಿಲ್ಲೆಗಳಲ್ಲಿ ಈ ಸೇವೆ ಲಭ್ಯವಿದ್ದು ಮುಂದಿನ ಒಂದು ವರ್ಷದಲ್ಲಿ ಇದನ್ನು ಹಂತ ಹಂತವಾಗಿ ದೇಶದ ಉಳಿದ ಭಾಗಗಳಿಗೆ ವಿಸ್ತರಿಸಲಾಗುವುದು.
ಈ ತಂತ್ರಾಂಶದಲ್ಲಿ ಬಳಕೆದಾರರು ತಮ್ಮ ಹೆಸರು ಮತ್ತು ಸ್ಥಳವನ್ನು ನೊಂದಾಯಿಸಿ ಕೊಳ್ಳಬೇಕಾಗಿರುವುದರಿಂದ ಅವರ ಪ್ರದೇಶದ ನಿರ್ದಿಷ್ಟ ಮಾಹಿತಿ ಪಡೆಯಬಹುದು. ಇದು ಸ್ಥಳೀಯ ಭಾಷೆಗಳಲ್ಲಿ ರೈತರಿಗೆ ಸ್ಥಳ, ಬೆಳೆ ಮತ್ತು ಜಾನುವಾರು ನಿರ್ದಿಷ್ಟ ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ನೀಡುತ್ತದೆ. ನೈಜ ಸಮಯದಲ್ಲಿ ಎಚ್ಚರಿಕೆಗಳು, ಬುಲೆಟಿನ್‍ಗಳು ಮತ್ತು ಇತರೆ ಡೇಟಾ ನವೀಕರಿಸಲು ಈ ಸೈಟ್ ಭಾರತದ ಎಲ್ಲಾ ಹವಾಮಾನ ಕಛೇರಿಗಳಿಗೆ ಕೇಂದ್ರೀಕೃತ ಪೋರ್ಟಲ್ ಆಗಿ ಕಾರ್ಯ ನಿರ್ವಹಿಸುತ್ತದೆ.
ಈ ಆ್ಯಪ್ ನಿಂದ ಗರಿಷ್ಟ ಹಾಗೂ ಕನಿಷ್ಟ ತಾಪಮಾನ, ಬೆಳಗಿನ ಹಾಗೂ ಮದ್ಯಾಹ್ನದ ಆದ್ರತೆಯ ಪ್ರಮಾಣ, ಮೋಡ ಹಾಗೂ ಮಳೆಯ ಪ್ರಮಾಣ, ಗಾಳಿಯ ದಿಕ್ಕು ಹಾಗೂ ವೇಗದ ಕುರಿತು ಸಂಭಂದಿಸಿದ ಮುನ್ಸೂಚನೆ ಒದಗಿಸುತ್ತದೆ. ಇದು ಕೃಷಿ ಕಾರ್ಯಚರಣೆಗಳಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ರೈತರು ತಮ್ಮ ಬೆಳೆಗಳು ಮತ್ತು ಜಾನುವಾರುಗಳನ್ನು ಹೇಗೆ ನೋಡಿಕೊಳ್ಳಬೇಕು. ಎಂಬುದರ ಕುರಿತು ಸಲಹೆ ನೀಡುತ್ತದೆ. ಋತುವಿಗನುಸಾರವಾಗಿ ಕುರಿ, ಕೋಳಿ ಮತ್ತು ಇತರ ಜಾನುವಾರುಗಳಿಗೆ ತಗಲುವ ಕಾಯಿಲೆ ಅವುಗಳ ಹತೋಟಿ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.
ಮಂಗಳವಾರ ಮತ್ತು ಶುಕ್ರವಾರದಂದು ಮಾಹಿತಿಯನ್ನು ವಾರಕ್ಕೆ ಎರಡು ಬಾರಿ ನವೀಕರಿಸಲಾಗುತ್ತದೆ. ಹಾಗೂ ಮುಂದಿನ ಐದು ದಿನಗಳಲ್ಲಿ ಬರಬಹುದಾದ ವಾತಾವರಣದ ಮುನ್ಸೂಚನೆ ಮತ್ತು ಕೃಷಿ ಹವಾಮಾನಕ್ಷೇತ್ರ ಘಟಕಗಳು ನೀಡುವ ಜಿಲ್ಲೆಯ ಬೆಳೆವಾರು ಸಲಹೆಗಳ ಬಗ್ಗೆ ಮಾಹಿತಿ ಪಡೆಯಬಹುದು. ರೈತರು ಈ ತಂತ್ರಾಂಶದಿಂದ ಪಡೆದ ಮಾಹಿತಿ ಅನುಸರಿಸಿ ಹಾಗೂ ತಮ್ಮಲ್ಲಿನ ಸಲಹೆಗಳನ್ನು ವಾಟ್ಸಾಪ್ ಮತ್ತು ಫೇಸ್ಬುಕ್ ಗಳನ್ನು ಬಳಸಿ ಇತರರೊಂದಿಗೆ ಹಂಚಿಕೊಳ್ಳಬಹುದಾಗಿದೆ.
ಮೇಘಧೂತ ಆಪ್ ಹವಾಮಾನದ ಮುನ್ಸೂಚನೆಯನ್ನು ತಿಳಿಯಲು ರೈತರ ಜೊತೆಗೆ ಜನಸಾಮಾನ್ಯರಿಗೂ ಅನುಕೂಲವಾಗಿದ್ದು ರೈತರ ಕೃಷಿ ಚಟುವಟಿಕೆಗಳಿಗೆ ಬಿತ್ತನೆಯಿಂದ ಬೆಳೆಯ ಕಟಾವು ಮಡುವವರೆಗೂ ಬರುವಂತಹ ಎಲ್ಲಾ ಸಮಸ್ಯೆಗಳಿಗೆ ಈ ಮೇಘಧೂತ ಆಪ್ ಸಹಕಾರಿಯಾಗಿದೆ. ಆದ್ದರಿಂದ ಪ್ರತಿರೈತರು ಮತ್ತು ಜನ ಸಾಮಾನ್ಯರೂ ಈ ಆ್ಯಪ್‍ನ್ನು ತಮ್ಮ ಮೊಬೈಲ್ ನಲಿ ್ಲಇನ್‍ಸ್ಟಾಲ್ ಮಾಡಿಕೊಂಡು ಸದುಪಯೋಗ ಮಾಡಿಕೊಳ್ಳಬೇಕೆಂದು. ಡಾ.ಓ.ಆರ್.ನಟರಾಜು, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೆ.ವಿ.ಕೆ ಬಿದರೆಗುಡಿ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ ಇವರು ತಿಳಿಸಿದ್ದಾರೆ.
ಈ ಆ್ಯಪಿನ ಮೂಲಕ ಹಿಂದಿನ ದಿನಗಳ ಆಯ ಜಿಲ್ಲೆಗಳ ಹವಾಮಾನ ಮಾಹಿತಿ ಮತ್ತು ಮುಂದಿನ 5 ದಿನಗಳ ಹವಾಮಾನ ಮುನ್ಸೂಚನೆಯನ್ನು ತಿಳಿಯಬಹುದು. ಇದಲ್ಲದೆ ಪ್ರಚಲಿತ ಹವಾಮಾನವನ್ನಾದರಿಸಿ ರೈತರು ತುರ್ತಾಗಿ ಕೈಗೊಳ್ಳಬೇಕಾದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಮತ್ತು ಹೈನುಗಾರಿಕೆ ಕುಕ್ಕುಟಪಾಲನೆ ಬಗ್ಗೆ ಸಂದೇಶವನ್ನು ಈ ಆ್ಯಪಿನಲ್ಲಿ ಕಾಣಬಹುದು ಎನ್ನುತ್ತಾರೆ ತಿಪಟೂರು ತಾಲ್ಲೂಕು, ಬಿದರೆಗುಡಿ, ಕೆ.ವಿ.ಕೆಯ ಕೃಷಿ ಹವಾಮಾನ ಶಾಸ್ತ ವಿಷಯ ತಜ್ಞರಾದ ಡಾ.ಎಂ.ಪದ್ಮನಾಭನ್.
ಬದಲಾಗುತ್ತಿರುವ ಹವಾಮಾನ ಮತ್ತು ವೈಪರೀತ್ಯದಿಂದ ರೈತರು ಸಾಕಷ್ಟು ತೊಂದರೆ ಮತ್ತು ನಷ್ಟವನ್ನು ಅನುಭವಿಸುತ್ತಿದ್ದು ಮೇಲಿಂದ ಮೇಲೆ ಅನಾವೃಷ್ಟಿ ಇಲ್ಲವೆ ಅತಿವೃಷ್ಟಿ ಸಂಭಮವಿಸುತ್ತಿರುವುದರಿಂದ ಇವತ್ತಿನ ರೈತರು ಹವಾಮಾನ ಮುನ್ಸೂಚನೆಯನ್ನು ಆಧರಿಸಿ ಕೃಷಿ ಚಟುವಟಿಕೆಗಳನ್ನು ಮಾಡುವುದು ಅತ್ಯವಶ್ಯಕವಾಗಿದೆ. ರೈತರು ಈ ಮೊಬೈಲ್ ಸೇವೆಯನ್ನು ಸದುಪಯೋಗಪಡಿಸಿಕೊಂಡು ಹವಾಮಾನದಿಂದ ಆಗುವ ಬೆಳೆ ನಷ್ಟವನ್ನು ಕಡಿಮೆ ಮಾಡಿಕೊಂಡು ಆದಾಯವನ್ನು ಹೆಚ್ಚಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗೆ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಹಾಗೂ ನೋಡಲ್ ಅಧಿಕಾರಿಗಳು, ಜಿಲ್ಲಾ ಕೃಷಿ ಹವಾಮಾನಘಟಕ, ಕೃಷಿ ವಿಜ್ಞಾನಕೇಂದ್ರ, ಬಿದರೆಗುಡಿ, ತಿಪಟೂರುತಾ, ತುಕೂರು ಜಿಲ್ಲೆ. ದೂ: 08134-298955, 9945258009, 9739055194 ಸಂಪರ್ಕಿಸಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ