ಹುಳಿಯಾರು :
ಮಗ, ಚಿಕ್ಕಮ್ಮ ಸ್ಪರ್ಧೆ, ಗಂಡ, ಹೆಂಡತಿ ಸ್ಪರ್ಧೆ, ಹುರಿಯಾಳು ಮೇಲೆ ಹಲ್ಲೆ, ಎಲ್ಲಾ ಪಕ್ಷಗಳೂ ಹಳಬರಿಗೆ ಮಣೆ, ಮಾಜಿ ಶಾಸಕರಿಂದ ಬಂಡಾಯದ ಭಾವುಟ ಸೇರಿದಂತೆ ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆ ಹಲವು ವಿಶೇಷತೆಗಳಿಗೆ ಸಾಕ್ಷ್ಯಿಯಾಗುತ್ತಿದೆ. ಈ ಪಟ್ಟಿಗೆ ಅಭ್ಯರ್ಥಿಯೊರ್ವರು ಪ್ರಣಾಳಿಕೆ ಹಂಚಿ ಪ್ರಚಾರ ಮಾಡುತ್ತಿರುವುದು ಸೇರಿಕೊಂಡಿದೆ.
ಹುಳಿಯಾರು ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿಯವರು ಮಾಧುಸ್ವಾಮಿ ಅವರ ಅಭಿವೃದ್ಧಿ ಕಾರ್ಯ ನೋಡಿ ಓಟು ಕೊಡಿ ಎನ್ನುತ್ತಿದ್ದಾರೆ. ಕಾಂಗ್ರೆಸ್‍ನವರು ಬಿಜೆಪಿ ವಿಫಲತೆ ಅರಿತು ಮತ ಕೊಡಿ ಎನ್ನುತ್ತಿದ್ದಾರೆ. ಜೆಡಿಎಸ್‍ನವರು ಸುರೇಶ್‍ಬಾಬು ಸರಳತೆಗಾಗಿ ಓಟಾಕಿ ಎನ್ನುತ್ತಿದ್ದಾರೆ. ಆದರೆ ಹುಳಿಯಾರು 16 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಎಚ್.ಟಿ.ವನಿತಾ ಅವರು ಗೆದ್ದರೆ ನಾನೇನು ಮಾಡುತ್ತೇನೆಂಬ ಪ್ರಣಾಳಿಕೆ ಹಂಚಿ ಮತ ಕೇಳುತ್ತಿದ್ದಾರೆ.
ಎಂಎ ಬಿಇಡಿ ಓದಿರುವ ಈಕೆ ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ತರಬೇತಿ ಸಂಯೋಜಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಗ್ರಾಪಂ, ತಾಪಂ, ಜಿಪಂ ಸದಸ್ಯರಿಗೆ, ಪಿಡಿಓ, ಕಾರ್ಯದರ್ಶಿಗಳಿಗೆ ಆರ್‍ಡಿಪಿಆರ್ ಬಗ್ಗೆ ತರಬೇತಿ ನೀಡುತ್ತಿರುವ ಇವರಿಗೆ ವಿವಿಧ ಇಲಾಖೆಗಳ ಸರ್ಕಾರಿ ಸೌಲಭ್ಯಗಳ ಸಂಪೂರ್ಣ ಪರಿಚಯವುಳ್ಳವರಾಗಿದ್ದಾರೆ. ಇಷ್ಟು ಸೌಲಭ್ಯಗಳಿದ್ದರೂ ಅರ್ಹ ಫಲಾನುಭವಿಗಳಿಗೆ ಇನ್ನೂ ತಲುಪದ ಬಗ್ಗೆ ಬೇಸರ ಇದೆ. ಇಷ್ಟೆಲ್ಲ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಿ ಮಾದರಿಯಾಗುವ ಮಹತ್ವಾಕಾಂಕ್ಷೆಯೊಂದಿಗೆ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಪ್ರಚಾರದ ವೇಳೆ ಹೇಳಿಕೊಳ್ಳುತ್ತಿದ್ದಾರೆ.
ಪ್ರಣಾಳಿಕೆಯಲ್ಲಿ ಹೇಳಿರುವುದು :
ಅಷ್ಟೇ ಅಲ್ಲ ಚುನಾವಣಾ ಪ್ರಚಾರದ ವೇಳೆ ಒಂದಿಷ್ಟು ಮಹಿಳೆಯರನ್ನು ಒಟ್ಟಿಗೆ ಸೇರಿಸಿ ಗೆದ್ದರೆ ನಾನೇನು ಮಾಡುತ್ತೇನೆನ್ನುವ ಪ್ರಣಾಳಿಕೆ ಸಹ ಕೊಟ್ಟು ವಿಭಿನ್ನ ರೀತಿ ಪ್ರಚಾರ ಮಾಡುತ್ತಿದ್ದಾರೆ.
ನಿವೇಶನ ರಹಿತರಿಗೆ ಸೂರು ಕಲ್ಪಿಸುವುದು ತಮ್ಮ ಮೊದಲ ಆಧ್ಯತೆ ಎಂದಿರುವ ಅವರು ಶುದ್ಧ ಕುಡಿಯುವ ನೀರು, ಗ್ರಾಮ ನೈರ್ಮಲ್ಯ, ಮಹಿಳೆಯರಿಗೆ, ಯುವ ಜನತೆಗೆ ಸ್ವಉದ್ಯೋಗ ತರಬೇತಿ ಇವು ಇವರ ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳಾಗಿವೆ. ಈಕೆಯ ವಿಭಿನ್ನ ಪ್ರಚಾರಕ್ಕೆ ಮತದಾರರು ಬೆರಗಾಗಿ ಮತ ನೀಡುವರೇ ಎಂಬುದನ್ನು ಕಾದು ನೋಡಬೇಕಿದೆ.
