ಹುಳಿಯಾರು :
ಗ್ರಾಮ ಪಂಚಾಯಿತಿ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿದ್ದು. ಈ ಹಿನ್ನೆಲೆಯಲ್ಲಿ ಸ್ಪರ್ಧಾ ಆಕಾಂಕ್ಷಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಲು ಉತ್ಸಕರಾಗಿದ್ದಾರೆ. ಪರಿಣಾಮ ವಿವಿಧ ಪ್ರಮಾಣ ಪತ್ರಗಳನ್ನು ಸಿದ್ಧಗೊಳಿಸಲು ಝರಾಕ್ಸ್ ಅಂಗಡಿ, ಛಾಪಾ ಕಾಗದ ತಗೆದುಕೊಡುವ ಮತ್ತು ಕಂಪ್ಯೂಟರ್ ಅಂಗಡಿಗಳಲ್ಲಿ ಜನರು ಮುಗಿಬಿದ್ದಿದ್ದಾರೆ.
ಹುಳಿಯಾರು ಪಟ್ಟಣವು ತಾಲೂಕು ಸರಿಸಮಾನಕ್ಕೆ ಬೆಳದಿದ್ದು ಜಿಲ್ಲೆಯಲ್ಲೇ ಅತೀ ದೊಡ್ಡ ಹೋಬಳಿ ಕೇಂದ್ರವಾಗಿದೆ. ಹಾಗಾಗಿ ಹತ್ತಾರು ಗ್ರಾಮ ಪಂಚಾಯ್ತಿಗಳ ನೂರಾರು ಹಳ್ಳಿಗಳ ಜನರು ನಾಮಪತ್ರ ಸಲ್ಲಿಸಲು ಅಗತ್ಯ ದಾಖಲಾತಿ ಪಡೆಯಲು ನಿತ್ಯವೂ ಪಟ್ಟಣಕ್ಕೆ ಸಾಗರದಂತೆ ಹರಿದು ಬರುತ್ತಿದ್ದಾರೆ.
ಪರಿಣಾಮ ನೋಟರಿ ವಕೀಲರೊಂದಿಗೆ ಪ್ರಮಾಣಪತ್ರಗಳನ್ನು ಸಿದ್ಧಪಡಿಸುವ ಅವಶ್ಯಕತೆಯಿರುವುದರಿಂದ ವಕೀಲರಿಗೂ ಹಾಗೂ ಇ-ಸ್ಟಾಂಪ್ ಅಂಗಡಿಯವರಿಗೆ ವಿಶ್ರಾಂತಿ ರಹಿತ ದುಡಿಮೆ ದೊರೆಯುತ್ತಿದೆ. ಪಟ್ಟಣದಲ್ಲಿ ಸ್ಟೇಷನ್ ಸರ್ಕಲ್ ಬಳಿ ಹಾಗೂ ಕೆನರಾ ಬ್ಯಾಂಕ್ ಹತ್ತಿರ ನೋಟರಿ ವಕೀಲರಿದ್ದು ಎರಡೂ ಕಡೆ ಜನಜಾತ್ರೆ ಸೇರಿದೆ. ಝೆರಾಕ್ಸ್ ಹಾಗೂ ಕಂಪ್ಯೂಟರ್ ಟೈಪಿಂಗ್ ಕೆಲಸ ಮಾಡುವವರಿಗೂ ಶುಕ್ರದೆಸೆ ತಿರುಗಿದೆ.
ತಹಸೀಲ್ದಾರ್, ಕಂದಾಯ ತನಿಖಾಧಿಕಾರಿ, ಗ್ರಾಮಲೆಕ್ಕಿಗರ ಕಛೇರಿ ಜನರಿಂದ ತುಂಬಿ ಹೋಗಿದೆ. ನಾಡಕಚೇರಿ ಬಳಿ ಮತದಾರರ ಪಟ್ಟಿಯ ಮಾಹಿತಿ ಹಾಗೂ ಇತರ ಪೂರಕ ದಾಖಲಾತಿಗಳನ್ನು ಪಡೆಯುವವರ ಸರತಿ ಸಾಲು ಕಾಣಸಿಗುತ್ತದೆ. ಅಚ್ಚರಿ ಎನ್ನುವಂತೆ ಎಲ್ಲೂ ಕೋವಿಡ್-19 ನಿಯಮ ಪಾಲನೆಯಾದಂತೆ ಕಾಣುತ್ತಿಲ್ಲ. ಕೊರೊನಾ ಮರೆತು ಜನ ಗ್ರಾಪಂ ಚುನಾವಣೆಗೆ ಸಜ್ಜಾಗುತ್ತಿದ್ದಾರೆ.
ಚುನಾವಣೆಗೆ ಸ್ಪರ್ಧಿಸಲುಬೇಕಾಗುವ ದಾಖಲೆಗಳು
* ಪತ್ರ-5ರ ನಾಮಪತ್ರ ( ಒಬ್ಬ ವ್ಯಕ್ತಿ ನಾಲ್ಕು ನಾಮಪತ್ರಗಳನ್ನು ಸಲ್ಲಿಸಬಹುದು)
* ಜಾತಿ ಪ್ರಮಾಣ ಪತ್ರ
* ಘೋಷಣಾ ಪತ್ರ (ರೂ.20ರ ಮುಖಬೆಲೆಯ 2 ಪ್ರತಿಗಳಲ್ಲಿ. ಒಂದು ಪ್ರತಿ ಝರಾಕ್ಸ್ ಅಫಿಡವಿಟ್)
* ಠೇವಣಿ ಹಣ – ಸಾಮಾನ್ಯ ಸ್ಥಾನಕ್ಕೆ ರೂ.200, ಮೀಸಲಿರಿಸಿದ ಸ್ಥಾನಗಳಿಗೆ ರೂ.100 ( ಎಸ್‍ಸಿ, ಎಸ್ಟಿ, ಬಿಸಿಎ, ಬಿಸಿಬಿ ಪ್ರವರ್ಗಗಳಿಗೆ ಮತ್ತು ಮಹಿಳೆಯರಿಗೆ)
* ಮತಪತ್ರದಲ್ಲಿ ಮುದ್ರಿಸಬೇಕಾದ ಹೆಸರಿನ ಬಗ್ಗೆ ಲಿಖಿತ ಪತ್ರ
* ಅಭ್ಯರ್ಥಿಗಳು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕಾದ ಹೆಚ್ಚುವರಿ ಮಾಹಿತಿ ( ಬಯೋಡಟಾ )
* ಗ್ರಾಮ ಪಂಚಾಯಿತಿಯಿಂದ ಪಡೆದ ಬೇಬಾಕಿ ಪ್ರಮಾಣ ಪತ್ರ
* ಅಭ್ಯರ್ಥಿಗಳ 3 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು
* ಇತ್ತೀಚಿನ ಮತದಾರರ ಗುರುತಿನ ಚೀಟಿ
* ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ
ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸಲು ಬೇಕಾದ ಅರ್ಹತೆಗಳು :
* ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಮತದಾನದ ಹಕ್ಕು ಹೊಂದಿರಬೇಕು
* ಅಭ್ಯರ್ಥಿಗೆ 21 ವಯಸ್ಸಿಗಿಂತ ಕಡಿಮೆ ಇರಬಾರದು.
* ಸರ್ಕಾರಿ ನೌಕರನಾಗಿರಬಾರದು.
* ಗ್ರಾ. ಪಂ. ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ (ಹೊಸ ನಿಯಮ)