ಹುಳಿಯಾರು :
ಮಳೆ ಬಂದರೆ ಸಾಕು ಮನೆಗಳಿಗೆ ಮಳೆಯ ನೀರಿನ ಜೊತೆ ಚರಂಡಿ ಕೊಳಚೆ ಸಹ ನುಗ್ಗಿ ಮನೆಯಲ್ಲಿ ಈರಲಾರದಂತೆ ದುರ್ನಾತ ಬೀರುತ್ತದೆ ಇದು ಹುಳಿಯಾರಿನ 12 ನೇ ವಾರ್ಡ್‍ನ ಮಾರುತಿ ನಗರದ ನಿವಾಸಿಗಳ ದಶಕಗಳ ಕಾಲದ ಗೋಳಾಗಿದೆ ಇದೂವರೆಗೂ ಈ ಗೋಳು ಕೇಳುವವರಾರು ಇಲ್ಲದೆ ಇಲ್ಲಿನ ಜನರು ಪಂಚಾಯ್ತಿಗೆ ಹಿಡಿಶಾಪ ಹಾಕಿ ದಿನ ದೂಡುತ್ತಿದ್ದಾರೆ ಇನ್ನಾದರೂ ನೂತನ ಪ.ಪಂ ಸದಸ್ಯರಾದರೂ ಇತ್ತ ತಿರುಗಿನೋಡಿ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವರೆ ಎಂದುದು ಇಲ್ಲಿನ ನಿವಾಸಿಗಳ ಪ್ರಶ್ನೆಯಾಗಿದೆ.
ಹೌದು ಹುಳಿಯಾರಿನ ಮಾರುತಿ ನಗರದಲ್ಲಿ ಗ್ರ್ಯಾಂಟ್ ಮನೆಗಳು ಸೇರಿದಂತೆ ಹದಿನೈದಿಪ್ಪತ್ತು ಕೂಲಿ ಕಾರ್ಮಿಕರ ಮನೆಗಳಿವೆ ಈ ಮನೆಗಳು ಹುಳಿಯಾರು ಪಟ್ಟಣದ ತಗ್ಗು ಪ್ರದೇಶದಲ್ಲಿದೆ ಹಾಗಾಗಿ ಊರಿನ ದುರ್ಗಮ್ಮನ ಗುಡಿ ಬೀದಿ ಆಚಾರ್ ಬೀದಿ, ಲಿಂಗಾಯಿತರ ಬೀದಿ, ಮಸೀದಿ ಬೀದಿಯಲ್ಲಿ ಬೀಳುವ ಮಳೆಯ ನೀರು ಇಲ್ಲಿಗೆ ಬಂದು ಸಂಗ್ರಹವಾಗುತ್ತದೆ. ಹೀಗೆ ಸಂಗ್ರಹವಾಗುವ ನೀರು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಮನೆಗಳಿಗೆ ನುಗ್ಗುತ್ತದೆ.
ಈ ಸಮಸ್ಯೆ ದಶಕಗಳಿಂದ ಇದ್ದು ಪ್ರತಿ ಬಾರಿ ಮಳೆ ಬಂದಾಗಲೂ ಇವರ ಕಷ್ಟ ಹೇಳ ತೀರದಾಗಿದೆ ರಾತ್ರಿ ಸಮಯದಲ್ಲಿ ಮಳೆ ಬಂದರಂತೂ ಇಡಿ ರಾತ್ರಿ ಜಾಗರಣೆ ಮಾಡುವ ಅನಿವಾರ್ಯ ಕರ್ಮ ಇವರದಾಗಿದೆ ಬರಿ ಮಳೆಯ ನೀರು ಬಂದರೆ ಸಹಿಸಿಕೊಳ್ಳಬಹುದು ಆದರೆ ಮಳೆ ನೀರಿನ ಜೊತೆ ಚರಂಡಿಯ ತ್ಯಾಜ್ಯ ಸಹ ಹರಿದು ಬಂದು ದುರ್ನಾತ ಬೀರುತ್ತದೆ. ಒಮ್ಮೆ ಮನೆ ಒಳಗೆ ನುಗ್ಗಿದರೆ ಒಂದು ವಾರ ಫೆನಾಯಿಲ್ ಹಾಕಿ ನೆಲ ತೊಳೆದರೂ ವಾಸನೆ ಹೋಗುವುದಿಲ್ಲ ಎನ್ನುವುದು ಇಲ್ಲಿನ ನಿವಾಸಿಗಳ ಅಳಲಾಗಿದೆ.
ಮಂಗಳವಾರ ಬಿದ್ದ ಅಲ್ಪ ಮಳೆಗೆ ಇಲ್ಲಿನ ನಾಲ್ಕೈದು ಮನೆಗಳಿಗೆ ಒಳಚರಂಡಿಯ ನೀರು ನುಗ್ಗಿದೆ ಮಳೆಯ ನೀರಿನ ಜೊತೆ ರಸ್ತೆ ಹಾಗೂ ಚರಂಡಿಯಲ್ಲಿದ್ದ ಮಲ ಮೂತ್ರದ ಗಲಿಜಿ ನೊಂದಿಗೆ ಚಪ್ಪಲಿ, ನೀರಿನ ಬಾಟಲ್, ಪ್ಲಾಸ್ಟಿಕ್ ಕವರ್ ಸೇರಿದಂತೆ ತ್ಯಾಜ್ಯಗಳು ಮನೆಗಳಿಗೆ ನುಗ್ಗಿದೆ. ಪರಿಣಾಮ ದಿನಕೂಲಿ ಕೆಲಸಕ್ಕೆ ಹೋಗದೆ ಮನೆಯೊಳಗಿನ ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದ ದೃಶ್ಯ ಕಲ್ಲು ಹೃದಯವನ್ನೂ ಕರಿಗಿಸುವಂತಿತ್ತು ಒಟ್ಟಾರೆ ಮಳೆ ಬಂದಾಗಲೆಲ್ಲ ಈ ಸಮಸ್ಯೆ ಇಲ್ಲಿ ಸಾಮಾನ್ಯ ಈ ಮಳೆಗಾಲದಲ್ಲಿ ಮಳೆಯಾದರೆ ಇಲ್ಲಿನ ನಿವಾಸಿಗಳ ಸ್ಥಿತಿ ಚಿಂತಾಜನಕವಾಗಲಿದೆ.
ಈ ಹಿಂದೆ ಗ್ರಾಪಂ ಇದ್ದಾಗ ನಂತರ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದಾಗಲೂ ಈ ಬಗ್ಗೆ ಅನೇಕ ದೂರು ಸಹ ನೀಡಲಾಗಿದೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿ ನೀರು ಸರಾಗವಾಗಿ ಹರಿಸಯುವಂತೆ ಮಾಡಲು ಮನವಿ ಮಾಡಲಾಗಿದೆ ಆದರೆ ಇಲ್ಲಿಯವರೆವಿಗೆ ಸ್ಪಂದಿಸಿಲ್ಲ ಪರಿಣಾಮ ಮಳೆ ಬಂದರೆ ಸಾಕು ಇಲ್ಲಿನ ನಿವಾಸಿಗಳು ಭಯಬೀತರಾಗುತ್ತಾರೆ ಜೋರಾಗಿ ಮಳೆ ಬಂದರೆ ಮನೆ ಕುಸಿಯುವ ಆತಂಕದಲ್ಲಿ ದಿನ ಕಳೆಯುತ್ತಾರೆ ಇನ್ನಾದರೂ 12 ನೇ ವಾರ್ಡ್‍ನ ನೂತನ ಸದಸ್ಯರು ಇತ್ತ ಗಮನ ಹರಿಸಿ ಮಾರುತಿ ನಗರದ ಸಮಸ್ಯೆ ಬಗೆ ಹರಿಸುವರೆ ಕಾದು ನೋಡಬೇಕಿದೆ.
ಪಟ್ಟು ಹಿಡಿದು ಕೆಲಸ ಮಾಡಿಸುವೆ
ಹುಳಿಯಾರು ಮಾರುತಿ ನಗರದಲ್ಲಿ ಮಳೆಯ ನೀರು ಮನೆಗೆ ನುಗ್ಗಲು ಚರಂಡಿ ಮೇಲೆ ಶೌಚಾಲಯ, ಕಾಂಪೌಂಡ್ ಕಟ್ಟಿರುವುದು ಮತ್ತು ಕಲ್ಲು ಚಪ್ಪಡಿಗಳನ್ನು ಹಾಕಿರುವುದು ಮುಖ್ಯ ಕಾರಣವಾಗಿದೆ ದಶಕಗಳಿಂದ ಚರಂಡಿ ಕ್ಲೀನ್ ಮಾಡಲಾಗದಷ್ಟು ಚರಂಡಿ ಮುಚ್ಚಿರುವ ಕಾರಣ ನೀರು ಚರಂಡಿಯಲ್ಲಿ ಹರಿಯಲಾಗದೆ ರಸ್ತೆಯಲ್ಲಿ ಹರಿದು ಮನೆಗೆ ನುಗ್ಗುತ್ತಿದೆ ಈ ಬಗ್ಗೆ ಸ್ಥಳೀಯರಿಗೆ ಮನವರಿಕೆಯಾಗಿದ್ದು ಚರಂಡಿ ಒತ್ತುವರಿ ತೆರವಿಗೆ ಸಮ್ಮತಿಸಿದ್ದಾರೆ ಹಾಗಾಗಿ ಪ.ಪಂ ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ಬಳಿ ಪಟ್ಟು ಹಿಡಿದು ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುತ್ತೇನೆ.
– ಮಂಜುನಾಥ್, ಪಪಂ ಸದಸ್ಯರು, ಹುಳಿಯಾರು.
ಎಚ್.ಬಿ.ಕಿರಣ್ ಕುಮಾರ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
