ಹುಳಿಯಾರು ಪ.ಪಂ.ಚುನಾವಣೆ : ಬಿಜೆಪಿ ತೆಕ್ಕೆಯಿಂದ ಹಾರಿದ ಪಕ್ಷೇತರ ಸದಸ್ಯ

ಹುಳಿಯಾರು:

      ಹುಳಿಯಾರು ಪಟ್ಟಣ ಪಂಚಾಯ್ತಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಹೊಸ್ತಿಲಿನಲ್ಲಿ ಅಚ್ಚರಿಯ ನಡೆ ನಡೆದಿದ್ದು ಬಿಜೆಪಿ ತೆಕ್ಕೆಗೆ ಸೇರಿದ್ದ ಪಕ್ಷೇತರ ಸದಸ್ಯ ಜಹೀರ್ ಸಾಬ್ ಅವರು ದಿಡೀರ್ ತಮ್ಮ ನಿಷ್ಟೆ ಬದಲಾಯಿಸಿದ್ದು ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟಕ್ಕೆ ಜೈ ಎಂದಿದ್ದಾರೆ.

       16 ಸಂಖ್ಯಾ ಬಲವುಳ್ಳ ಹುಳಿಯಾರು ಪಟ್ಟಣ ಪಂಚಾಯ್ತಿಯ ಗಾದಿ ಹಿಡಿಯಲು 9 ಮ್ಯಾಜಿಕ್ ನಂಬರ್ ಆಗಿದೆ. ಆದರೆ ಬಿಜೆಪಿ 6 ಸದಸ್ಯರು, ಕಾಂಗ್ರೆಸ್ 5 ಸದಸ್ಯರು ಹಾಗೂ ಜೆಡಿಎಸ್ 3 ಸದಸ್ಯರ ಬಲವಿದ್ದು ಇಬ್ಬರು ಪಕ್ಷೇತರರು ಇದ್ದಾರೆ. ಬಿಜೆಪಿಯ 6 ಸದಸ್ಯರ ಜೊತೆ ಎಂಎಲ್‍ಎ, ಎಂಪಿ ಮತಗಳು ಸೇರಿದರೆ 8 ಸಂಖ್ಯಾಬಲವಾಗುತ್ತದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡರೂ 8 ಸಂಖ್ಯಾ ಬಲವಾಗುತ್ತದೆ. ಹಾಗಾಗಿ ಪಂಚಾಯ್ತಿ ಗಾದಿ ಹಿಡಿಯಲು ಈ ಇಬ್ಬರೂ ಪಕ್ಷೇತರರು ಒಂದು ಬಣಕ್ಕೆ ಬೆಂಬಲ ಸೂಚಿಸುವುದು ಅನಿವಾರ್ಯವಾಗಿತ್ತು.

      ಪಂಚಾಯ್ತಿ ಗಾದಿ ಹಿಡಿಯುವ ದಾಳ ಉರುಳಿಸುವ ಮುನ್ನವೇ ಪಕ್ಷೇತರ ಸದಸ್ಯೆ ಶೃತಿಸನತ್ ಅವರು ಸಚಿವ ಮಾಧುಸ್ವಾಮಿ ಅವರನ್ನು ಭೇಟಿಯಾಗಿ ಬೆಂಬಲ ಸೂಚಿಸುವುದಾಗಿ ಭರವಸೆ ನೀಡಿದ್ದರು. ಇವರ ಬೆನ್ನಲ್ಲೇ ಮತ್ತೊಬ್ಬ ಪಕ್ಷೇತರ ಸದಸ್ಯ ಜಹೀರ್‍ಸಾಬ್ ಅವರು ನಾನು ಜೆಸಿಎಂ ಬೆಂಬಲಿಗನಾಗಿದ್ದು ಅವರು ಜೆಡಿಯುನಲ್ಲಿದ್ದಾಗಲಿಂದಲೂ ಅವರ ಜೊತೆ ಇದ್ದೇನೆ. ಹಾಗಾಗಿ ಪಂಚಾಯ್ತಿ ಅಧ್ಯಕ್ಷರ ಚುನಾವಣೆಯಲ್ಲಿ ಅವರ ಅಭ್ಯರ್ಥಿಗೆ ನನ್ನ ಬೆಂಬಲ ಎಂದೇಳಿ ಜೆಸಿಎಂ ಅವರನ್ನು ಭೇಟಿಯಾಗಿ ಹೇಳಿ ಬಂದಿದ್ದಾರೆ.

      ಇಬ್ಬರೂ ಪಕ್ಷೇತರರು ಬಿಜೆಪಿ ಅಭ್ಯರ್ಥಿ ಬೆಂಬಲಿಸುವುದು ಖಚಿತವಾದ ಬೆನ್ನಲ್ಲೇ ಹುಳಿಯಾರು ಪಂಚಾಯ್ತಿ ಗಾದಿಯನ್ನು ಬಿಜೆಪಿ ಹಿಡಿಯುವುದು ನಿಶ್ವಿತ ಎನ್ನಲಾಗಿತ್ತು. ಪಟ್ಟಣ ಪಂಚಾಯ್ತಿಯ ಮೊದಲ ಚುನಾಯಿತ ಅಧ್ಯಕ್ಷರಾರಾಗುತ್ತಾರೆ ಎನ್ನುವ ಕುತೂಹಲ ಸಾರ್ವಜನಿಕ ವಲಯದಲ್ಲಿ ಮೂಡಿಸಿತ್ತು. ಈ ಕುತುಹಲಕ್ಕೆ ತೆರೆ ಎಳೆಯುವ ದಿನಾಂಕವನ್ನೂ ಏ.29 ನಿರ್ಧರಿಸಲಾಗಿತ್ತು. ಹಾಗಾಗಿ ಎಲ್ಲಾ ಪಪಂ ಸದಸ್ಯರಿಗೆ ಚುನಾವಣಾ ನೋಟಿಸ್ ಸಹ ನೀಡಲಾಗಿತ್ತು.

ಇನ್ನೇನು ಚುನಾವಣೆ ನಡೆದು ಬಿಜೆಪಿ ಅಧಿಕಾರಿ ಹಿಡಿಯುತ್ತದೆ ಎನ್ನುವಷ್ಟರಲ್ಲಿ ಪಕ್ಷೇತರ ಸದಸ್ಯ ಜಹೀರ್ ಸಾಬ್ ದಿಡೀರ್ ಬಿಜೆಪಿ ತೆಕ್ಕೆಯಿಂದ ಕಾಂಗ್ರೆಸ್‍ಜೆಡಿಎಸ್ ಮೈತ್ರಿಕೂಟದ ತೆಕ್ಕೆಗೆ ಜಿಗಿದು ಅಚ್ಚರಿ ಮೂಡಿಸಿದ್ದಾರೆ. ಮಾಜಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು ಅವರೊಂದಿಗೆ ನಡೆದ ಮೈತ್ರಿ ಸಭೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಜೆಡಿಎಸ್ ಅಧಿಕಾರ ಹಿಡಿಯುವ ಆಸೆಗೆ ಜೀವ ತುಂಬಿದ್ದಾರೆ.

      ಜಹೀರ್ ಸಾಬ್ ಸೇರ್ಪಡೆಯಿಂದ ಕಾಂಗ್ರೆಸ್‍ಜೆಡಿಎಸ್ ಮೈತ್ರಿ ಕೂಟದ ಸಂಖ್ಯಾಬಲ 9 ತಕ್ಕೆ ಏರಿದ್ದು ಶಾಸಕರು ಹಾಗೂ ಸಂಸದರೂ ಸೇರಿ ಬಿಜೆಪಿ ಸಂಖ್ಯಾಲವೂ 9 ಆಗಿದೆ. ಹಾಗಾಗಿ ಎರಡೂ ಗುಂಪಿನಲ್ಲೂ ಸಮಾನ ಸಂಖ್ಯಾಬಲವಿದ್ದು ಅಧ್ಯಕ್ಷರು ಯಾರಾಗುತ್ತಾರೆ ಎನ್ನುವ ಕುತೂಹಲ ಕೆರಳಿಸಿದೆ. ಆದರೆ ಕೊರೊನಾ ನೆಪದಲ್ಲಿ ಚುನಾವಣೆ ಮುಂದೂಡುವ ಸಾಧ್ಯತೆಯಿದ್ದು ಒಂದು ವೇಳೆ ಚುನಾವಣೆ ನಡೆದರೆ ಹುಳಿಯಾರು ಪಪಂ ಅಧ್ಯಕ್ಷ ಸ್ಥಾನ ಲಾಟರಿಯಿಂದ ಒಲಿಯಲಿದೆ. ಅಥವಾ ಈ ಹಿಂದೆ ಜೆಡಿಎಸ್ ಮೈತ್ರಿ ಪ್ರಸ್ತಾಪ ಮಾಡಿ ಪಕ್ಷೇತರರು ಬಂದರೂ ಮೈತ್ರಿಗೆ ತಿಲಾಂಜಲಿಯಿಡದೆ ಜೀವಂತವಾಗಿಟ್ಟಿದ್ದ ಸಚಿವರು ಈಗ ಪುನಃ ಮೈತ್ರಿ ಮಾತುಕತೆ ನಡೆಸಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ಕೊಡಿಸುವರೋ ಕಾದು ನೋಡಬೇಕಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap