ಹುಳಿಯಾರು :
ಕಳೆದ ವರ್ಷ ಕೊರೋನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಛಾಯಾಗ್ರಾಹಕರು ಈ ವರ್ಷವೂ ಸಹ ಕೊರೋನಾ ಲಾಕ್‍ಡೌನ್‍ನಿಂದಾಗಿ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಏಪ್ರಿಲ್ ಮತ್ತು ಮೇ ಮಾಹೆ ಛಾಯಾಗ್ರಾಹಕರಿಗೆ ಸುಗ್ಗಿಯ ಕಾಲ ಎಂದರೆ ತಪ್ಪಾಗಲಾರದು. ಬಸವಜಯಂತಿ, ಅಕ್ಷಯ ತೃತೀಯ, ಹೀಗೆ ಸಾಲು ಸಾಲು ಶುಭದಿನಗಳಲ್ಲಿ ವಿವಾಹ ನಿಶ್ಚಯ ಇತ್ಯಾದಿ ಕಾರ್ಯಕ್ರಮಗಳು ಜರುಗುತ್ತವೆ ಜತೆಗೆ ಹಳ್ಳಿಹಳ್ಳಿಗಳಲ್ಲೂ ಜಾತ್ರೆ, ದೇವರ ಉತ್ಸವಗಳೂ ಅದ್ಧೂರಿಯಾಗಿ ನಡೆಯುತ್ತವೆ.
ಹಾಗಾಗಿ ಈ ಎರಡು ತಿಂಗಳುಗಳಲ್ಲಿ ಬಿಡುವಿಲ್ಲದಂತೆ ಕೆಲಸಗಳೂ ದೊರೆಯುತ್ತವೆ. ಆರ್ಥಿಕವಾಗಿಯೂ ಉತ್ತಮಗೊಳ್ಳಲು ಛಾಯಾಗ್ರಹಕರಿಗೆ ಒಳ್ಳೆಯ ಕಾಲ ಇದಾಗಿದೆ ಇಡಿ ವರ್ಷ ಪೂರ್ತಿ ನೆಮ್ಮದಿಯಾಗಿ ಬದುಕು ಸಾಗಿಸಲು ಈ ಅವಧಿಯ ದುಡಿಮೆ ಛಾಯಾಗ್ರಹಕರಿಗೆ ಅತೀ ಮುಖ್ಯವಾಗಿ ಬೇಕಿದೆ ಆದರೆ ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಕೊರೋನಾ ಕಠಿಣ ನಿಯಮ ತೊಡಕಾಗಿದ್ದು ಛಾಯಾಗ್ರಾಹಕರ ಬದುಕಿಗೆ ಪೆಟ್ಟು ನೀಡಿದೆ.
ಮದುವೆಗೆ ಮುಂಚೆ ಪ್ರೀ ವೆಡ್ಡಿಂಗ್ ಶೂಟ್ ಅಂತೇಳಿ ಆಲ್ಪಂಬ್ ಸಾಂಗ್ ರೀತಿ ನವ ವಧುವರರ ವಿಡಿಯೋ ಸಾಂಕ್ ಶೂಟ್ ಮಾಡುವುದು ಸೇರಿದಂತೆ ಮದುವೆಗೆ ವಿಡಿಯೊ, ಸ್ಪಾಟ್ ಮಿಕ್ಸಿಂಗ್, ಹೆಲಿಕ್ಯಾಮ್, ಎಲ್‍ಇಡಿ ವಾಲ್ ಹೀಗೆ ಅನೇಕ ರೀತಿಯ ಆಕರ್ಷಕ ಸೇವೆ ಒದಗಿಸಿ ಒಂದಿಷ್ಟು ದುಡ್ಡು ಮಾಡುತ್ತಿದ್ದರು. ಆದರೆ ಕೊರೋನಾದಿಂದಾಗಿ ಕಲ್ಯಾಣ ಮಂಟಪಗಳಲ್ಲಿ ನಡೆಯಬೇಕಿದ್ದ ವಿವಾಹಗಳು ದೇಗುಲ ಮತ್ತು ಮನೆಗಳಿಗೆ ಸೀಮಿತವಾಗಿವೆ. ಇದರಿಂದ ಛಾಯಾಗ್ರಾಹಕರಿಗೆ ಕೆಲಸ ಸಿಗದೆ ಆರ್ಥಿಕ ಹೊಡೆದ ಬಿದ್ದಿದೆ.
ಕಳೆದ ವರ್ಷವೂ ಸಹ ಛಾಯಾಗ್ರಾಹಕರಿಗೆ ಸುಗ್ಗಿ ಕಾಲ ಎನ್ನಲಾಗುವ ಏಪ್ರಿಲ್, ಮೇ ಮಾಹೆಯಲ್ಲೆ ಲಾಕ್ ಡೌನ್ ಆಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಕಳೆದ ವರ್ಷ ಬಿದ್ದ ಪೆಟ್ಟಿನಿಂದ ಇನ್ನೇನು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವಷ್ಟರಲ್ಲಿ ಮತ್ತೆ ಇದೇ ಕೊರೋನಾ ಲಾಕ್ ಡೌನ್‍ಗೆ ಸಿಕ್ಕಿ ನಲುಗುತ್ತಿದ್ದಾರೆ. ಅಲ್ಲದೆ ಸ್ಟೂಡಿಯೋದಲ್ಲಿ ಪಾಸ್‍ಪೋರ್ಟ್ ಪೊಟೋ ತೆಗೆದು ಒಂದಿಷ್ಟು ಕಾಸು ಮಾಡುತ್ತಿದ್ದರು. ಈಗ ಸ್ಟುಡಿಯೋ ಬಾಗಿಲು ಹಾಕಬೇಕಿರುವುದರಿಂದ ಈ ದುಡಿಮೆಯೂ ಇಲ್ಲದಾಗಿದೆ. ಜತೆಗೆ ಮದುವೆ ಆರ್ಡರ್ ಪಡೆದು ಮಿಕ್ಸಿಂಗ್ ಯುನಿಟ್ ನವರಿಗೆ ಕೊಟ್ಟಿದ್ದ ಅಡ್ವಾನ್ಸ್ ಹಿಂಪಡೆಯಲಾಗದೆ ಎಂದು ತೊಳಲಾಡುವಂತ್ತಾಗಿದೆ.
ಒಟ್ಟಾರೆ ಕೊರೋನಾ ನಿರ್ಬಂಧ ಕೂಲಿಕಾರರು, ವ್ಯಾಪಾರಿಗಳು ಹೀಗೆ ಎಲ್ಲ ವಲಯದಲ್ಲಿ ತೊಡಗಿರುವ ಜನರ ಮೇಲೆಯೂ ದುಷ್ಪರಿಣಾಮ ಬೀರಿದಂತೆ ಛಾಯಾಗ್ರಹಕರ ಮೇಲೂ ಬೀರಿದೆ. ಆದರೆ ಕಳೆದ ವರ್ಷ ಕೆಲ ವಲಯದ ಕಾರ್ಮಿಕರಿಗೆ ಸರ್ಕಾರ ನೆರವಿನ ಹಸ್ತ ಚಾಚಿತ್ತು. ಆದರೆ ಛಾಯಾಗ್ರಾಹಕರನ್ನು ನಿರ್ಲಕ್ಷ್ಯಸಿತ್ತು. ಈ ವರ್ಷವಾದರೂ ಸರ್ಕಾರ ನಮ್ಮತ್ತ ತಿರುಗಿ ನೋಡಿ ಕಷ್ಟಕ್ಕೆ ಸ್ಪಂದಿಸುವುದೆ ಎಂದು ಛಾಯಾಗ್ರಾಹಕರು ಎದುರು ನೋಡುತ್ತಿದ್ದಾರೆ.
ಛಾಯಾಗ್ರಾಹಕರ ಸಂಕಷ್ಟ ನೆರವಾಗಿ :
ಛಾಯಾಗ್ರಾಹಕ ವೃತ್ತಿ ನಂಬಿಕೊಂಡು ಅನೇಕ ಮಂದಿ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾರೆ. ಆದರೆ ಲಾಕ್ ಡಾನ್ ನಿಂದಾಗಿ ಮದುವೆ, ನಾಮಕರಣ ಸೇರಿದಂತೆ ಯಾವುದೆ ಶುಭಕಾರ್ಯಗಳು ನಡೆಯದೆ ಛಾಯಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ವಿವಿಧ ಕ್ಷೇತ್ರದ ಕಾರ್ಮಿಕರುಗಳಿಗೆ ಸರ್ಕಾರ ನೀಡಿದಂತೆ ಕೊರೋನಾ ಪರಿಹಾರ ಧನಸಹಾಯವನ್ನು ಈ ವರ್ಷವಾದರೂ ಛಾಯಾಗ್ರಾಹಕರಿಗೂ ವಿತರಿಸಬೇಕಿದೆ. ಅಲ್ಲದೆ ಛಾಯಾಗ್ರಾಹಕರೂ ಅಸಂಘಟಿತ ಕಾರ್ಮಿಕರಾಗಿದ್ದು, ಸರ್ಕಾರ ನಮ್ಮನ್ನೂ ಕಾರ್ಮಿಕ ಇಲಾಖೆಗೆ ಸೇರ್ಪಡೆ ಮಾಡಿಕೊಂಡು ಇಲಾಖೆಯಲ್ಲಿನ ಯೋಜನೆಗಳನ್ನು ನೀಡಬೇಕು
-ಎ.ಡಿ.ತಾಂಡವಾಚಾರ್, ಗೌರವ ಅಧ್ಯಕ್ಷರು, ಹುಳಿಯಾರು ಹೋಬಳಿ ಛಾಯಾಗ್ರಾಹಕರ ಸಂಘ
ಬಕ್ ಮಾಡಿದ್ದ ಆರ್ಡರ್ ಕೈ ತಪ್ಪಿದೆ :
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 130 ಕ್ಕೂ ಹೆಚ್ಚು ಸ್ಟುಡಿಯೋಗಳು ಇವೆ ಕೆಲವರು ಸ್ಟುಡಿಯೋ ಇಟ್ಟುಕೊಳ್ಳದೆಯೆ ಈ ವೃತ್ತಿ ನಂಬಿ ಬದುಕುತ್ತಿದ್ದಾರೆ. ಎಲ್ಲರೂ ಕನಿಷ್ಟ ಎಂದರೂ ಐದಾರು ಮದುವೆ ಆರ್ಡರ್ ಒಪ್ಪಿಕೊಂಡಿದ್ದರು. ವಿಡಿಯೋ, ಸ್ಪಾಟ್ ಮಿಕ್ಸಿಂಗ್, ಎಲ್‍ಇಡಿ ಟಿವಿ ಬುಕ್ ಮಾಡಿದವರೆಲ್ಲರೂ ಈಗ ಕೊರೋನಾದಿಂದಾಗಿ ಸರಳವಾಗಿ ಮದುವೆ ಮಾಡುತ್ತಿದ್ದು ಪೊಟೋ ಮಾತ್ರ ತೆಗೆದುಕೊಡಿ ಎನ್ನುತ್ತಿದ್ದಾರೆ. ಇದರಿಂದಾಗಿ ಛಾಯಾ ಗ್ರಾಹಕರೆಲ್ಲರಿಗೂ ಕೊರೋನಾ ಪೆಟ್ಟು ಬಿದ್ದಿದೆ. ಹೀಗಾದರೆ ನಮ್ಮ ಬದುಕು ಸಾಗುವುದು ಹೇಗೆ ಎಂಬ ಪ್ರಶ್ನಿ ಎದುರಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ