ತಳ್ಳುವಗಾಡಿಯಲ್ಲಿ ವ್ಯಾಪಾರ ಮಾಡಲು ಮುಖ್ಯಾಧಿಕಾರಿ ಕಿವಿ ಮಾತು

 ಹುಳಿಯಾರು : 

      ಒಂದೇ ಕಡೆ ಕುಳಿತು ವ್ಯಾಪಾರ ಮಾಡುವುದರಿಂದ ಕೊರೋನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ತಳ್ಳುವಗಾಡಿ ಮಾಡಿಕೊಂಡು ಬೀದಿಗಳಲ್ಲಿ ಓಡಾಡುತ್ತಾ ವ್ಯಾಪಾರ ಮಾಡಿ ಎಂದು ಹುಳಿಯಾರು ಪ.ಪಂ. ಮುಖ್ಯಾಧಿಕಾರಿ ಮಂಜುನಾಥ್ ರವರು ವ್ಯಾಪಾರಸ್ಥರಿಗೆ ಕಿವಿಮಾತು ಹೇಳಿದರು.

      ಹುಳಿಯಾರು ಪಟ್ಟಣದ ಶಿಲ್ಪಾಸ್ಟೋರ್‍ಬಳಿ ಸೊಪ್ಪು, ತರಕಾರಿ, ಹೂವು, ಹಣ್ಣುಗಳ ವ್ಯಾಪಾರ ನಡೆಯುತ್ತಿತ್ತು. ಎಂದಿನಂತೆ ಬೆಳಗ್ಗೆ 10 ಗಂಟೆಗೆ ವ್ಯಾಪಾರ ವಹಿವಾಟು ಮುಗಿಸುವ ಸಲುವಾಗಿ ಸೊಪ್ಪಿನ ವ್ಯಾಪಾರಿಯೊಬ್ಬರು ಉಳಿದ ಸೊಪ್ಪನ್ನು ಚೀಲಕ್ಕೆ ತುಂಬುತ್ತಿದ್ದನ್ನು ಗಮನಿಸಿ ಈ ಕಿವಿ ಮಾತು ಹೇಳಿದರು.

      ಹಣ್ಣುಗಳನ್ನು 10-15 ದಿನಗಳ ಕಾಲ ಇಡಬಹುದು ತರಕಾರಿಯನ್ನು ವಾರಗಟ್ಟಲೆ ಇಡಬಹುದು. ಆದರೆ ಸೊಪ್ಪು ಮತ್ತು ಹೂವನ್ನು ಮಾತ್ರ ಬಹಳ ದಿನಗಳ ಕಾಲ ಇಟ್ಟು ವ್ಯಾಪಾರ ಮಾಡಲಾಗುವುದಿಲ್ಲ. ಒಳ್ಳೆಯ ವ್ಯಾಪಾರವಾಗುತ್ತದೆಂದು ನೀವು ಬಂಡವಾಳ ಹಾಕಿ ಇಷ್ಟೊಂದು ಸೊಪ್ಪು ತಂದಿದ್ದೀರಿ ದುರಾದುಷ್ಟವಶ ಅರ್ಧ ಕರ್ಧ ಉಳಿದಿದೆ. ಇದನ್ನು ನಾಳೆ ಮಾರಲು ಬರುವುದಿಲ್ಲ. ಹಾಗಾಗಿ ಒಂದು ತಳ್ಳುವಗಾಡಿ ಮಾಡಿಕೊಂಡು ಸಂಜೆಯವರೆಗೂ ಪಟ್ಟಣದ ಬೀದಿಗಳಲ್ಲಿ ಓಡಾಡುತ್ತ ವ್ಯಾಪಾರ ಮಾಡಿ ಎಂದು ಹೇಳಿದರು.

ದಿನಸಿ ವ್ಯಾಪಾರಕ್ಕೆ 12 ಗಂಟೆಯವರೆವಿಗೆ ಅವಕಾಶ ಕಲ್ಪಿಸಿದೆ. ಹಾಗಾಗಿ ಗ್ರಾಹಕರು ತರಾತುರಿಯಲ್ಲಿ ವ್ಯಾಪಾರ ಮಾಡದೆ ಕೋವಿಡ್ ನಿಯಮ ಪಾಲಿಸಿ ಸಮಾಧಾನವಾಗಿ ವ್ಯಾಪಾರ ಮಾಡಬೇಕು. ಅಂಗಡಿಗಳ ಮುಂದೆ ಹಾಕಿರುವ ಬಣ್ಣದ ಚೌಕದ ಮೇಲೆ ನಿಂತು ವ್ಯಾಪಾರ ಮಾಡಬೇಕು. ವ್ಯಾಪಾರ ಮಾಡುವ ಅಂಗಡಿಗಳ ಮುಂದೆಯೇ ವಾಹನಗಳನ್ನು ನಿಲ್ಲಿಸುವ ಬದಲು ಬಾಗಿಲು ಹಾಕಿರುವ ಅಂಗಡಿಗಳ ಮುಂದೆ ವಾಹನಗಳನ್ನು ನಿಲ್ಲಿಸಿ ಬಂದು ವ್ಯಾಪಾರ ಮಾಡಬೇಕು. ಕಡ್ಡಾಯವಾಗಿ ಎಲ್ಲಾರೂ ಮಾಸ್ಕ್ ಧರಿಸಬೇಕು. ಮನೆಗೆ ತೆರಳಿದ ಮೇಲೆ ಸ್ಯಾನಿಟೈಸರ್ ಬಳಸುವಂತೆ ಗ್ರಾಹಕರಿಗೆ ಸಲಹೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link