ಹುಳಿಯಾರು :
ಹುಳಿಯಾರು ಪಟ್ಟಣ ಪಂಚಾಯ್ತಿಯ ಬಾಲಾಜಿ ಚಿತ್ರಮಂದಿರ ಹಿಂಭಾಗದ ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು, ದಿವ್ಯ ಮೌನವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ರಸ್ತೆ ಮೊದಲು ಮಣ್ಣಿನ ರಸ್ತೆಯಾಗಿತ್ತು. ಇತ್ತೀಚೆಗಷ್ಟೆ ಪಟ್ಟಣ ಪಂಚಾಯ್ತಿಯಿಂದ ಸಿ.ಸಿ ರಸ್ತೆ ಮತ್ತು ರಸ್ತೆಯ ಎರಡೂ ಬದಿಯಲ್ಲಿ ಸಿ.ಸಿ ಚರಂಡಿ ಮಾಡಲಾಯಿತು. ಆದರೆ ಚರಂಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಪೂರ್ತಿ ವ್ಯವಸ್ಥೆ ಮಾಡದೆ ಅರ್ಧಕ್ಕೆ ಕೈ ಬಿಟ್ಟಿದ್ದಾರೆ.
ಚರಂಡಿ ಮಾಡುವಾಗ ತೆಗೆದ ಮಣ್ಣನ್ನು ಬೇರೆಡೆ ಸಾಗಿಸದೆ ಅಲ್ಲಿಯೆ ಬಿಟ್ಟಿರುವುದರಿಂದ ಚರಂಡಿಯೊಳಕ್ಕೆ ಮಣ್ಣು ಬಿದ್ದು ಚರಂಡಿ ಕಟ್ಟಿಕೊಂಡಿದೆ. ಅಲ್ಲದೆ ಕಾಲಕಾಲಕ್ಕೆ ಚರಂಡಿ ಕ್ಲೀನ್ ಮಾಡದೆ ಹಾಗೆಯೇ ಬಿಟ್ಟಿರುವುದರಿಂದ ಕೊಳಚೆ ತ್ಯಾಜ್ಯ ಸಂಗ್ರಹವಾಗಿ ಚರಂಡಿ ಕಟ್ಟಿಕೊಂಡಿದೆ. ಹಾಗಾಗಿ ಮೇಲಿನ ಮನೆಗಳಿಂದ ಹರಿದು ಬರುವ ಕೊಳಚೆ ನೀರು ಕೆಳಗಿನ ಮನೆಗಳ ಮುಂದಿನ ರಸ್ತೆಯಲ್ಲಿ ಹರಿಯುತ್ತಿದೆ.
ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿರುವುದರಿಂದ ಇಲ್ಲಿ ಓಡಾಡುವವರು ಮತ್ತು ಇಲ್ಲಿ ವಾಸ ಮಾಡುವವರು ದುರ್ನಾತ ಕುಡಿಯುವ ಕರ್ಮ ವಾಗಿದೆ. ಅಲ್ಲದೆ ಸೊಳ್ಳೆ, ಹಂದಿ, ನಾಯಿಗಳ ಆಶ್ರಯವಾಗಿದ್ದು ರೋಗ ರುಜಿನಗಳು ಹರಡಲು ಕಾರಣವಾಗಿದೆ. ಮನೆಯ ಮಕ್ಕಳಂತೂ ಮನೆಮುಂದೆ ಆಟವಾಡಲೂ ಸಹ ತೊಂದರೆ ಯಾಗಿದ್ದು. ಅಸಹ್ಯಕರವಾದ ವಾತಾವರಣ ನಿರ್ಮಾಣವಾಗಿದೆ.
ಇನ್ನಾದರೂ ಪಟ್ಟಣ ಪಂಚಾಯ್ತಿ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಕೊಳಚೆ ನೀರು ರಸ್ತೆಗೆ ಹರಿಯದಂತೆ ಕ್ರಮ ಕೈಗೊಂಡು ಇಲ್ಲಿನ ನಿವಾಸಿಗಳು ನೆಮ್ಮದಿಯಿಂದ ವಾಸಮಾಡುವಂತೆಯೂ, ಓಡಾಡುವವರು ಮೂಗು ಮುಚ್ಚಿಕೊಳ್ಳದೆ ಓಡಾಡುವಂತೆಯೂ ಮಾಡುವಂತೆ ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ