ಕುಣಿಗಲ್ : ಕಾಲೇಜು ಶುಭಾರಂಭಕ್ಕಾಗಿ 2020 ದೀಪ ಪ್ರಜ್ವಲನ!!

 ಕುಣಿಗಲ್ : 

     ಕೋವಿಡ್-19ರ ಹಿನ್ನೆಲೆಯಲ್ಲಿ ಕಳೆದ 9 ತಿಂಗಳಿನಿಂದ ಶಾಲಾ ಕಾಲೇಜುಗಳು ತೆರೆದಿಲ್ಲ. ವಿದ್ಯಾರ್ಥಿಗಳ ವ್ಯಾಸಂಗಕುಂಠಿತಗೊಂಡಿದೆ. ಹೀಗಾಗಿ ಕೊರೋನಾ ಮಹಾಮಾರಿಆದಷ್ಟು ಬೇಗ ತೊಲಗಿ ಶಾಲಾ-ಕಾಲೇಜುಗಳು ಬೇಗನೆ ಆರಂಭವಾಗಿ ವಿದ್ಯಾರ್ಥಿಗಳ ಬಾಳಿನಲ್ಲಿ ಜ್ಞಾನದ ಬೆಳಕು ಪ್ರಸರಸಲಿ ಎಂದು 2020 ದೀಪಗಳನ್ನು ಹಚ್ಚುವ ಮೂಲಕ ವಿಶೇಷತೆ ಮೆರೆದ ಘಟನೆ ಪಟ್ಟಣದಲ್ಲಿ ನಡೆಯಿತು.

      ಯಾವುದೇ ಹಬ್ಬ ಹರಿದಿನಗಳು, ಸಾಂಸ್ಕತಿಕ ಕಾರ್ಯಕ್ರಮಗಳು ನಡೆದರೂ ಅತ್ಯಂತ ಶ್ರದ್ಧೆ ಮತ್ತು ಅಷ್ಟೇ ಅಚ್ಚುಕಟ್ಟಾಗಿ ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿರುವ ಪಟ್ಟಣದ ಜ್ಞಾನಭಾರತಿ ಪದವಿ ಪೂರ್ವಕಾಲೇಜಿನ ಪ್ರಾಚಾರ್ಯ ಡಾ||ಕಪನಿಪಾಳ್ಯ ರಮೇಶ್‍ಮತ್ತುಉಪನ್ಯಾಸಕರು ದೀಪಾವಳಿ ಹಬ್ಬದ ದಿನದಂದು ಇಂತಹ ಕೋರಿಕೆಯನ್ನು ದೇವರಲ್ಲಿ ಸಲ್ಲಿಸಿದ್ದಾರೆ. 

      ಪ್ರತಿ ವರ್ಷವೂ ವಿದ್ಯಾರ್ಥಿಗಳು,ಕಾಲೇಜಿನ ಆಡಳಿತ ಮಂಡಳಿ ಮತ್ತು ಉಪನ್ಯಾಸಕರ ಜೊತೆಗೂಡಿ ‘ಕಾಲೇಜಿನ ಹಬ್ಬ’ ಎಂಬಂತೆ ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಆದರೆ, ಈ ವರ್ಷ ಕೊರೋನಾ ಮಹಾಮಾರಿ ಇವರೆಲ್ಲರ ಹರ್ಷವನ್ನು ಕಸಿದುಕೊಂಡಿದೆ.ಇದರಿಂದ ವಿಚಲಿತರಾಗದ ಪ್ರಾಚಾರ್ಯರು ತಮ್ಮ ಎಲ್ಲ ಉಪನ್ಯಾಸಕರು ಮತ್ತು ಸಿಬ್ಬಂದಿಯನ್ನು ಒಟ್ಟುಗೂಡಿಸಿಕೊಂಡು ಕೊಠಡಿಗಳನ್ನು ಮತ್ತು ಮೇಜು ಕುರ್ಚಿಗಳನ್ನುಗಂಜಲದಿಂದ ಸ್ಯಾನಿಟೈಸ್ ಮಾಡಿ ಸ್ವಚ್ಛಗೊಳಿಸಿದರು. ಇದಾದ ಬಳಿಕ ಗಣೇಶ, ಸರಸ್ವತಿ, ಲಕ್ಷ್ಮಿ ದೇವರುಗಳನ್ನು ಪೂಜಿಸಿ ಕಳೆದ 9 ತಿಂಗಳಿನಿಂದ ಶಾಲಾ ಕಾಲೇಜುಗಳಿಗೆ ಕವಿದಿರುವ ಕೊರೋನಾ ಎಂಬ ಕರಿ ನೆರಳಿನಿಂದ ಮುಕ್ತಿ ಸಿಗಲಿ ಎಂದು ಪ್ರಾರ್ಥಿಸಿ 2020 ಮಣ್ಣಿನ ಹಣತೆಗಳಿಗೆ ಎಣ್ಣೆ ಮತ್ತು ಬತ್ತಿಯನ್ನು ಹಾಕಿ ಕಾಲೇಜಿನ ಕಟ್ಟಡದ ಮೇಲಿಟ್ಟು ಕಾಲೇಜನ್ನು ಮೈಸೂರಿನ ಅರಮನೆಯಂತೆ ಕಂಗೊಳಿಸುವ ರೀತಿಯಲ್ಲಿ ದೀಪ ಹಚ್ಚಿ ಬೆಳಗಿಸಿದರು.

      ಇದೇ ಸಂದರ್ಭದಲ್ಲಿ ಮಾತನಾಡಿದ ಡಾ.ಕಪನಿಪಾಳ್ಯ ರಮೇಶ್, ಇಡೀಜಗತ್ತಿಗೆ ಬೆಳಕು ನೀಡುವ ಹಣತೆ ಮತ್ತು ತನಗೆ ಅರಿವೇ ಇಲ್ಲದಂತೆ ಸುಡುವ ಬೆಂಕಿಯನ್ನು ನುಂಗಿ ಉರಿಯುವ ಬತ್ತಿ ತನ್ನ ಕಷ್ಟವನ್ನು ಹೇಳುವುದಿಲ್ಲ. ಮನುಷ್ಯರಾದ ನಾವು ಆಕಸ್ಮಿಕವಾಗಿ ಈ ಜಗತ್ತಿಗೆ ಮಾನವರಾಗಿ ಬಂದಿದ್ದೇವೆ. ಜೀವಿತದ ಕಾಲಾವಧಿಯಲ್ಲಿ ಕಷ್ಟದಲ್ಲಿರುವ ಮಂದಿಗೆ ಸಹಾಯ ಮಾಡಬೇಕು. ಪ್ರಸಕ್ತ ಶೈಕ್ಷಣಿಕ ವರ್ಷ ಇನ್ನೂ ಆರಂಭವೇ ಆಗಿಲ್ಲ. ಇಡೀ ರಾಜ್ಯದ ಹಲವಾರು ಖಾಸಗಿ ಶಾಲಾ ಕಾಲೇಜುಗಳಲ್ಲಿ ದುಡಿಯುತ್ತಿರುವ ಶಿಕ್ಷಕರು ಮತ್ತು ಉಪನ್ಯಾಸಕ ವರ್ಗ ಸಂಬಳವಿಲ್ಲದೆ ಪರಿತಪಿಸುತ್ತಿದ್ದಾರೆ.

     ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಿಂದ ವಂಚಿತರಾಗಿದ್ದಾರೆ. ಕೊರೋನಾ ಹಾವಳಿಯಿಂದ ತತ್ತರಿಸಿರುವ ಖಾಸಗಿ ಶಾಲಾ ಕಾಲೇಜುಗಳ ಉಪನ್ಯಾಸಕರಿಗೆ ಸರ್ಕಾರ ಗೌರವಧನ ನೀಡಬೇಕು.ಅವರ ಕುಟುಂಬಗಳಿಗೆ ಆಸರೆಯಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.ಬೆಳಕಿನ ಹಬ್ಬ ದೀಪಾವಳಿ ಆಚರಣೆಯಿಂದಲಾದರೂ ನಮ್ಮೆಲ್ಲರ ಬದುಕಿನಲ್ಲಿ ಕವಿದಿರುವ ಕೊರೋನಾ ಶೀಘ್ರದಲ್ಲೇ ಮರೆಯಾಗಿ ಎಲ್ಲರ ಬದುಕು ಮೊದಲಿನಂತಾಗಲಿ ಎಂದು ಅವರು ಆಶಿಸಿದರು.

     ಉಪನ್ಯಾಸಕರಾದ ಶಿವಕುಮಾರ್, ಸತೀಶ್, ರವೀಂದ್ರ, ಮಣಿಕಂಠ, ಮರಿಸ್ವಾಮಿ, ಸದಾಶಿವ, ಮುನಿಸ್ವಾಮಿ, ನಾಗರಾಜ್, ಚೈತ್ರ, ರೇಖಾ, ರಮ್ಯ, ಭವ್ಯ, ಶಾಂತಕುಮಾರಿ, ದಿವ್ಯ ಮತ್ತು ಸಿಬ್ಬಂದಿಗಳಾದ ಗಂಗಮ್ಮ, ಲಕ್ಷ್ಮಿ, ಶ್ವೇತ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link