ಹುಳಿಯಾರು:
ಇತ್ತೀಚಿನ ದಿನಗಳಿಂದ ಹುಳಿಯಾರಿನಲ್ಲಿ ಬೀದಿ ನಾಯಿಗಳ ಅವಳಿ ಹೆಚ್ಚಿಗಿದ್ದು ದಾರಿಹೋಕರ ಮೇಲೆ ದಾಳಿ ಮಾಡಿ ಅನೇಕ ಮಂದಿಗೆ ಕಡಿದು ಗಾಯಗೊಳಿಸಿದ ಘಟನೆ ಹುಳಿಯಾರಿನ ಮಾರುತಿ ನಗರದಲ್ಲಿ ಮಾ:23ರಂದು ನಡೆದಿದೆ.
ಇಲ್ಲಿನ ನಿವಾಸಿಗಳಾದ ಬಿ.ಜಿ.ಬಾಬು, ಶರ್ಮಿತ ಸೇರಿದಂತೆ ಅನೇಕರಿಗೆ ನಾಯಿ ದಾಳಿಗೆ ಗಾಯಗೊಂಡವರಾಗಿದ್ದಾರೆ. ಇವರೆಲ್ಲರೂ ಈ ಬೀದಿಯಲ್ಲಿ ನಡೆದುಕೊಂಡು ಹೋಗುವಾಗ ಏಕಾಏಕಿ ನಾಯಿ ಇವರ ಮೇಲೆರಗಿ ಕಚ್ಚಿ ಗಾಯಗೊಳಿಸಿವೆ. ಗಾಯಗೊಂಡವರೆಲ್ಲರೂ ಚಿಕಿತ್ಸೆಗೆ ಹುಳಿಯಾರು ಸರ್ಕಾರಿ ಆಸ್ಪತ್ರೆಗೆ ತೆರಳಿದರಾದರೂ ಆಸ್ಪತ್ರೆಯಲ್ಲಿ ನಾಯಿ ಕಡಿತದ ಇಂಜಕ್ಷನ್ ಇಲ್ಲದೆ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಬಂದಿದ್ದಾರೆ. ಬಿ.ಜಿ.ಬಾಬು ಅವರಿಗಂತೂ ಬೆರಳ ತುದಿಯನ್ನು ಕತ್ತರಿಸುವ ಅನಿವಾರ್ಯತೆ ಸೃಷ್ಠಿಯಾಗಿತ್ತು.
ಹುಳಿಯಾರಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ನಾಯಿಗಳನ್ನು ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದರೂ ಸಹ ಪಪಂ ನಿರ್ಲಕ್ಷ್ಯಿಸಿರುವ ಹಾಗೂ ಹುಳಿಯಾರು ಆಸ್ಪತ್ರೆಯಲ್ಲಿ ನಾಯಿ ಕಡಿತ ಸೇರಿದಂತೆ ವಿಷಜಂತುಗಳ ಕಡಿತಕ್ಕೆ ಔಷಧಿ ದಾಸ್ತಾನು ಇಡುವಂತೆ ಮನವಿ ಮಾಡಿದರೂ ನಿರ್ಲಕ್ಷಿಸಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನುಷ್ಯರನ್ನು ಕಡಿಯುತ್ತಿರುವ ಒಂದು ನಾಯಿಯ ಕುತ್ತಿಗೆಗೆ ಚೈನ್ ಹಾಕಲಾಗಿದೆ. ಮತ್ತೊಂದು ನಾಯಿ ಬಿಳಿ ಮತ್ತು ಸಿಮೆಂಟ್ ಬಣ್ಣವಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇನ್ನಾದರೂ ನಾಯಿಗಳ ಹಾವಳಿಗೆ ಕಡಿವಾಣ ಹಾಕಿ ನೆಮ್ಮದಿಯ ಓಡಾಟಕ್ಕೆ ಅನುವು ಮಾಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
ಬೆನ್ನತ್ತಿ ಬಂದು ಭಯಗೊಳಿಸುತ್ತವೆ :
ರಸ್ತೆಯಲ್ಲಿ ಓಡಾಡುವ ನಾಗರಿಕರು ಹಾಗೂ ವಾಹನ ಸವಾರರನ್ನು ನಾಯಿಗಳು ಹಿಂಡು ಹಿಂಡಾಗಿ ಬೆನ್ನತ್ತುತ್ತವೆ. ಮೇಲೆ ಎಗರುವಂತೆ ಬಂದು ಭಯಗೊಳಿಸುತ್ತಿವೆ. ನಾಯಿಗಳನ್ನು ಕಂಡು ಓಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಪೇಪರ್ ಹಾಕಲು ಹೋಗುವ ನನಗೆ ನಾಯಿಗಳು ನಿತ್ಯ ಅಟ್ಟಿಸಿಕೊಂಡು ಬರುತ್ತವೆ. ಹಾಗಾಗಿ ನಿತ್ಯ ಭಯದಿಂದಲೇ ಪೇಪರ್ ಹಾಕುತ್ತಿದ್ದು ನಾಯಿಗಳಿದ್ದರಂತೂ ಅವು ಹೋಗುವವರೆವಿಗೂ ಆ ಏರಿಯಾಕ್ಕೆ ಪೇಪರ್ ಹಾಕಲು ಹೋಗೋದೇ ಇಲ್ಲ
ಸಂಜು, ಪೇಪರ್ ಹಾಕುವ ಹುಡುಗ
ಮುಖ್ಯಾಧಿಕಾರಿಗಳಿಗೆ ಸ್ಪಂದಿಸುವ ಗುಣವಿಲ್ಲ
ಮನೆ ಆಸುಪಾಸಿನಲ್ಲಿ ನಾಯಿಗಳ ಚಲನವಲನಗಳ ಮೇಲೆ ಪೋಷಕರು ಸದಾ ಕಣ್ಣಿಟ್ಟಿರಲೇಬೇಕು. ಶಾಲಾ ವಾಹನ ಬರುವ ಸ್ಥಳದವರೆಗೂ ಪೋಷಕರೂ ಮಕ್ಕಳನ್ನು ಜೊತೆಯಲ್ಲಿ ಹೋಗಿ ಹತ್ತಿಸಬೇಕಾಗಿದೆ. ರಸ್ತೆಗಳಲ್ಲಿ ನಾಯಿಗಳು ಬೀಡುಬಿಟ್ಟಿದ್ದು ವಾಹನಗಳಿಗೆ ಅಡ್ಡಬಂದು ಸಂಚಾರಕ್ಕೆ ಅಡ್ಡಿ ಮಾಡುವ ಜೊತೆಗೆ ಅಪಘಾತಕ್ಕೂ ಕಾರಣವಾಗುತ್ತಿವೆ. ಹಾಗಾಗಿ ನಾಯಿಗಳನ್ನು ಹಿಡಿಯುವಂತೆ ಮನವಿ ಮಾಡಿದ್ದರೂ ಸಹ ಮುಖ್ಯಾಧಿಕಾರಿಗಳಿಗೆ ಸ್ಪಂಧಿಸುವ ಗುಣವಿಲ್ಲ.
ಮೋಹನ್ ಕುಮಾರ್, ಸ್ಥಳೀಯ ನಿವಾಸಿ
ಪಶು ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ
ಬೀದಿ ನಾಯಿಗಳನ್ನು ಹಿಡಿಸುವುದಕ್ಕೆ ಪ್ರಾಣಿ ದಯಾ ಸಂಘದ ವಿರೋಧವಿದೆ. ಹಾಗಾಗಿ ಕಡಿಯುತ್ತಿರುವ ನಾಯಿಗಳನ್ನು ಗುರುತಿಸಿ ಕೊಟ್ಟರೆ ಅವುಗಳನ್ನು ಮಾತ್ರ ಹಿಡಿಯುವುದಾಗಿ ಪಶು ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಹುಚ್ಚು ಹಿಡಿದಿರುವ ನಾಯಿಗಳನ್ನು ಪತ್ತೆ ಹಚ್ಚಲು ಪಶು ಅಧಿಕಾರಿಗಳ ನೆರವಿಗೆ ನಮ್ಮ ಸಿಬ್ಬಂದಿಗಳನ್ನೂ ಕಳುಹಿಸುವುದಾಗಿ ತಿಳಿಸಿದ್ದೇನೆ. ಅವರು ಹುಚ್ಚುನಾಯಿಗಳನ್ನು ಗುರುತಿಸಿದರೆ ನಾಯಿ ಹಿಡಿಯುವ ನುರಿತ ತಂಡವನ್ನೂ ಕರೆಸಿ ಹಿಡಿಸುತ್ತೇವೆ.