ಮುರ್ಷಿದಾಬಾದ್ ಬಾಬರಿಯನ್ನು ಮುಟ್ಟುವುದು ಯಾರಿಗೂ ಸಾಧ್ಯವಿಲ್ಲ: ಹುಮಾಯೂನ್ ಕಬೀರ್

ಮುರ್ಷಿದಾಬಾದ್: 

    ಮೂರು ವರ್ಷಗಳ ಒಳಗೆ ಮುರ್ಷಿದಾಬಾದ್  ಬಾಬರಿ ಮಸೀದಿ  ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುವುದು. ಇದು ಅಯೋಧ್ಯೆಯಲ್ಲ . ಇಲ್ಲಿನ ಬಾಬರಿ ಮಸೀದಿಯನ್ನು ಮುಟ್ಟುವುದು ಯಾರಿಂದಲೂ ಸಾಧ್ಯವಿಲ್ಲ. ಬಾಬರಿ ಮಸೀದಿ ನಿರ್ಮಾಣಕ್ಕೆ ಸಂಬಂಧಿಸಿ ಯೋಜನೆ, ಹಣಕಾಸು ವ್ಯವಸ್ಥೆಗೆ ಸಂಪೂರ್ಣ ಪ್ಲಾನಿಂಗ್ ಸಿದ್ಧವಾಗಿದೆ ಎಂದು ತೃಣಮೂಲ ಕಾಂಗ್ರೆಸ್‌ನಿಂದ  ಅಮಾನತುಗೊಂಡ ಶಾಸಕ ಹುಮಾಯೂನ್ ಕಬೀರ್  ತಿಳಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಇಲ್ಲಿ ಬಾಬರಿ ಮಸೀದಿ ನಿರ್ಮಾಣವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

   ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬಾಬರಿ ಮಸೀದಿಯನ್ನು ಮೂರು ವರ್ಷಗಳಲ್ಲಿ ನಿರ್ಮಿಸಲಾಗುವುದು. ಯಾವುದೇ ಅಧಿಕಾರ ಅಥವಾ ರಾಜಕೀಯ ಶಕ್ತಿ ಅದನ್ನು ತಡೆಯಲು ಸಾಧ್ಯವಿಲ್ಲ. ಮುಂದಿನ ಫೆಬ್ರವರಿಯಲ್ಲಿ ಇದರ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ. ಇದಕ್ಕಾಗಿ ಈಗಾಗಲೇ ಹಣಕಾಸು ವ್ಯವಸ್ಥೆಯ ಯೋಜನೆ ಸಂಪೂರ್ಣವಾಗಿ ರೂಪಿಸಲಾಗಿದೆ ಎಂದು ತಿಳಿಸಿದರು. 

   ಇದು ಅಯೋಧ್ಯೆಯಲ್ಲ ಮುರ್ಷಿದಾಬಾದ್. ಯಾರೂ ಇಲ್ಲಿ ಬಂದು ಬಾಬರಿ ಮಸೀದಿಯನ್ನು ಮುಟ್ಟುವುದು ಸಾಧ್ಯವಿಲ್ಲ. ಇಲ್ಲಿ ಬಾಬರಿ ಮಸೀದಿ ನಿರ್ಮಾಣ ನಿರ್ಧಾರ ಇಂದು ನಿನ್ನೆಯದಲ್ಲ. 1992ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಂಡು 2019 ರಲ್ಲಿ ಸುಪ್ರೀಂ ಕೋರ್ಟ್ ವಿವಾದಿತ ಸ್ಥಳವನ್ನು ರಾಮ ಮಂದಿರಕ್ಕೆ ಒಪ್ಪಿದ ಕೂಡಲೇ ನಿರ್ಧರಿಸಿದ್ದೆ. ನ್ಯಾಯಾಲಯದ ತೀರ್ಪು ಒಪ್ಪಿಕೊಂಡು ಮಸೀದಿಯನ್ನು ಬೇರೆಡೆ ನಿರ್ಮಿಸಬೇಕು ಎನ್ನುವ ಸಲಹೆ ಕೊಟ್ಟಿದ್ದೆ ಎಂದು ಹೇಳಿದರು.

    ಬಾಬರಿ ಮಸೀದಿಯನ್ನು ಮುರ್ಷಿದಾಬಾದ್‌ನಲ್ಲಿ ನಿರ್ಮಿಸಲಾಗುವುದು ಎಂದು ನಾನು ದೃಢವಾಗಿ ನಿರ್ಧರಿಸಿದ್ದೇನೆ. ಬಾಬರ್ ಜೊತೆಗೆ ನನಗೆ ಯಾವುದೇ ಸಂಬಂಧವಿಲ್ಲ. ಜನರು ಇನ್ನೂ ನೋವು ಅನುಭವಿಸುತ್ತಾರೆ ಎಂಬ ಕಾರಣಕ್ಕಾಗಿ ಅದಕ್ಕೆ ಬಾಬರಿ ಮಸೀದಿ ಎಂದು ಹೆಸರಿತ್ತಿದ್ದೇನೆ. ಚುನಾವಣೆ ವೇಳೆ ‘ಜೈ ಶ್ರೀ ರಾಮ್’ ಘೋಷಣೆ ಮಾಡುವುದು ಸರಿಯಾಗಿದ್ದರೆ ಅಲ್ಲಾಹು ಅಕ್ಬರ್ ಎಂದು ಘೋಷಿಸುವುದು ಕೂಡ ಸರಿ ಎಂದರು. 

   ಮಸೀದಿ ನಿರ್ಮಾಣಕ್ಕಾಗಿ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಹಣ ಸಂಗ್ರಹಿಸಲಾಗಿದೆ. ಈ ಹಣವನ್ನು ತಮ್ಮ ಮನೆಯಲ್ಲೇ ಇರಿಸಿದ್ದೇನೆ. ಬೆಂಬಲಿಗರು ಮತ್ತು ದಾನಿಗಳಿಂದ 20 ಕೋಟಿ ರೂ.ಗಳಿಗೂ ಹೆಚ್ಚು ಹಣ ಬಂದಿದ್ದು, ಇದನ್ನು ಸಂಪೂರ್ಣವಾಗಿ ಮಸೀದಿ ನಿರ್ಮಾಣಕ್ಕೆ ಬಳಸುವುದಾಗಿ ಅವರು ತಿಳಿಸಿದರು.

   ಮಸೀದಿ ನಿರ್ಮಾಣಕ್ಕಾಗಿ 40 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದ್ದು, ದಾಖಲೆಗಳನ್ನು ಮಾಡಲಾಗುತ್ತಿದೆ. ಮೂರು ವರ್ಷಗಳಲ್ಲಿ ಮಸೀದಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಪ್ರತಿ ಶುಕ್ರವಾರ ಇಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಲಕ್ಷಾಂತರ ಇಟ್ಟಿಗೆಗಳು ಈಗಾಗಲೇ ಬಂದಿವೆ ಎಂದು ಕಬೀರ್ ಹೇಳಿದರು. 

   ನಾನು ಸ್ವಯಂ ಪ್ರೇರಣೆಯಿಂದ ಪಕ್ಷ ತೊರೆದಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪ ಮಾಡಿ ನನ್ನನ್ನು ಹೊರಕ್ಕೆ ಹಾಕಿದ್ದಾರೆ. ಹಿಂದಿನ ಮಮತಾ ಬ್ಯಾನರ್ಜಿ ಮತ್ತು ಈಗಿನ ಮಮತಾ ಬ್ಯಾನರ್ಜಿ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಮೊದಲು ಅವರು ಎಲ್ಲರ ಮಾತುಗಳನ್ನು ಕೇಳುತ್ತಿದ್ದರು, ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಿದ್ದರು. ಆದರೆ ಈಗ ಅವರು ಸಾರ್ವಜನಿಕರಿಂದ ದೂರವಾಗಿದ್ದಾರೆ. ಪಕ್ಷದಿಂದ ಹೊರಹಾಕುವ ಮೊದಲು ಅವರು ನನ್ನ ಮಾತು ಕೂಡ ಕೇಳಲಿಲ್ಲ ಎಂದು ದೂರಿದರು.

Recent Articles

spot_img

Related Stories

Share via
Copy link