ಬೆಂಗಳೂರು:
ಮಾ.10- ಇನ್ನು ಮುಂದೆ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಇಲ್ಲವೆ ವಾಹನ ಕಳವು ಮಾಡಿ ಪರಾರಿಯಾಗಲು ಯತ್ನಿಸಿದರೆ ಪೊಲೀಸರಿಗೆ ಸಿಕ್ಕಿಬೀಳುವುದು ಗ್ಯಾರಂಟಿ.
ಯಾಕೆ ಅಂತೀರಾ? ಡಿಜಿಟಲ್ ಯುಗಕ್ಕೆ ಅನುಗುಣವಾಗಿ ತಮ್ಮ ಕಾರ್ಯಶೈಲಿಯನ್ನು ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಬದಲಿಸಿ ಕೊಂಡಿರುವ ನಗರ ಸಂಚಾರಿ ಪೊಲೀಸರು ಕ್ಷಣಾರ್ಧದಲ್ಲಿ ಕಳುವಾದ ವಾಹನಗಳನ್ನು ಹಾಗೂ ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳನ್ನು ಪತ್ತೆಹಚ್ಚಲು ಸಹಕಾರಿಯಾಗುವಂತಹ ಆಟೋಮೆಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾ (ಎಎನ್‍ಪಿಆರ್)ಗಳ ಅಳವಡಿಕೆಗೆ ಮುಂದಾಗಿದ್ದಾರೆ.
ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಹಾಗೂ ವಾಹನ ಕಳ್ಳರನ್ನು ಪತ್ತೆಹಚ್ಚಲು ಪ್ರಮುಖ 20 ಪ್ರದೇಶಗಳಲ್ಲಿ ಎಎನ್‍ಪಿಆರ್ ಕ್ಯಾಮೆರಾಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್.ರವಿಕಾಂತೇಗೌಡ ಅವರು ಈ ಸಂಜೆಗೆ ತಿಳಿಸಿದ್ದಾರೆ.
ಈಗಾಗಲೇ 20 ಪೊಲೀಸ್ ಠಾಣೆಗಳಿಗೆ ಎಎನ್‍ಪಿಆರ್ ಕ್ಯಾಮೆರಾಗಳನ್ನು ನೀಡಲಾಗಿದ್ದು, ಅವುಗಳ ಮೂಲಕ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರನ್ನು ನಕಲಿ ನಂಬರ್ ಪ್ಲೇಟ್ ಹಾವಳಿ ತಪ್ಪಿಸಲು ಹಾಗೂ ಕಳ್ಳತನ ವಾಹನಗಳನ್ನು ಕ್ಷಣಾರ್ಧದಲ್ಲಿ ಪತ್ತೆಹಚ್ಚುವ ಕಾರ್ಯ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಜನಸಂದಣಿ ಹೆಚ್ಚಿರುವ ರಾಜಾಜಿನಗರ, ಜಯನಗರ, ಸದಾಶಿವನಗರ, ಮಾಗಡಿ ರಸ್ತೆ, ಆರ್‍ಟಿ ನಗರ ಹಾಗೂ ದೇವನಹಳ್ಳಿ ಸೇರಿದಂತೆ 20 ಪೊಲೀಸ್ ಠಾಣೆಗಳಿಗೆ ಈ ಅತ್ಯಾಧುನಿಕ ಕ್ಯಾಮೆರಾಗಳನ್ನು ನೀಡಲಾಗಿದೆ.
ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ವಾಹನ ಸಂದಣಿ ಕಂಡುಬರುವ ಪ್ರದೇಶಗಳಲ್ಲಿ ಸ್ಟ್ಯಾಂಡ್ ಬಳಕೆ ಮಾಡಿ ಎಎನ್‍ಪಿಆರ್ ಕ್ಯಾಮೆರಾ ಅಳವಡಿಸಬಹುದಾಗಿದೆ. ಅವಶ್ಯಕತೆಯಿದ್ದರೆ ಈ ಕ್ಯಾಮೆರಾಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಕಡೆಗೆ ಸುಲಭವಾಗಿ ಸಾಗಿಸಬಹುದಾಗಿದೆ.
ಈಗಾಗಲೇ 20 ಪೊಲೀಸ್ ಠಾಣೆಗಳಿಗೆ ಎಎನ್‍ಪಿಆರ್ ಕ್ಯಾಮೆರಾಗಳನ್ನು ನೀಡಲಾಗಿದ್ದು, ಮತ್ತೆ 100 ಕ್ಯಾಮೆರಾಗಳಿಗೆ ಬೇಡಿಕೆ ಸಲ್ಲಿಸಿದ್ದೇವೆ. 100 ಕ್ಯಾಮೆರಾಗಳು ನಮ್ಮ ಕೈ ಸೇರಿದ ನಂತರ ಅತಿ ಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶಗಳಲ್ಲಿ ಈ ಕ್ಯಾಮೆರಾಗಳನ್ನು ಬಳಕೆ ಮಾಡಿಕೊಳ್ಳ ಲಾಗುವುದು ಎಂದು ರವಿಕಾಂತೇಗೌಡ ಅವರು ತಿಳಿಸಿದರು.
ಈ ಕ್ಯಾಮೆರಾಗಳನ್ನು ಕೇಂದ್ರ ವಾಣಿಜ್ಯ ಪ್ರದೇಶ ಹಾಗೂ ಜನಸಂದಣಿ ಇರುವ ಪ್ರದೇಶಗಳಲ್ಲಿ ವಾಹನಗಳ ನಂಬರ್ ಪ್ಲೇಟ್‍ಗಳನ್ನು ಸೆರೆಹಿಡಿಯುವಂತೆ ಇಡಲಾಗುತ್ತದೆ. ಇದರಿಂದ ಹಲವು ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ವಾಹನಗಳನ್ನು ಪತ್ತೆಹಚ್ಚಬಹುದಾಗಿದೆ.
ಕಳ್ಳತನವಾದ ವಾಹನಗಳ ದಾಖಲಾತಿ ಪೊಲೀಸರ ಬಳಿ ಇರುವುದರಿಂದ ಎಎನ್‍ಪಿಆರ್ ಕ್ಯಾಮೆರಾಗಳ ಮೂಲಕ ನಗರದಲ್ಲಿ ಸಂಚರಿಸುವ ವಾಹನಗಳ ನಂಬರ್ ಪ್ಲೇಟ್‍ಗಳನ್ನು ಸೆರೆಹಿಡಿದು ಕಳ್ಳತನವಾಗಿರುವ ವಾಹನಗಳು ಯಾವುವು ಎಂಬುದನ್ನು ಪತ್ತೆಹಚ್ಚುವಲ್ಲಿ ಈ ಕ್ಯಾಮೆರಾಗಳು ಸಹಕಾರಿಯಾಗುತ್ತಿವೆ.
ಕ್ಯಾಮೆರಾಗಳ ಮೂಲಕ ಅತಿ ಹೆಚ್ಚು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನಗಳನ್ನು ತಡೆದು ಪರಿಶೀಲಿಸಲಾಗುವುದು. ಒಂದು ವೇಳೆ ನಿಯಮ ಉಲ್ಲಂಘಿಸುವ ವಾಹನಗಳು ಕದ್ದ ವೆಹಿಕಲ್‍ಗಳಾಗಿದ್ದರೆ ಕಳ್ಳರು ಪೊಲೀಸರಿಗೆ ಸುಲಭವಾಗಿ ಸಿಕ್ಕಿಬೀಳಲಿದ್ದಾರೆ. ನಗರದಲ್ಲಿ ಕಳ್ಳತನ ಮಾಡಲು ಕಳ್ಳರು ಕದ್ದ ವಾಹನಗಳನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಸಂಚಾರಿ ಪೊಲೀಸರು ಎಎನ್‍ಪಿಆರ್ ಕ್ಯಾಮೆರಾ ಬಳಕೆಗೆ ಮುಂದಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
