ಹೈದರಾಬಾದ್:
ಇಡೀ ದೇಶದ ನಿದ್ದೆ ಕೆಡಿಸಿದ್ದ ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹೈದರಾಬಾದ್ ಮೂಲದ ಉದ್ಯಮಿ ಸೌತ್ ಗ್ರೂಪ್ ನ ಮುಂಚೂಣಿ ಅಧಿಕಾರಿ ಅರುಣ್ ರಾಮಚಂದ್ರ ಪಿಳ್ಳೈ ಅವರನ್ನು ಬಂಧಿಸಿದೆ. ಈ ಬಂದನದಿಂದ ಇವರಿಗೆ ಸಂಬಂಧಿಸಿದವರಿಗೆ ಆತಂಕ ಶುರುವಾಗಿದೆ.
ಹಗರಣ ಭುಗಿಲೆದ್ದ ನಂತರ ರದ್ದುಪಡಿಸಲಾದ ಪರಿಷ್ಕೃತ ದೆಹಲಿ ಮದ್ಯ ನೀತಿಯ ಅಡಿಯಲ್ಲಿ ಅರುಣ್ ಪಿಳ್ಳೈ ಅವರು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಮತ್ತು ಬಿಆರ್‌ಎಸ್ ವಿಧಾನ ಪರಿಷತ್ ಸದಸ್ಯೆ ಕೆ ಕವಿತಾ ಅವರ ಪರವಾಗಿ ಅಬಕಾರಿ ಟೆಂಡರ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಇಡಿ ಆರೋಪಿಸಿದೆ.
ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಪಿಳ್ಳೈ ಬಂಧನ ಬಿಆರ್ ಎಸ್ ಪಕ್ಷಕ್ಕೆ ಆಘಾತವನ್ನುಂಟು ಮಾಡಿದೆ. ಈ ಪ್ರಕರಣದಲ್ಲಿ ರಾಮಚಂದ್ರ ಪಿಳ್ಳೈ ಕವಿತಾ ಅವರ ಮುಂದಾಳು ಆಗಿದ್ದರು ಎಂದು ಇಡಿ ವಿವರಿಸಿದೆ. ಪಿಳ್ಳೈ ಅವರನ್ನು ಇಡಿ ಮತ್ತು ಬುಚ್ಚಿ ಬಾಬು ಅವರನ್ನು ಸಿಬಿಐ ಬಂಧಿಸಿರುವುದು (ಷರತ್ತುಬದ್ಧ ಜಾಮೀನು ಪಡೆದವರು) ಮುಂದೇನು ಎಂದು ಬಿಆರ್‌ಎಸ್ ಕಾರ್ಯಕರ್ತರನ್ನು ಆತಂಕಕ್ಕೀಡು ಮಾಡಿದೆ.








