ಪುಣೆ:
ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ತಮ್ಮ ಖಾಸಗಿ ಆಡಿ ಕಾರಿಗೆ ಸೈರನ್ ಹಾಗೂ ಸರ್ಕಾರಿ ಫಲಕ ಅಳವಡಿಸಿರುವುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನಲ್ಲೇ ಅವರನ್ನು ಅಧಿಕಾರ ದುರುಪಯೋಗದ ಆರೋಪದ ಮೇಲೆ ಪುಣೆಯಿಂದ ವಾಶಿಮ್‌ಗೆ ವರ್ಗಾವಣೆ ಮಾಡಲಾಗಿದೆ.
ಪೂಜಾ ಖೇಡ್ಕರ್ ಅವರು ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿದ್ದ ಕಾರಣ ಅವರಿಗೆ ಸರ್ಕಾರದಿಂದ ವಾಹನ ಸೌಲಭ್ಯ ನೀಡಿಲ್ಲ. ಆದರೆ ಅವರು ತಮ್ಮ ಖಾಸಗಿ ಆಡಿ ಕಾರಿಗೆ ಕೆಂಪು- ನೀಲಿ ಬೀಕನ್ ಲೈಟ್ ಮತ್ತು ವಿಐಪಿ ನಂಬರ್ ಪ್ಲೇಟ್ ಅಳವಡಿಸಿದ್ದು, ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಪುಣೆ ಪೊಲೀಸರು ತಿಳಿಸಿದ್ದಾರೆ.
ಖೇಡ್ಕರ್ ಅವರು ಬಳಸುತ್ತಿದ್ದ ಆಡಿ ಕಾರನ್ನು ಖಾಸಗಿ ಕಂಪನಿಯೊಂದರ ಹೆಸರಿನಲ್ಲಿ ನೋಂದಾಯಿಸಲಾಗಿದ್ದು, ಈ ಹಿಂದೆ ವಾಹನದ ವಿರುದ್ಧ ಚಲನ್‌ಗಳನ್ನು ನೀಡಲಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
32 ವರ್ಷದ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಅವರು ಈ ಹಿಂದೆ ಪ್ರತ್ಯೇಕ ಕ್ಯಾಬಿನ್, ವಾಹನ ಮತ್ತು ಸಿಬ್ಬಂದಿ ನೀಡಬೇಕು ಎಂಬ ಬೇಡಿಕೆಯಿಂದ ವಿವಾದ ಹುಟ್ಟುಹಾಕಿದ್ದರು. ಇದೀಗ ತರಬೇತಿ ಪೂರ್ಣಗೊಳ್ಳುವ ಮೊದಲು ಪುಣೆಯಿಂದ ವಿದರ್ಭ ಪ್ರದೇಶದ ವಾಶಿಮ್ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ.ಇಂದು ವಾಶಿಮ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯಕ ಕಲೆಕ್ಟರ್ ಆಗಿ ಪೂಜಾ ಅಧಿಕಾರ ವಹಿಸಿಕೊಂಡರು.
ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಪೂಜಾ ಖೇಡ್ಕರ್ ಅವರು ನಕಲಿ ಅಂಗವೈಕಲ್ಯ ಮತ್ತು ಇತರೆ ಹಿಂದುಳಿದ ವರ್ಗದ(ಒಬಿಸಿ) ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ ಎಂಬ ಆರೋಪವೂ ಇದೆ.ಪುಣೆ ಪೊಲೀಸರ ತಂಡ ಗುರುವಾರ ಪುಣೆಯ ಪಾಶನ್ ಪ್ರದೇಶದಲ್ಲಿನ ಖೇಡ್ಕರ್ ಅವರ ಬಂಗಲೆಗೆ ತೆರಳಿ, ಬೀಕನ್ ಮತ್ತು ವಿಐಪಿ ನಂಬರ್ ಉಲ್ಲಂಘನೆಯ ಕುರಿತು ಆಡಿ ಕಾರನ್ನು ಪರಿಶೀಲಿಸಲು ಹೋದಾಗ, ಬಂಗಲೆಯ ಗೇಟ್ ಬೀಗ ಹಾಕಿರುವುದು ಕಂಡುಬಂದಿದೆ.
ನಂತರ ಮಾತನಾಡಿದ ಪುಣೆಯ ಹಿರಿಯ ಪೊಲೀಸ್ ಅಧಿಕಾರಿ, “ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಆಡಿ ಕಾರಿಗೆ ಸಂಬಂಧಿಸಿದಂತೆ ನಿಯಮಗಳನ್ನು ಉಲ್ಲಂಘಿಸಿದ್ದರೆ ಕ್ರಮ ಕೈಗೊಳ್ಳಲಾಗುವುದು. ಖೇಡ್ಕರ್ ಅವರು ಬಳಸುತ್ತಿದ್ದ ಕಾರು ಖಾಸಗಿ ಕಂಪನಿಯ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಹೇಳಿದ್ದಾರೆ.